ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರ ಗುತ್ತಿಗೆ ನೌಕರರಿಗೆ ವಂಚನೆ: ಅಧಿಕಾರಿ ಅಮಾನತಿಗೆ ಪಟ್ಟು

ಗುಂಡ್ಲುಪೇಟೆ ತಾಲ್ಲೂಕು ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹಗರಣದ ಆರೋಪ
Last Updated 2 ಮಾರ್ಚ್ 2021, 16:30 IST
ಅಕ್ಷರ ಗಾತ್ರ

ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕು ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರರಿಗೆ ಗುತ್ತಿಗೆ ಪಡೆದುಕೊಂಡಿದ್ದ ಸಂಸ್ಥೆಯು ವಂಚನೆ ಮಾಡಿದೆ ಎನ್ನಲಾದ ಪ್ರಕರಣ ಮಂಗಳವಾರ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು.

ಕಾಂಗ್ರೆಸ್‌ ಸದಸ್ಯರು ಹಾಗೂ ಬಿಜೆಪಿಯ ಸಿ.ಎನ್‌.ಬಾಲರಾಜು ಅವರು ಈ ವಿಚಾರವನ್ನು ಪ್ರಸ್ತಾಪಿಸಿ, ತಪ್ಪಿತಸ್ಥ ಆರೋಗ್ಯ ಅಧಿಕಾರಿಗಳನ್ನು ತಕ್ಷಣವೇ ಅಮಾನತು ಮಾಡಿ ತನಿಖೆಗೆ ಆದೇಶಿಸಬೇಕು ಎಂದು ಪಟ್ಟು ಹಿಡಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಂ.ಸಿ.ರವಿ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಕೆರೆಹಳ್ಳಿ ನವೀನ್‌ ಅವರು, ‘ಗುತ್ತಿಗೆ ಪಡೆದ ಸಂಸ್ಥೆಯು ಕೆಲಸ ಮಾಡುತ್ತಿರುವ ನೌಕರರಿಗೆ ಇಎಸ್‌ಐ, ಪಿಎಫ್‌ ಸೌಲಭ್ಯ ಕಲ್ಪಿಸಿಲ್ಲ. ಅಲ್ಲಿ ಕೆಲಸಕ್ಕೆ ಹಾಜರಾದವರಿಗೆ ವೇತನ ಕೊಡದೇ, ಮೂರನೇ ವ್ಯಕ್ತಿಗೆ ಸಂಬಳ ಪಾವತಿಸಿದೆ. ಈ ವಿಚಾರ ಮಾಧ್ಯಮಗಳಲ್ಲಿ, ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಪ್ರಸ್ತಾಪವಾಗಿದೆ. ನಾವು ಆರೋಗ್ಯ ಇಲಾಖೆಯ ಗಮನಕ್ಕೆ ತಂದಿದ್ದೇವೆ. ವಂಚನೆ ಬೆಳಕಿಗೆ ಬಂದು 10 ದಿನಗಳಾದರೂ ಜಿಲ್ಲಾ ಆರೋಗ್ಯ ಅಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

ಕಾಂಗ್ರೆಸ್‌ನ ಕೆ.ಎಸ್‌.ಮಹೇಶ್‌, ಬರಗಿ ಚೆನ್ನಪ್ಪ ಹಾಗೂ ಬಿಜೆಪಿಯ ಸಿ.ಎನ್‌.ಬಾಲರಾಜು ಅವರು ಇದಕ್ಕೆ ಧ್ವನಿಗೂಡಿಸಿದರು. ಬಾಲರಾಜು ಅವರು ಟಿವಿ ಚಾನೆಲ್‌ನಲ್ಲಿ ಬಂದ ವರದಿಯನ್ನೇ ಸಭೆಯಲ್ಲಿ ತೋರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು, ‘ವಿಚಾರ ಗೊತ್ತಾಗುತ್ತಿದ್ದಂತೆಯೇ ಅಲ್ಲಿನ ವೈದ್ಯಾಧಿಕಾರಿಗಳು ಹಾಗೂ ಸಂಬಂಧಿಸಿದ ಸಿಬ್ಬಂದಿಗೆ ನೋಟಿಸ್‌ ನೀಡಿದ್ದೇನೆ. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ತರಿಸಿಕೊಂಡಿದ್ದೇನೆ. ಇದನ್ನು ಪರಿಶೀಲಿಸಿ, ವರದಿ ನೀಡುತ್ತೇನೆ’ ಎಂದರು.

‘ಇದಕ್ಕೆ ಒಪ್ಪದ ಸದಸ್ಯರು, ವಂಚನೆ ಮಾಡಿದವರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದೀರಿ. ಅದನ್ನು ಮಾಡಬೇಡಿ. ಸಂಬಂಧಿಸಿದ ಅಧಿಕಾರಿಯನ್ನು ಅಮಾನತು ಮಾಡಿ ತನಿಖೆ ನಡೆಸಿ. ಗುತ್ತಿಗೆ ಪಡೆದ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ. ಈ ಕೆಲಸ ಸಂಜೆಯ ಒಳಗೆ ಆಗಬೇಕು’ ಎಂದು ಪಟ್ಟು ಹಿಡಿದರು.

ಪ್ರಕರಣದ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್‌ ಭೊಯರ್‌ ನಾರಾಯಣರಾವ್‌ ಅವರು, ‘ಪೂರಕ ದಾಖಲೆಗಳಿದ್ದರೆ, ಆ ಸಂಸ್ಥೆಗೆ ಹಾಗೂ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿ ವಿವರ ಕೇಳಿ. ನಂತರ ಅದರ ಆಧಾರದಲ್ಲಿ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮೇಲಿನ ಅಧಿಕಾರಿಗಳಿಗೆ ಶಿಫಾರಸು ಮಾಡಿ’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗೆ ಸೂಚಿಸಿದರು.

ಏನಿದು ಪ್ರಕರಣ?

ಗುಂಡ್ಲುಪೇಟೆ ತಾಲ್ಲೂಕು ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಇಂಡಿಯನ್‌ ಸೆಕ್ಯುರಿಟಿ ಅಂಡ್‌ ಪರ್ಸನಲ್‌ ಮ್ಯಾನೇಜ್‌ಮೆಂಟ್‌ ಎಂಬ ಹೊರಗುತ್ತಿಗೆ ಸಂಸ್ಥೆ ಡಾಟಾ ಎಂಟ್ರಿ ಆಪರೇಟರ್‌, ಜ್ಯೂನಿಯರ್‌ ಲ್ಯಾಬ್‌ ಟೆಕ್ನೀಶಿಯನ್, ಜ್ಯೂನಿಯರ್‌ ಫಾರ್ಮಾಸಿಸ್ಟ್‌, ಗ್ರೂಪ್‌ ಡಿ, ಸ್ವೀಪರ್‌ಗಳ ನೇಮಕಾತಿ ಮಾಡಲು ಟೆಂಡರ್‌ ಪಡೆದಿದೆ.

ಸಾರ್ವಜನಿಕ ಆಸ್ಪತ್ರೆಗ 20 ಸಿಬ್ಬಂದಿ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ 12 ಮಂದಿಯನ್ನು ಒದಗಿಸಲು ಟೆಂಡರ್‌ ಪಡೆಯಲಾಗಿದೆ. ಆದರೆ, ಅಲ್ಲಿ ಕ್ರಮವಾಗಿ 14 ಮತ್ತು ಎಂಟು ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂಬುದು ಆರೋಪ.

‘ಇದಲ್ಲದೇ, ಹಾಜರಾತಿ ಪುಸ್ತಕದಲ್ಲಿ ಇರುವವರೇ ಬೇರೆ, ಕೆಲಸ ಮಾಡುವವರೇ ಬೇರೆ. ಜೊತೆಗೆ ಹೊರಗುತ್ತಿಗೆ ನೌಕರರಿಗೆ ಸರ್ಕಾರ ನಿಗದಿ ಮಾಡಿದ ಸಂಬಳವನ್ನೂ ನೀಡಲಾಗುತ್ತಿಲ್ಲ’ ಎಂದು ಅಲ್ಲಿನ ನೌಕರರೇ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT