ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ‘ಕ್ಯಾನ್ಸರ್ ತಪಾಸಣೆಗೆ ಹಿಂಜರಿಕೆ ಬೇಡ’

ವಿಶ್ವ ಕ್ಯಾನ್ಸರ್‌ ದಿನಾಚರಣೆ; ಜನ ಜಾಗೃತಿಗೆ ಒತ್ತು ನೀಡಲು ಸಿಇಒ ಸಲಹೆ
Last Updated 4 ಫೆಬ್ರುವರಿ 2022, 16:17 IST
ಅಕ್ಷರ ಗಾತ್ರ

ಚಾಮರಾಜನಗರ: ‘ಜನರು ಕ್ಯಾನ್ಸರ್ ಪತ್ತೆ ಪರೀಕ್ಷೆಗೆ ಹಿಂಜರಿಯಬಾರದು. ಪ್ರಾರಂಭಿಕ ಹಂತದಲ್ಲೇ ರೋಗ ಪತ್ತೆ ಹಚ್ಚುವುದರಿಂದ ಚಿಕಿತ್ಸೆ ಪಡೆದು ಗುಣಮುಖರಾಗಲು ಸಾಧ್ಯವಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ಗುರುವಾರ ಇಲ್ಲಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಕ್ಯಾನ್ಸರ್ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಕ್ಯಾನ್ಸರ್ ರೋಗಕ್ಕೆ ಆಧುನಿಕ ವೈದ್ಯಕೀಯ ಚಿಕಿತ್ಸೆಗಳನ್ನು ಬಳಸಿಕೊಂಡು ರೋಗ ಪತ್ತೆಯಾದ ತಕ್ಷಣವೇ ಆರೈಕೆಗೆ ಒಳಪಡಬೇಕು. ವಿಶೇಷವಾಗಿ ಮಹಿಳೆಯರಲ್ಲಿ ಸ್ತನ ಹಾಗೂ ಗರ್ಭಕಂಠ ಕ್ಯಾನ್ಸರ್‌ ಪ್ರಕರಣ ಹೆಚ್ಚು ಕಂಡುಬರುತ್ತಿವೆ. ಆರಂಭದಲ್ಲಿಯೇ ಆರೋಗ್ಯ ತಪಾಸಣೆಗೆ ಒಳಗಾಗುವುದರಿಂದ ಗಂಭೀರ ಸಮಸ್ಯೆ ಕಾಡುವುದು ತಪ್ಪಲಿದೆ’ ಎಂದರು.

‘ಕ್ಯಾನ್ಸರ್‌ಗೆ ತುತ್ತಾದವರಿಗೆ ಮಾನಸಿಕವಾಗಿ ಕುಗ್ಗದಂತೆ ಆತ್ಮಸ್ಥೈರ್ಯ ತುಂಬಬೇಕು. ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತೆಯಾಗಿ ಶಿಸ್ತುಬದ್ಧ ಜೀವನ ಶೈಲಿ, ದೈಹಿಕ ಚಟುವಟಿಕೆ, ಕ್ರಮಬದ್ಧ ಆಹಾರ ಸೇವನೆ ರೂಢಿಸಿಕೊಳ್ಳಬೇಕು. ಕ್ಯಾನ್ಸರ್ ಕುರಿತು ಯುವಕ–ಯುವತಿಯರಿಗೆ, ವಿದ್ಯಾರ್ಥಿಗಳಿಗೆ ಶಾಲಾ–ಕಾಲೇಜು ಮಟ್ಟದಲ್ಲಿ ಮನವರಿಕೆ ಮಾಡಲು ಜಾಗೃತಿ ಕಾರ್ಯಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ ಮಾತನಾಡಿ ‘ಕ್ಯಾನ್ಸರ್ ಕುರಿತು ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಹೆಚ್ಚು ಅರಿವು ಮೂಡಿಸುವ ಕಾರ್ಯ ನಡೆಸಬೇಕಿದೆ. ಕ್ಯಾನ್ಸರ್‌ನ ರೋಗ ಲಕ್ಷಣಗಳು, ನೀಡಬಹುದಾದ ಚಿಕಿತ್ಸಾ ವಿಧಾನಗಳು, ಇನ್ನಿತರ ವಿಷಯಗಳನ್ನು ಪರಿಪೂರ್ಣವಾಗಿ ತಿಳಿಸುವಂತಾಗಬೇಕು. ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಗಾರಗಳನ್ನು ಹೆಚ್ಚು ಆಯೋಜನೆ ಮಾಡಬೇಕು’ ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಡಾ.ರವಿಶಂಕರ್, ಡಾ.ಪ್ರಿಯದರ್ಶಿನಿ, ಡಾ.ಪ್ರಶಾಂತ್, ಡಾ.ನಿಶ್ಚಲ್, ಡಾ.ಮಂಜುನಾಥ್, ಡಾ.ಎನ್.ಕಾಂತರಾಜು ಇದ್ದರು.

‘ಜಾಗೃತಿ ಮೂಡಿಸಲು ಒತ್ತು’
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ಮಾತನಾಡಿ ‘ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಆಶಾ, ಆರೋಗ್ಯ ಕಾರ್ಯಕರ್ತೆಯರಿಗೆ ಇನ್ನಷ್ಟು ಪರಿಣಾಮಕಾರಿ ತರಬೇತಿ ನೀಡಲಾಗುವುದು. ಕ್ಯಾನ್ಸರ್ ನಿರ್ಮೂಲನೆ ಮಾಡುವ ಉದ್ದೇಶದಿಂದ ಬಾಯಿ, ಗಂಟಲು ಆರೋಗ್ಯವನ್ನು ಕಾಪಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ.ನಾಗರಾಜು ಮಾತನಾಡಿ ‘ಕ್ಯಾನ್ಸರ್‌ಗೆ ತುತ್ತಾದವರು ಭಯಪಡದೆ ಪ್ರಾರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆಯುವುದರಿಂದ ಹೆಚ್ಚಿನ ಅಪಾಯದ ಹಂತವನ್ನು ತಪ್ಪಿಸಬಹುದು. ಪುರುಷರಲ್ಲಿ ಬಾಯಿ ಕ್ಯಾನ್ಸರ್ ಹೆಚ್ಚು ಬಾಧಿಸುತ್ತಿದೆ. ತಂಬಾಕು ಸೇವನೆಯಿಂದ ಕ್ಯಾನ್ಸರ್ ಅಷ್ಟೇ ಅಲ್ಲ, ಪಾರ್ಶ್ವವಾಯು, ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ಮದ್ಯಪಾನ, ತಂಬಾಕು ಸೇವನೆ ತ್ಯಜಿಸಿದರೆ ರೋಗದಿಂದ ದೂರವಿರಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT