ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಸಮಯ ಪಕ್ಷಿ ವೀಕ್ಷಣೆಗೆ ಆನಂದಮಯ

Last Updated 15 ಮೇ 2011, 11:15 IST
ಅಕ್ಷರ ಗಾತ್ರ

ಯಳಂದೂರು: ಮೇ ಮಾಸ, ಭರಣಿ ಮಳೆ ಸಿಂಚನ, ಮುಗಿಲು ಮುಟ್ಟಿದ ಪಕ್ಷಿ ಸಂಕುಲದ ಕಲರವ, ನೀರು ನಿಂತಲ್ಲೆಲ್ಲ ಮುಳುಗೇಳುವ ಈ ಹಕ್ಕಿಗಳ ಸುಶ್ರಾವ್ಯ ಸ್ವರನಾದ ಪರಿಸರಕ್ಕೆ ಜೀವಕಳೆ.ವತಾರೆ ಎದ್ದು ಹೊಲ, ಗದ್ದೆಗೆ ಬಾಳಬಂಡಿ ಹೂಡುವ ರೈತರ ಸಾಲು ಉಳಿಮೆಗಳಲ್ಲಿ ಬೆಳ್ಳಕ್ಕಿಗಳ ಸಾಲು ಆಹಾರಕ್ಕಾಗಿ ಕ್ರಿಮಿಕೀಟ ಭಕ್ಷಿಸಿ, ಬೆಳೆ ರಕ್ಷಿಸಿ ಅನ್ನದಾತನಿಗೆ ಸಹಾಯ ಮಾಡುತ್ತವೆ.

ಬೇಸಿಗೆಯಲ್ಲಿ ಸುವರ್ಣಾವತಿ ನದಿಗುಂಟ ಹತ್ತಾರು ಹಳ್ಳಿಗಳ ತೋಟದ ಮನೆಯಲ್ಲಿ ಸಂತಾನವೃದ್ಧಿಗೆ ವಿವಿಧ ಬಣ್ಣ, ಕೂಗು, ನಾಟ್ಯದ ಮೂಲಕ ತಾಲ್ಲೂಕಿನಾದ್ಯಂತ ಬೀಡುಬಿಟ್ಟಿರುವ ಪಕ್ಷಿಸಂಕುಲ ಪಕ್ಷಿ ಪ್ರಿಯರ, ಚಿಣ್ಣರ ಕುತೂಹಲ ಕೆರಳಿಸಿ ಸಂತಸ ಮೂಡಿಸಿವೆ.

ಭಾರತದಲ್ಲಿ 1225 ವಿವಿಧ ಪಕ್ಷಿಗಳನ್ನು ಗುರುತಿಸಲಾಗಿದೆ. ಏಟ್ರೀ ಸಂಸ್ಥೆ ಯಳಂದೂರು ತಾಲ್ಲೂಕು ವ್ಯಾಪ್ತಿಯಲ್ಲಿ 225 ಬಗೆಯ ಸುಕಪಿಕಗಳನ್ನು ದಾಖಲಿಸಿದೆ. ಬೆಳೆಗಳಿಗೆ ಮಾರಕವಾದ ಕಂಬಳಿಹುಳ, ಮಿಡತೆ, ಗೆದ್ದಿಲು, ಗೊಣ್ಣೆಹುಳ, ಇಲಿ, ಹೆಗ್ಗಣಗಳ ಹಾವಳಿ ತಗ್ಗುವಲ್ಲಿ ಇವುಗಳ ಪಾತ್ರ ಪ್ರಮುಖವಾದುದು. ಕೊಳೆತ ಮಾಂಸ, ಉಪದ್ರವಿ ಕೀಟಗಳ ಹತೋಟಿಯಲ್ಲಿ ರಣಹದ್ದುಗಳ ಪಾತ್ರ ಮಹತ್ವದ್ದು. ಸಸ್ಯ ಸಂಕುಲ ಸಮೃದ್ಧಿಗೂ ಇವುಗಳ ಕೊಡುಗೆ ಅಪಾರ. ನವಿಲುಗಳು ಈ ಭಾಗದ ತೋಟಗಳಲ್ಲಿ ಇವೆ.

ಕೆಂಪು ಚುಕ್ಕಿ ಬುಲ್‌ಬುಲ್; ಯಳಂದೂರು ಸೇರಿದಂತೆ ಅನೇಕ ಕಡೆ ಹಸಿರಿದ್ದಲ್ಲಿ ಕಾಣಬಹುದು. ಕಪ್ಪು ಜೊಟ್ಟು. ಕಣ್ಣಿನ ಪಕ್ಕದಲ್ಲಿ ಕೆಂಪು ದೃಷ್ಟಿ ಬೊಟ್ಟು ಇಟ್ಟಂತೆ ಕಾಣುವ ಇದನ್ನು ಸುಲಭವಾಗಿ ಗುರುತಿಸಬಹುದು. ’ಕೊ-ಟ್ಟು-ಬಿ-ಡಿ’ ಎಂದು ಶಿಳ್ಳೆಯಂತಹ ಸ್ವರ ಹೊಮ್ಮಿಸುವುದರಲ್ಲಿ ನಿಷ್ಣಾತ. ಸೋಲಿಗರು ‘ಕೊಟ್ಟುಪಿಡುಗ’ ಎನ್ನುತ್ತಾರೆ. ಇದು ಹುಳ ಹುಪ್ಪಟೆ ಭಕ್ಷಿಸುತ್ತದೆ.

ಚುಕ್ಕಿ ಪಾರಿವಾಳ: ಕೈತೋಟದಲ್ಲಿ ಸಂಚರಿಸುವ ಇವು ಊರುಗಳ ಹೊರಭಾಗಗಳಲ್ಲಿ ವಾಸಿಸುವ ಸಭ್ಯ ಪಕ್ಷಿ. ಕ್ರೂ...ಕ್ರೂ... ಕ್ರೂ.., ಸ್ವರ ಹೊಮ್ಮಿಸುತ್ತದೆ. ಒಂದೆಡೆ ನೆಲೆ ನಿಲ್ಲುವುದಿಲ್ಲ. ಗೆದ್ದಿಲು ಪ್ರಿಯ ಪಕ್ಷಿ.
ಕರಳಿ: ಕೀಟ ಭಕ್ಷಕ ಪಕ್ಷಿ. ಹಲವಾರು ವಿಧಗಳಿವೆ. ‘ವಿ’ ಆಕಾರದ ಬಾಲವಿರುವ ಈ ಹಕ್ಕಿ ಒಣ ರೆಂಬೆ ಇಲ್ಲವೆ ವಿದ್ಯುತ್ ಕಂಬಗಳ ಮೇಲೆ ಕುಳಿತಿರುತ್ತವೆ. ಅಂಬಳೆ ಬಳಿ ಹೆಚ್ಚಾಗಿ ಕಾಣ ಬಹುದು. 

ಕೆಂಬೂತ:ಕಾವಲಿಗೆ ದೋಸೆ ಹಾಕಿದಾಗ ಬರುವ ಶ್..ಶ್..ಶ್ ಸದ್ದು ಹೊರಡಿಸುತ್ತದೆ. ಸು–ಶ್ರಾವ್ಯವಾಗಿಯೂ-ಕರ್ಕಶವಾಗಿಯೂ ಕೂಗುತ್ತದೆ. ಬಸವ, ಕಂಬಳಿ ಹುಳು, ಓತಿಕ್ಯಾತ, ಇಲಿ ತಿಂದು ಪೈರು ರಕ್ಷಿಸುತ್ತದೆ.

ಮಾದಿ ಹಕ್ಕಿ: ಗುಂಪಾಗಿ ವಾಸಿಸುವ ಸಂಚಾರಿ ಪಕ್ಷಿ. ಕೀಟ ಮತ್ತು ಲಾರ್ವಗಳನ್ನು ತಿನ್ನುತ್ತದೆ. ಕುತ್ತಿಗೆ ಬಳಿ ಕೇಸರಿ, ಕೊಕ್ಕಿನಿಂದ ರೆಕ್ಕೆವರೆಗೆ ಕಪ್ಪು ವರ್ಣ ಇರುತ್ತದೆ. ‘ವ್ಹೀ-ಟ್ವೀಟ್, ವ್ಹಿರ್-ವ್ಹಿರಿವ್ಹಿರಿ’ ಎಂದು ಶಿಳ್ಳೆ ಹಾಕುತ್ತದೆ. ಇವುಗಳೇ ಅಲ್ಲದೆ ಜೇನು ಕುಟಿಕ, ಕಾವುಟನ ಹಕ್ಕಿ, ಕುಟ್ರಹಕ್ಕಿ, ಬಾಳೆ ಗಿಳಿ, ನೀಲಹಕ್ಕಿ, ಹಸಿರು ಪಾರಿವಾಳ, ಅಪರೂಪದ ಗೋಲ್ಡನ್ ಆರಿಯೇಟ್, ಹಳದಿ ಬಣ್ಣದ ಗುಬ್ಬಚ್ಚಿ–ಗಳನ್ನು ನೋಡಬಹುದು.                                       
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT