ಶುಕ್ರವಾರ, ಜನವರಿ 24, 2020
27 °C

ಅದ್ಧೂರಿ ವಿಷ್ಣು ದೀಪೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಇಲ್ಲಿನ ಹರಳುಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ‘ವಿಷ್ಣು ದೀಪೋತ್ಸವ' ಕಾರ್ಯಕ್ರಮ ಗುರುವಾರ ರಾತ್ರಿ ಅದ್ಧೂರಿಯಿಂದ ಜರುಗಿತು.

ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿದ ನಂತರ ಉತ್ಸವಮೂರ್ತಿಯನ್ನು ದೇವಾಲಯದ ಒಳ ಆವರಣದಲ್ಲಿ ಮೆರವಣಿಗೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಭಕ್ತರು ದೇವಾಲಯದ ಒಳಗಡೆ ಮಣ್ಣಿನ ಹಣತೆ ಹಚ್ಚಿ ಸಂಭ್ರಮಿಸಿದರು.

ಸಮೀಪದ ಜನಾರ್ಧನಸ್ವಾಮಿ ದೇವಾಲಯದಲ್ಲಿಯೂ ವಿಷ್ಣು ದೀಪೋತ್ಸವ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ದೇವಾಲಯದಲ್ಲಿ ಪೂಜಾ ವಿಧಾನಗಳನ್ನು ಪೂರೈಸಿದ ಬಳಿಕ ದೇವರ ಉತ್ಸವ ನಡೆಸಲಾಯಿತು. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಡಿ.ವಿ. ಪಾಟೀಲ, ಸಿದ್ದಮಲ್ಲೇಶ್ವರ ವಿರಕ್ತ ಮಠಾಧ್ಯಕ್ಷ ಚನ್ನಬಸವಸ್ವಾಮೀಜಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಉದ್ದೇಶ: ಎಲ್ಲಿಯೂ ಯಾವುದೇ ಅಗ್ನಿ ಅವಘಡಗಳು ಸಂಭವಿಸಬಾರದು ಎಂಬ ಉದ್ದೇಶದಿಂದ ದೇವಸ್ಥಾನಗಳಲ್ಲಿ ದೇವರನ್ನು ಪ್ರಾರ್ಥಿಸಿ ಸಾಂಕೇತಿಕವಾಗಿ ರಾಜ ಗೋಪುರದ ಬಳಿ ತೈಲಪಟಕ್ಕೆ ಮಂಗಳಾರತಿಯಿಂದ ಹಚ್ಚಿದ ಬೆಂಕಿ ಧಗಧಗನೆ ಉರಿಸಲಾಗುತ್ತದೆ.

ಜಗಜ್ಯೋತಿ: ಅರ್ಚಕರು ದೇವಸ್ಥಾನದ ಹೊರಗೆ ಗೋಪುರದ ಬಳಿ ಜಗಜ್ಯೋತಿ ಬೆಳಗಿಸಿದರು. ಬಳಿಕ ತೈಲ ಬಟ್ಟೆಯ ಕರಿಯನ್ನು ರಕ್ಷಾ ಪ್ರಸಾದವಾಗಿ ಭಕ್ತರಿಗೆ ನೀಡಲಾಯಿತು. ನಂತರ ಮಹಾಮಂಗಳಾರತಿ ತೀರ್ಥ, ಪ್ರಸಾದ ವಿನಿಯೋಗ ಗರುಡೋತ್ಸವ ನಡೆಸಲಾಯಿತು. 

ಮಣ್ಣಿನ ಹಣತೆಯನ್ನು ಅಲಂಕರಿಸಿದ್ದ ದೇವಸ್ಥಾನ ವರ್ಣ ವೈಭವಗಳಿಂದ ಕಂಗೊಳಿಸುತ್ತಿತ್ತು. ಹೊರಗೆ ವಿದ್ಯುತ್‌ ದೀಪಗಳಿಂದ ಅಲಂಕರಿಸಿದ್ದ ದೇವಾಲಯ ಕಣ್ಮನ ಸೆಳೆಯುತ್ತಿತ್ತು.

ನಗರದ ಕರಿವರದರಾಜನ ಬೆಟ್ಟ, ಕಾಡು ನಾರಾಯಣಸ್ವಾಮಿ ದೇವಸ್ಥಾನ ಸೇರಿದಂತೆ ಅನೇಕ ದೇವಸ್ಥಾನಗಳಲ್ಲಿ ಇಂದು ವಿಷ್ಣು ದೀಪೋತ್ಸವ ಜರುಗಿತು. ಭಕ್ತರು ಉತ್ಸವದಲ್ಲಿ ಭಾಗವಹಿಸಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು