ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯನ ಸ್ವಾರ್ಥದಿಂದ ವೃದ್ಧಾಶ್ರಮ ಹೆಚ್ಚಳ: ಗಣೇಶ್‌ ಪ್ರಸಾದ್‌

ವಿಶ್ವ ಹಿರಿಯ ನಾಗರಿಕರ ದಿನಾಚರಣೆ; ಹಿರಿಯರಿಗೆ ಸನ್ಮಾನ,, ಅಂಗವಿಕಲರಿಗೆ ವಾಹನ, ಲ್ಯಾಪ್‌ಟಾಪ್‌ ವಿತರಣೆ
Published 1 ಅಕ್ಟೋಬರ್ 2023, 16:41 IST
Last Updated 1 ಅಕ್ಟೋಬರ್ 2023, 16:41 IST
ಅಕ್ಷರ ಗಾತ್ರ

ಚಾಮರಾಜನಗರ: ‘‘ನಾನು, ನನ್ನ ಕುಟುಂಬ’ ಎಂಬ ಸ್ವಾರ್ಥದಿಂದಾಗಿ ಸಮಾಜದಲ್ಲಿ ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಈ ದಿನಗಳಲ್ಲಿ ಹಿರಿಯರಿಗೆ ಪ್ರೀತಿ ತೋರಿ ಗೌರವದಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ’ ಎಂದು ಗುಂಡ್ಲುಪೇಟೆ ಶಾಸಕ ಎಚ್‌.ಎಂ.ಗಣೇಶ್‌ ಪ್ರಸಾದ್‌ ಭಾನುವಾರ ಹೇಳಿದರು.  

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಹಿರಿಯ ನಾಗರಿಕ ಸಬಲೀಕರಣ ಕ್ಷೇತ್ರದಲ್ಲಿ ಭಾಗಿಯಾಗಿರುವ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಯುವಕರು ಕೆಲಸ ಹುಡುಕಿಕೊಂಡು ನಗರ, ಹೊರ ರಾಜ್ಯ, ಹೊರ ದೇಶಗಳಿಗೆ ಹೋಗುತ್ತಿದ್ದಾರೆ. ಮನೆಯಲ್ಲಿ ವೃದ್ಧ ತಂದೆ ತಾಯಿಯರನ್ನು ಬಿಟ್ಟು ಹೋಗುತ್ತಿದ್ದಾರೆ. ಈಗಿನ ಕಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿದ್ದು, ಹಿರಿಯರನ್ನು ಬಾಧಿಸುತ್ತಿದೆ. ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲದಂತಹ ವಾತಾವರಣ ನಿರ್ಮಾಣವಾಗಿದೆ’ ಎಂದರು. 

‘ಇಂತಹ ವಾತಾವರಣ ನಿರ್ಮಾಣವಾಗಬಾರದು. ನಾವು ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನಮ್ಮಲ್ಲಿರುವ ಕೊರತೆ, ಸಮಸ್ಯೆಗಳನ್ನು ಅರಿತುಕೊಂಡು ಬಗೆಹರಿಸಲು ಯತ್ನಿಸಬೇಕು’ ಎಂದು ಸಲಹೆ ನೀಡಿದರು.  

ಸದ್ಬಳಕೆ ಮಾಡಿಕೊಳ್ಳಿ: ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗಾಗಿ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ. ಅನುದಾನವನ್ನೂ ನೀಡುತ್ತಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಲಬೇಕು. ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಲು ಅಧಿಕಾರಿಗಳು ಮುಂದಾಗಬೇಕು. ಹಿರಿಯ ನಾಗರಿಕರನ್ನು ಕಚೇರಿಗೆ ಅಲೆದಾಡಿಸದೇ ಗೌರವದಿಂದ ನಡೆಸಿಕೊಳ್ಳಬೇಕು’ ಎಂದರು. 

‘ಅಂಗವಿಕಲರು ತಮಗೆ ವಾಹನ ಕೊಡಿಸಿ ಎಂದು ಮನವಿ ಸಲ್ಲಿಸುತ್ತಾರೆ. ಸಿಗದಿದ್ದರೆ ಬೇಸರ ಮಾಡಿಕೊಳ್ಳುತ್ತಾರೆ. ಸರ್ಕಾರ ಎಲ್ಲದಕ್ಕೂ ನಿಯಮಗಳನ್ನು ರೂಪಿಸಿದೆ. ಚಾಲನಾ ಪರವಾನಗಿ ಇರುವವರಿಗೆ ಮಾತ್ರ ಈ ಸೌಲಭ್ಯ ಸಿಗುತ್ತದೆ. ಅಂಗವಿಕಲರು ಇದನ್ನು ಅರಿಯಬೇಕು’ ಎಂದರು.

ವಕೀಲರಾದ ರೂಪಶ್ರೀ ಮಾತನಾಡಿ, ‘ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿಗಾಗಿ ಸರ್ಕಾರವು 2007ರಲ್ಲಿ ಪಾಲಕರ ಮತ್ತು ಹಿರಿಯ ನಾಗರಿಕರ ಪಾಲನೆ-ಪೋಷಣೆ ಮತ್ತು ಕಲ್ಯಾಣ ಕಾಯ್ದೆ ಜಾರಿಗೆ ತಂದಿದೆ. ಮಕ್ಕಳು ತಮ್ಮನ್ನು ಕಡೆಗಣಿಸುತ್ತಿರುವುದು ಕಂಡುಬಂದರೆ ಪೋಷಕರು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿರ್ವಹಣಾ ನ್ಯಾಯ ಮಂಡಳಿ ಹಾಗೂ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಮೇಲ್ಮನವಿ ನಿರ್ವಹಣಾ ನ್ಯಾಯ ಮಂಡಳಿಗೆ ದೂರು ಸಲ್ಲಿಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು’ ಎಂದರು. 

ಸನ್ಮಾನ: ಇದೇ ವೇಳೆ ಹಿರಿಯ ನಾಗರಿಕರಾದ ಶತಾಯುಷಿ ಪುಟ್ಟಪ್ಪ, ಜಾನಪದ ತತ್ವಪದ ಹಾಡುಗಾರ, ಕೊಳ್ಳೇಗಾಲ ತಾಲ್ಲೂಕಿನ ಸಿದ್ದಯ್ಯನಪುರದ ವೆಂಕಟಯ್ಯ, ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ಕೊಳ್ಳೇಗಾಲದ ರಾಚಪ್ಪಾಜಿ ಹಾಗೂ ಇತರೆ ಹಿರಿಯರನ್ನು ಸನ್ಮಾನಿಸಲಾಯಿತು.

ಹಿರಿಯ ನಾಗರಿಕರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ನಗದು ಪುರಸ್ಕಾರ, ಪ್ರಮಾಣಪತ್ರ ವಿತರಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗೀತಾಲಕ್ಷ್ಮಿ,  ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸುರೇಶ್, ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ನಾಗೇಶ್, ಉಪಾಧ್ಯಕ್ಷರಾದ ಸೋಮಣ್ಣ, ಇತರರು ಇದ್ದರು. 

ವೇದಿಕೆ ಕಾರ್ಯಕ್ರಮದ ಬಳಿಕ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್, ಅಂಗವಿಕಲರಿಗೆ ದ್ವಿಚಕ್ರ ವಾಹನಗಳನ್ನು ಹಾಗೂ ಅಂಗವಿಕಲ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್, ಬ್ರೈನ್ ಲಿಪಿ ಕಿಟ್‌ಗಳನ್ನು ವಿತರಿಸಿದರು.

ಅಲ್ಲದೇ ಪ್ರತಿದಿನ 100 ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ನಡೆಸುತ್ತಿರುವ ಹೆಲ್ಪ್ ಏಜ್ ಇಂಡಿಯಾ ಸಂಸ್ಥೆಯ ಪ್ರಚಾರದ ಬ್ಯಾನರ್‌ಗೆ ಶಾಸಕರು, ಅಧಿಕಾರಿಗಳು ಸಹಿ ಹಾಕಿದರು.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ಹಿರಿಯ ನಾಗರಿಕರು ಮತ್ತು ಅಂಗವಿಕಲರು
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಹಿರಿಯ ನಾಗರಿಕರು ಮತ್ತು ಅಂಗವಿಕಲರು
ದೌರ್ಜನ್ಯದ ಸಂದರ್ಭದಲ್ಲಿ ಹಿರಿಯರು ಮಹಿಳೆಯರು ಮಕ್ಕಳು 1098 ಸಹಾಯವಾಣಿಗೆ ಕರೆ ಮಾಡಿ ಸರ್ಕಾರದ ನೆರವನ್ನು ಪಡೆಯಬಹುದು.
-ಎಚ್‌.ಎಂ.ಗಣೇಶ್‌ ಪ್ರಸಾದ್‌ ಗುಂಡ್ಲುಪೇಟೆ ಶಾಸಕ

Quote - ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿರಿಯ ನಾಗರಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಚುನಾವಣೆಯಲ್ಲಿ ಮತದಾನ ಮಾಡಿ ಹಕ್ಕು ಚಲಾಯಿಸಬೇಕು ಆನಂದ್ ಪ್ರಕಾಶ್ ಮೀನಾ ಜಿ.ಪಂ ಸಿಇಒ

ಶಾಸಕರು ಡಿ.ಸಿ ಗೈರಿಗೆ ಆಕ್ಷೇಪ

ಕಾರ್ಯಕ್ರಮ ಆರಂಭವಾಗುವ ಹೊತ್ತಿನಲ್ಲಿ ಶಾಸಕರು ಯಾರೂ ಬಂದಿರಲಿಲ್ಲ. ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್‌ ಅವರು ಗೈರಾಗಿದ್ದರು.  ಉದ್ಘಾಟನೆ ಆಗುವುದಕ್ಕೂ ಮೊದಲು ಅಧಿಕಾರಿಗಳು ಹಿರಿಯ ನಾಗರಿಕರಿಗೆ ಸನ್ಮಾನ ಮಾಡಲು ಮುಂದಾದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಖಂಡ ಸಿದ್ದಯ್ಯ ಅವರು ‘ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಬಂದಿಲ್ಲ. ಶಾಸಕರೂ ಕಾಣುತ್ತಿಲ್ಲ. ಜಿಲ್ಲಾಧಿಕಾರಿಯವರೂ ಬಂದಿಲ್ಲ. ಉದ್ಘಾಟನೆಯಾಗುವುದಕ್ಕೂ ಮೊದಲೇ ಹಿರಿಯರಿಗೆ ಸನ್ಮಾನ ಮಾಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಅವಮಾನ ಮಾಡುತ್ತಿದ್ದೀರಿ. ಈ ಕಾರ್ಯಕ್ರಮ ರದ್ದು ಮಾಡಿ’ ಎಂದು ಆಗ್ರಹಿಸಿದರು.  ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ‘ಶಾಸಕರು ಬರುತ್ತಾರೆ. ಅನಾರೋಗ್ಯದ ಕಾರಣ ಜಿಲ್ಲಾಧಿಕಾರಿಯವರು ಬಂದಿಲ್ಲ. ಹಿರಿಯರಿಗೆ ತುಂಬ ಹೊತ್ತು ಕಾಯುವುದಕ್ಕೆ ಆಗುವುದಿಲ್ಲ ಎಂಬ ಕಾರಣಕ್ಕೆ ಅವರಿಗೆ ಮೊದಲೇ ಸನ್ಮಾನ ಮಾಡಲಾಗುತ್ತಿದೆ’ ಎಂದು ಸಮಾಧಾನ ಮಾಡಲು ಯತ್ನಿಸಿದರು.  ಅಷ್ಟು ಹೊತ್ತಿಗೆ ಶಾಸಕ ಗಣೇಶ್‌ ಪ್ರಸಾದ್‌ ಬಂದರು. ನಂತರ ಕಾರ್ಯಕ್ರಮ ಆರಂಭವಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT