ಚಾಮರಾಜನಗರ: ನಗರದ ತುಂಬೆಲ್ಲ ಗಜಮುಖನ ಆರಾಧನೆ ನಡೆಯುತ್ತಿದ್ದು, ಪ್ರತಿವರ್ಷದಂತೆ ಈ ಬಾರಿಯೂ ನಗರದ ರಥಬೀದಿಯಲ್ಲಿ ವಿದ್ಯಾಗಣಪತಿ ಮಂಡಳಿಯಿಂದ ಗಣಪತಿ ಪ್ರತಿಷ್ಠಾಪಿಸಲಾಗಿದೆ.
ರಾಮಸಮುದ್ರದಲ್ಲಿ ತಯಾರಾಗಿರುವ ರಾಮನ ಭಂಗಿಯಲ್ಲಿ ನಿಂತಿರುವ ಗಣಪನ ಮೂರ್ತಿ ಆಕರ್ಷಕವಾಗಿದ್ದು ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಶನಿವಾರ ಬೆಳಿಗ್ಗೆ 11.40ಕ್ಕೆ ಗಣಪತಿಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರತಿಷ್ಠಾಪಿಸಲಾಯಿತು.
ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ‘ಶ್ರೀವಿದ್ಯಾಗಣಪತಿ ಮಂಡಳಿಯಿಂದ ಆಯೋಜಿಸಿರುವ ಗಣೇಶಮೂರ್ತಿ ಪ್ರತಿಷ್ಠಾಪನಾ ಪೂಜಾ ಕಾರ್ಯಕ್ರಮ ಹಲವು ವರ್ಷಗಳಿಂದ ಸೌಹಾರ್ದಯುತವಾಗಿ ನಡೆದುಕೊಂಡು ಬಂದಿದೆ. ಈ ವರ್ಷವೂ ವಿಜೃಂಭಣೆಯಿಂದ ಭಕ್ತಿ ಪೂರ್ವಕವಾಗಿ ನಡೆಯಲಿ’ ಎಂದು ಆಶಿಸಿದರು.
ವಿದ್ಯಾಗಣಪತಿ ಮಂಡಳಿ ಅಧ್ಯಕ್ಷ ಸುಂದರರಾಜ್ ಮಾತನಾಡಿ, ‘ಗೌರಿ-ಗಣೇಶ ಹಬ್ಬ ನಾಡಿನ ಸಂಸ್ಕೃತಿ, ಭಾವೈಕ್ಯತೆ ಪ್ರತೀಕವಾಗಿದ್ದು, ವಿದ್ಯಾ ಗಣಪತಿ ಮಂಡಳಿ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ನಗರದ ಎಲ್ಲ ಕೋಮುಗಳ ಮುಖಂಡರ ಸಹಕಾರದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸಲಾಗಿದೆ. 7 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. 27 ದಿನಗಳವರೆಗೆ ಪೂಜೆ ಸಲ್ಲಿಸಿ ಗಣೇಶಮೂರ್ತಿ ವಿಸರ್ಜನೆಗೆ ದಿನ ನಿಗದಿ ಮಾಡಲಾಗುವುದು’ ಎಂದರು.
ಪೂಜಾ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಎಸ್‌ಪಿ ಬಿ.ಟಿ. ಕವಿತಾ, ಮುಖಂಡ ಎಂ. ರಾಮಚಂದ್ರ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮೂಡ್ಲಪುರ ನಂದೀಶ್, ನಗರಸಭಾ ಮಾಜಿ ಅಧ್ಯಕ್ಷ ಸಿ.ಎಸ್.ಸುರೇಶ್ ನಾಯಕ, ಸದಸ್ಯ ಸುದರ್ಶನ್ ಗೌಡ, ಮಾಜಿ ಸದಸ್ಯ ಗಣೇಶ ದೀಕ್ಷಿತ್, ಮಂಜುನಾಥ್ ಗೌಡ, ಬಾಲಸುಬ್ರಹ್ಮಣ್ಯ, ನಿಜಗುಣರಾಜು, ಮಂಡಳಿಯ ಪ್ರಧಾನ ಕಾರ್ಯದರ್ಶಿ ವಿರಾಟ್ ಶಿವು, ಮಹೇಶ್, ಕಾರ್ಯಾಧ್ಯಕ್ಷ ಶಿವಣ್ಣ, ಬುಲೆಟ್ ಚಂದ್ರು, ಪಿ.ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಪ್ರವೀಣ್, ಬಂಗಾರನಾಯಕ ಹಾಗೂ ಮುಸ್ಲಿಂ ಧಾರ್ಮಿಕ ಮುಖಂಡರು ಇದ್ದರು.
ನಗರದ ಹಲವು ಕಡೆಗಳಲ್ಲಿ ಪೆಂಡಾಲ್ ನಿರ್ಮಿಸಿ ಗಣಪತಿ ಪ್ರತಿಷ್ಠಾಪಿಸಲಾಗಿದ್ದು, ಪ್ರತಿದಿನ ವಿಶೇಷ ಪೂಜೆಗಳು ನಡೆಯುತ್ತಿವೆ. ಪ್ರಸಾದ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪಥ ಸಂಚಲನ:
ಗಣೇಶ ಹಬ್ಬದ ಸಂದರ್ಭ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯಿಂದ ಪಥ ಸಂಚಲನ ನಡೆಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಪೊಲೀಸರು ಸಾರ್ವಜನಿಕರಿಗೆ ಭದ್ರತೆಯ ಅಭಯ ನೀಡಿದರು. ಎಸ್‌ಪಿ ಡಾ.ಬಿ.ಟಿ.ಕವಿತಾ ನೇತೃತ್ವ ವಹಿಸಿದ್ದರು.
ಗಣೇಶೋತ್ಸವ ಹಿನ್ನೆಲೆಯಲ್ಲಿ ಭಾನುವಾರ ಪೊಲೀಸ್ ಇಲಾಖೆ ವತಿಯಿಂದ ನಗರದಲ್ಲಿ ಪಥ ಸಂಚಲನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.