ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಬಗೆಬಗೆಯ ಗೊಂಬೆಗಳ ಲೋಕ

Last Updated 20 ಸೆಪ್ಟೆಂಬರ್ 2017, 6:17 IST
ಅಕ್ಷರ ಗಾತ್ರ

ಚಾಮರಾಜನಗರ: ಈ ಮನೆಯೊಳಗೆ ಹೊಕ್ಕರೆ ಗೊಂಬೆಗಳ ಭವ್ಯ ಲೋಕ ಎದುರಾಗುತ್ತದೆ. ಪುರಾಣ, ಇತಿಹಾಸದ ಕಥನಗಳಿಂದ ಹಿಡಿದು ಅತ್ಯಾಧುನಿಕ ಜೀವನದವರೆಗಿನ ಜಗತ್ತು ಇಲ್ಲಿ ತೆರೆದುಕೊಳ್ಳುತ್ತದೆ.

ಮೈಸೂರು ದಸರಾ ಉತ್ಸವ, ರಾವಣಾಸುರನ ದರ್ಬಾರು, ಚೋಳರಾಜನ ಆಸ್ಥಾನದ ನ್ಯಾಯದ ಗಂಟೆ, ಶೃಂಗೇರಿ ಶಾರದಾಂಬೆಯ ರಥೋತ್ಸವ, ದಶಾವತಾರ, ಅಷ್ಟಲಕ್ಷ್ಮಿಯರು, ಗರುಡವಾಹನ, ಬೃಂದಾವನದಲ್ಲಿ ರಾಧೆ ಕೃಷ್ಣ ಹೀಗೆ ಒಂದೆಡೆ ಪುರಾಣ ಮತ್ತು ಚರಿತ್ರೆಯ ಐತಿಹ್ಯಗಳನ್ನು ಸಾರುವ ಗೊಂಬೆಗಳಾದರೆ, ಮತ್ತೊಂದೆಡೆ ತಾಮ್ರ, ಹಿತ್ತಾಳೆ, ಸ್ಟೀಲ್, ಬೆಳ್ಳಿ ಮುಂತಾದ ಲೋಹದ ವಸ್ತುಗಳು, ಮರದ ವಿಗ್ರಹಗಳು, ಮಕ್ಕಳ ಆಟದ ವಾಹನಗಳು, ಪಿಂಗಾಣಿ, ಮರ, ಪ್ಲಾಸ್ಟಿಕ್‌ನಿಂದ ತಯಾರಿಸಿದ ಅಡುಗೆ ಮನೆ ಪರಿಕರದ ಆಟಿಕೆಗಳು... ಒಂದು ಮಿನಿ ವಸ್ತು ಸಂಗ್ರಹಾಲಯದ ಒಳಗೆ ಪ್ರವೇಶಿಸಿದಂತೆ ಭಾಸವಾಗುತ್ತದೆ.

ಗುಂಡ್ಲುಪೇಟೆ ಪಟ್ಟಣದ ಗ್ಯಾಸ್‌ ಏಜೆನ್ಸಿ ಮಾಲೀಕ ಜಿ.ಆರ್‌. ದೊರೆಸ್ವಾಮಿ ಮತ್ತು ಶಶಿಕಲಾ ದಂಪತಿ ಗೊಂಬೆಗಳ ಜತೆ ಒಪ್ಪಓರಣವಾಗಿ ಜೋಡಿಸಿರುವ ವೈವಿಧ್ಯಮಯ ವಸ್ತುಗಳು ಬೆರಗು ಮೂಡಿಸುತ್ತವೆ.

ನವರಾತ್ರಿ ಸಂದರ್ಭದಲ್ಲಿ ಶಕ್ತಿದೇವತೆಯ 9 ಅವತಾರಗಳನ್ನು ಬಿಂಬಿಸುವ ಗೊಂಬೆಗಳನ್ನು ಇರಿಸಿ ಭಕ್ತಿಯಿಂದ ಪೂಜಿಸಲಾಗುತ್ತದೆ. ಇದಲ್ಲದೆ, ಬೇರೆ ಬೇರೆ ಗೊಂಬೆಗಳನ್ನು ಕೂರಿಸುವ ಸಂಪ್ರದಾಯವೂ ಬೆಳೆದಿದೆ. ಆದರೆ, ದೊರೆಸ್ವಾಮಿ ದಂಪತಿಯಲ್ಲಿ ಭಕ್ತಿಯ ಜತೆ ಗೊಂಬೆ ಮತ್ತು ಬಗೆಬಗೆಯ ವಸ್ತುಗಳನ್ನು ಸಂಗ್ರಹಿಸಿ ಪ್ರದರ್ಶಿಸುವ ಆಸಕ್ತಿ ಕೂಡ ಸೇರಿಕೊಂಡಿದೆ.

10,000ಕ್ಕೂ ಹೆಚ್ಚು ಸಂಗ್ರಹ: ಇವರ ಸಂಗ್ರಹದಲ್ಲಿ 10,000ಕ್ಕೂ ಅಧಿಕ ಗೊಂಬೆಗಳು ಮತ್ತು ಫ್ಯಾನ್ಸಿ ವಸ್ತುಗಳಿವೆ. ವರ್ಷವಿಡೀ ಜತನದಿಂದ ಅವುಗಳನ್ನು ಕಾಪಿಡುವ ಅವರು, ನವರಾತ್ರಿ ಸಂದರ್ಭದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇರಿಸುತ್ತಾರೆ. ₹10 ರಿಂದ ₹50–60 ಸಾವಿರ ಮೌಲ್ಯದವರೆಗಿನ ವಸ್ತುಗಳು ಇಲ್ಲಿವೆ. ಗೊಂಬೆ ಕೂರಿಸುವ ಹತ್ತು ದಿವಸವೂ ನಿತ್ಯ ನೂರಾರು ಮಂದಿ ಇವರ ಮನೆಗೆ ಭೇಟಿ ನೀಡುತ್ತಾರೆ.

‘ಯಾವುದೇ ಊರಿಗೆ ಹೋದಾಗ ಅಲ್ಲಿ ಮಾರುವ ಗೊಂಬೆ ಅಥವಾ ವಸ್ತುಗಳು ಗಮನ ಸೆಳೆಯುತ್ತವೆ. ಇದು ನಮ್ಮ ಸಂಗ್ರಹದಲ್ಲಿ ಇಲ್ಲ ಎನಿಸಿದರೆ ಅವರು ಕೇಳಿದಷ್ಟು ಹಣ ಕೊಟ್ಟು ಖರೀದಿಸುತ್ತೇವೆ. ಗೊಂಬೆ ಮಾರಾಟಗಾರರ ಜತೆ ಎಂದಿಗೂ ಚೌಕಾಸಿ ಮಾಡುವುದಿಲ್ಲ’ ಎನ್ನುತ್ತಾರೆ ದೊರೆಸ್ವಾಮಿ. ಕೆಲವೊಮ್ಮೆ ತಮಗೆ ಬೇಕಾದ ಗೊಂಬೆಗಳನ್ನು ಕುಶಲಕರ್ಮಿಗಳ ಬಳಿ ಹೇಳಿ ತಯಾರಿಸಿಕೊಳ್ಳುತ್ತಾರೆ. ಅವುಗಳಿಗೆ ಮನೆಯವರೇ ಅಲಂಕಾರ ಮಾಡುತ್ತಾರೆ.

ಗೊಂಬೆಗಳನ್ನು ಕೂರಿಸುವುದಕ್ಕಾಗಿಯೇ ಮನೆಯ ಮುಖ್ಯಭಾಗವನ್ನು ಅವರು ಮೀಸಲಿಟ್ಟಿದ್ದಾರೆ. ಹೊರಭಾಗದಲ್ಲಿ ಗೋಧಿ ಮತ್ತು ರಾಗಿಯನ್ನು ಬಿತ್ತಿ ಅದರ ನಡುವೆ ಕೃತಕ ವನ್ಯಜೀವಿಧಾಮವನ್ನೇ ಸೃಷ್ಟಿಸಿದ್ದಾರೆ. ಇವರ ಸಂಗ್ರಹದಲ್ಲಿರುವ ಮುನ್ನೂರಕ್ಕೂ ಅಧಿಕ ಸಣ್ಣ ಆಟಿಕೆಗಳು ಮಕ್ಕಳನ್ನು ಆಕರ್ಷಿಸುತ್ತವೆ.

‘ಸುಮಾರು 35 ವರ್ಷಗಳಿಂದ ಮನೆಯಲ್ಲಿ ಗೊಂಬೆಗಳನ್ನು ಕೂರಿಸುತ್ತಿದ್ದೇನೆ. ವರ್ಷದಿಂದ ವರ್ಷಕ್ಕೆ ಗೊಂಬೆಗಳ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ. ಇದರಿಂದ ನಮಗೆ ಅಪರಿಮಿತ ಖುಷಿ ಸಿಗುತ್ತದೆ’ ಎನ್ನುತ್ತಾರೆ ದೊರೆಸ್ವಾಮಿ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT