ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಬರೆದ ಅಭ್ಯರ್ಥಿಗಳು

15 ಪಕ್ಷೇತರರು ಸ್ಪರ್ಧೆ: ಬಿರುಸುಗೊಂಡ ಪ್ರಚಾರ
Last Updated 23 ಏಪ್ರಿಲ್ 2013, 7:01 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿಯ ಚುನಾವಣೆಯಲ್ಲಿ 15 ಪಕ್ಷೇತರರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಒಟ್ಟು 20 ಪಕ್ಷೇತರರು ನಾಮಪತ್ರ ಸಲ್ಲಿಸಿದ್ದರು. ಅಂತಿಮ ದಿನದಂದು ಐವರು ಪಕ್ಷೇತರರು ಕಣದಿಂದ ಹಿಂದೆ ಸರಿದಿದ್ದಾರೆ. ಈಗ ನಾಲ್ಕು ಕ್ಷೇತ್ರದಿಂದ ಒಟ್ಟು 47 ಮಂದಿ ಅಖಾಡದಲ್ಲಿದ್ದಾರೆ. ಪ್ರತಿ ಚುನಾವಣೆಯಲ್ಲೂ ಪಕ್ಷೇತರರು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಅಡ್ಡಗಾಲು ಹಾಕುತ್ತಲೇ ಬಂದಿದ್ದಾರೆ. ಜಯದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳ ಸೋಲಿಗೂ ಕಾರಣರಾಗುತ್ತಾರೆ.

1952ರಿಂದ 2008ರವರೆಗೆ ಜಿಲ್ಲೆಯಲ್ಲಿ ನಡೆದಿರುವ ಚುನಾವಣೆಗಳನ್ನು ಅವಲೋಕಿಸಿದರೆ ಈ ಬಾರಿ ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದೆ. 2008ರ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ 40 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇದರಲ್ಲಿ 15 ಮಂದಿ ಪಕ್ಷೇತರರು ಇದ್ದರು.

1994ರ ಚುನಾವಣೆಯಲ್ಲಿ ಜಿಲ್ಲೆಯ ಐದು ಕ್ಷೇತ್ರಗಳಿಂದ(ಸಂತೇಮರಹಳ್ಳಿ ಕ್ಷೇತ್ರ ಈಗ ಇಲ್ಲ) 52 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಇವರಲ್ಲಿ 21 ಪಕ್ಷೇತರರು ಇದ್ದರು. ಇಲ್ಲಿಯವರೆಗೆ ಜಿಲ್ಲೆಯಲ್ಲಿ ನಡೆದಿರುವ ವಿಧಾನಸಭಾ ಚುನಾವಣೆಯಲ್ಲಿ ಈ ಸಂಖ್ಯೆ ಇಂದಿಗೂ ದಾಖಲೆಯಾಗಿಯೇ ಉಳಿದಿದೆ. ಆದರೆ, ಆ ವರ್ಷದ ಚುನಾವಣೆಯಲ್ಲಿ ಐದು ಕ್ಷೇತ್ರಗಳಿದ್ದವು ಎನ್ನುವುದು ವಿಶೇಷ.

ಹೊಸ ದಾಖಲೆ: ಈ ಬಾರಿಯ ಚುನಾವಣೆಯಲ್ಲಿ ಎಲ್ಲ ನಾಲ್ಕು ಕ್ಷೇತ್ರದಿಂದ ಒಟ್ಟು 47 ಅಭ್ಯರ್ಥಿಗಳು ಅಖಾಡಕ್ಕೆ ಇದ್ದಾರೆ. ಇವರಲ್ಲಿ 15 ಪಕ್ಷೇತರರು ಇದ್ದಾರೆ.

ಕೊಳ್ಳೇಗಾಲ-3, ಗುಂಡ್ಲುಪೇಟೆ-2, ಚಾಮರಾಜನಗರ-5 ಹಾಗೂ ಹನೂರು ಕ್ಷೇತ್ರದಲ್ಲಿ ಐವರು ಪಕ್ಷೇತರರು ಸ್ಪರ್ಧಿಸಿದ್ದಾರೆ. 2008ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿ, ಅಭ್ಯರ್ಥಿಗಳು ಹೊಸ ದಾಖಲೆ ಬರೆದಿದ್ದಾರೆ.

ಜಿಲ್ಲೆಯ 6 ದಶಕದ ರಾಜಕೀಯ ಇತಿಹಾಸದಲ್ಲಿ 12 ಬಾರಿ ಮಾತ್ರವೇ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ. 2004ರ ಚುನಾವಣೆಯಲ್ಲಿ ಕೊಳ್ಳೇಗಾಲ ಮೀಸಲು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಎಸ್. ಬಾಲರಾಜ್ ಜಯಭೇರಿ ಬಾರಿಸಿದ್ದರು. ಆ ನಂತರ ನಡೆದ 2008ರ ಚುನಾವಣೆ ಹಾಗೂ 2009ರ ಕೊಳ್ಳೇಗಾಲ ಉಪ ಚುನಾವಣೆಯಲ್ಲೂ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿಲ್ಲ.

ಒಬ್ಬರೇ ಮಹಿಳಾ ಅಭ್ಯರ್ಥಿ: ಈ ಬಾರಿಯ ಚುನಾವಣೆಯಲ್ಲಿ ಇಬ್ಬರು ಮಹಿಳಾ  ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.
ಕೊಳ್ಳೇಗಾಲ ಕ್ಷೇತ್ರದಿಂದ ನಾಗರತ್ನಾ  ಎಂಬುವರು ನಾಮಪತ್ರ ಸಲ್ಲಿಸಿದ್ದರು. ಕೊನೆಯಲ್ಲಿ ಅವರು ನಾಮಪತ್ರ ಪಡೆದಿದ್ದಾರೆ. ಉಳಿದಂತೆ ಹನೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪರಿಮಳಾ ನಾಗಪ್ಪ ಕಣದಲ್ಲಿ ಇದ್ದಾರೆ.

ಹೊಂದಾಣಿಕೆ?: ಈಗ ನಾಲ್ಕು  ಕ್ಷೇತ್ರಗಳಲ್ಲೂ ರಾಷ್ಟ್ರೀಯ  ಹಾಗೂ ಪ್ರಾದೇಶಿಕ ಪಕ್ಷದಿಂದ ಕಣಕ್ಕೆ ಇಳಿದಿರುವ ಅಭ್ಯರ್ಥಿಗಳು ಭರದಿಂದ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ರಾಜಕೀಯ ಪಕ್ಷದ ಅಭ್ಯರ್ಥಿಗಳಷ್ಟು ಪ್ರಚಾರದಲ್ಲಿ ಪಕ್ಷೇತರರು ತೊಡಗಿಲ್ಲ.

ಬಿಸಿಲಿನ ಝಳ ಹೆಚ್ಚಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಪ್ರಚಾರದ ಅಬ್ಬರ ಕಡಿಮೆಯಾಗಿಲ್ಲ. ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಅಭ್ಯರ್ಥಿಗಳು ಪ್ರತಿ ಹಳ್ಳಿಗಳಿಗೆ ತಿರುಗುತ್ತಿದ್ದಾರೆ. ಕೆಲವು ಪಕ್ಷೇತರರು ರಾಜಕೀಯ ಪಕ್ಷದ ಅಭ್ಯರ್ಥಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅವರ ಪರವಾಗಿ ಸದ್ದಿಲ್ಲದೆ ಪ್ರಚಾರ ನಡೆಸಿದರೂ ಅಚ್ಚರಿಯೇನಿಲ್ಲ.

ಕಳೆದ ಚುನಾವಣೆಯಲ್ಲೂ ಇಂತಹ ಪ್ರಸಂಗ ನಡೆದಿರುವ ನಿದರ್ಶನಗಳಿವೆ. ಕೆಲವು ಪಕ್ಷೇತರರು ರಾಜಕೀಯ ಪಕ್ಷದ ಅಭ್ಯರ್ಥಿಗಳೊಂದಿಗೆ ವ್ಯಾವಹಾರಿಕ ಸಂಬಂಧ ಬೆಳೆಸಿ ಕಣದಲ್ಲಿ ತಟಸ್ಥ ನಿಲುವು ತಳೆಯುವ ಸಾಧ್ಯತೆಯೂ ಉಂಟು ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT