ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಸೊಗಡಿನ ಹಾಡುಗಾರ ಶಿವಕುಮಾರ್

ಗುರು ಪರಂಪರೆಯಲ್ಲಿ ಅರಳುವ ಕಾವ್ಯಧಾರೆ 'ಜಾನಪದ ಕಥೆ'
Last Updated 11 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಯಳಂದೂರು:'ನಂಜನಗೂಡು ಶಿವನೇ, ಜಂಗುಮರ ಪಟ್ಟಣ, ಅದೂ ಕೈಲಾಸವಂತೆ...' ಎಂಬ ಜನಪದ ಹಾಡು ಅನುರಣಿಸುತ್ತಿದ್ದರೆ ಕುಳಿತಲ್ಲೇ ಪವಡಿಸಬೇಕು ಅನಿಸುತ್ತದೆ. ರಂಗಯ್ಯನನ್ನು ಧ್ಯಾನಿಸುವುದೇ ತಡ, ‘ತಂದಾನ ತಂದಾನ ಗೋವಿಂದಾನೇ.. 'ತಂದಾನ, ದಾಸನ ನಂಬಿದವರಿಗೇ ಪಂಗನಾಮ...’ಸಂಗೀತಕ್ಕೆ ಕಿವಿ ತುಂಬಿಕೊಳ್ಳುತ್ತದೆ. 'ಪಾಪಿಗುಟ್ಟಿದ ಮಕ್ಕ ಪರದೇಶಿ ಆದ್ವು. ಸುವಾ ಬಾ ಚನ್ನಾ...’ ನೀಲವೇಣಿ ಕಥೆ ಬಿಚ್ಚಿಕೊಳ್ಳುತ್ತದೆ.

– ಜಾನಪದ ಕಲಾವಿದ ಎಂ.ಶಿವಕುಮಾರ್ ಅವರು ಹಾಡುಗಳನ್ನು ಹಾಡುತ್ತಿದ್ದರೆ ಗಾನ ಸಾಗರದಲ್ಲಿ ತೇಲಿದ ಅನುಭವವಾಗುತ್ತದೆ.

ತಾಲ್ಲೂಕಿನ ಆಲ್ಕೆರೆ-ಅಗ್ರಹಾರದ ಶಿವಕುಮಾರ್ ಪಿಯುಸಿ ವರೆಗೆ ಓದಿದ್ದಾರೆ. ಅಪ್ಪನಿಂದ ಬಳುವಳಿಯಾಗಿ ಬಂದ ಸಂಗೀತ ಸಂಸರ್ಗ ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಳ್ಳಲು ವರವಾಗಿದೆ. ಶಹನಾಯಿ ವಾದನದ ಹುಚ್ಚು, ರೇಡಿಯೊದಲ್ಲಿ ಮೂಡಿ ಬರುವ ಕಥೆಗಳ ವೈವಿಧ್ಯತೆ, ಊರೂರು ತಿರುಗುತ್ತ ಹಾಡುತ್ತ ಬರುವ ಅನಕ್ಷರಸ್ಥರ ನುಡಿ ಸಾಣಿಕೆಗಳ ಭಾವಗಳು ಇವರಲ್ಲಿ ಏಕೀಕರಿಸಿದೆ. ಗ್ರಾಮೀಣ ಪರಿಸರದಲ್ಲಿ ದೈವವನ್ನೇ ಗುರುವೆಂದು ಧ್ಯಾನಿಸುವ ಪರಂಪರೆ ಸಹಜವಾಗಿ ಒಲಿದು ಬಂದಿದೆ.

‘ಮನೆಯ ಮುಂದೆ ಭಿಕ್ಷಕ್ಕೆ ಬಂದವರೂ ಅಪಾರ ಪಾಂಡಿತ್ಯದಿಂದ ಹಾಡುತ್ತಿದ್ದರು. ದೇವ ಲೀಲೆಗಳನ್ನು ಹಾಡಿಗೆ ತಲೆದೂಗುವ ಭಕ್ತಿ ಸೇರಿತ್ತು. ಇವರು ನುಡಿಸುವ ವಾದ್ಯ, ತಮಟೆ, ತಂಬೂರಿ ನಾದ ಹೃದಯ ಮುಟ್ಟುವ ಝೇಂಕಾರ ಆಗಿತ್ತು. ಅವರ ಹಿಂದೆ ಊರೂರು ಸುತ್ತುತ್ತಾ ಸಣ್ಣಸಣ್ಣ ಪದಗಳನ್ನು ತಲೆಯಲ್ಲಿ ತುಂಬಿಕೊಳ್ಳುತ್ತ, ಅನುಸಂಧಾನ ಮಾಡಿಕೊಳ್ಳುತ್ತಿದ್ದೆವು. ಶಾಲೆ ಕಾರ್ಯಕ್ರಮಗಳಲ್ಲಿ ನಮ್ಮ ಹಾಡಿನಿಂದಲೇ ಪ್ರಾರ್ಥನೆ ಆಗುತ್ತಿತ್ತು. ಇದು ಮುಂದೆ ದೇಶ ಸುತ್ತುವ ಅವಕಾಶ ಕಲ್ಪಿಸಿತು' ಎನ್ನುತ್ತಾರೆ ಕುಮಾರ್.

ಕಲಾವಿದನ ಕಾವ್ಯಲೋಕ:ತಂದೆ ಮಹದೇವಯ್ಯ ನುಡಿಸುತ್ತಿದ್ದ ಶಹನಾಯಿಯನ್ನು ಸ್ಪರ್ಶಿಸಿ ಪುಳಕಗೊಳ್ಳುತ್ತಿದ್ದ ಬಾಲಕ ಎಂ. ಶಿವಕುಮಾರ್ ನಾಡಿನ ಜಾನಪದ ಕಾವ್ಯಗಳನ್ನು ದೇಶಾದ್ಯಂತ ಪಸರಿಸಿದ್ದಾರೆ. ದೆಹಲಿ, ಮಹಾರಾಷ್ಟ್ರ, ತಮಿಳುನಾಡುಗಳಲ್ಲಿಯೂ ಕಥೆ ಕಾವ್ಯಗಳ ಕುಸುಮ ಪಸರಿಸಿದ್ದಾರೆ.

ಸಿದ್ಧಪ್ಪಾಜಿ ಪವಾಡ, ಮೈದಾಳರಾಮ, ನಂಜುಂಡೇಶ್ವರ, ರಂಗಯ್ಯ, ಮಾದಯ್ಯರ ಕಥಾವಳಿಗಳನ್ನು ಇವರ ಧ್ಯನಿಯಲ್ಲಿ ಆಲಿಸಿದರೆ, ಸಂತರ ಸ್ವರ್ಗ ಸೃಷ್ಟಿಯಾಗುತ್ತದೆ. ತತ್ವ ಪದಗಳಲ್ಲಿ ಅಡಗಿದ ಮೌಲ್ಯಗಳ ಗಂಟು ಬಿಚ್ಚಿಕೊಳ್ಳುತ್ತದೆ. ಮೈಮನ ಅರಳುತ್ತದೆ. ಕಥೆ ಪ್ರಸ್ತುತಪಡಿಸುವಾಗ ಸಹ ಕಲಾವಿದರು ತಂಬೂರಿ ಮೀಟುತ್ತ, ತಾಳ ಹಾಕುತ್ತ, ಘಟಂ ನುಡಿಸುತ್ತಿದ್ದರೆ ಕೇಳುಗನಿಗೆ ದೈವ ಕೃಪೆಯ ಸಾಕಾರ ಆಗುತ್ತದೆ!

ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದೆಹಲಿ ಕರ್ನಾಟಕ ಸಂಘಗಳ ಪ್ರಶಸ್ತಿ, ಜಿಲ್ಲಾ ಯುವ ಪ್ರಶಸ್ತಿ, ಬೆಳಗಾವಿಯ ದಲಿತ ಸಾಹಿತ್ಯ ಸಮ್ಮೇಳನಗಳಲ್ಲಿ ಇವರನ್ನು ಗುರುತಿಸಿ ಗೌರವಿಸಲಾಗಿದೆ.

‘ಗುರುಪರಂಪರೆ ಮುಂದುವರಿಸುವ ವ್ರತ’

ಮಳವಳ್ಳಿ ಮಹದೇವಸ್ವಾಮಿ ಅವರಲ್ಲಿ ದಶಕಗಳ ಕಾಲ ಶಿಷ್ಯತ್ವ ಸ್ವೀಕರಿಸಿದ್ದೇನೆ. ಗುರು ಪರಂಪರೆ ಮುಂದುವರಿಸುವ ವ್ರತ ತೊಟ್ಟಿದ್ದೇನೆ. ಮುಂದಿನ ಜನಾಂಗಕ್ಕೂ ನಾಡಿನ ಕಾವ್ಯ ಸಿರಿ ಪರಿಚಯ ಆಗಬೇಕು. ಇಂದಿನ ವಿದ್ಯಾರ್ಥಿಗಳಿಗೂ ಜಾನಪದರ ಕನ್ನಡದ ಕಸುವು ತಿಳಿಸಬೇಕು. ಈ ಉದ್ದೇಶ ಸಾಧನೆಗೆ ಶ್ರೀ ಸಿದ್ದಪ್ಪಾಜಿ ಮಧುರಾ ಸಿಂಚನ ಕಲಾ ವೇದಿಕೆ ತಂಡ ಕಟ್ಟಿಕೊಂಡು ಊರೂರು ತಿರುಗುತ್ತೇನೆ. ಕುರುಬನಕಟ್ಟೆ, ಬೊಪ್ಪನಪುರ ಸಾಂಸ್ಕೃತಿಕ ವೇದಿಕೆಗಳಲ್ಲಿ ಯುವಕರ ಬಳಗಕ್ಕೂ ಅವಕಾಶ ಕಲ್ಪಿಸಿದ್ದೇನೆ’ ಎಂದು ಹೇಳುತ್ತಾರೆ ಮೈಸೂರು ಆಕಾಶವಾಣಿ ಕಲಾವಿದರಾಗಿರುವ ಶಿವಕುಮಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT