ಬೆಂಕಿಗೆ ಆಹುತಿಯಾದ ಸ್ಥಳದಲ್ಲಿ ಹಸಿರು ಸೃಷ್ಟಿಯ ಸಾಹಸ

7
ತಾವರಕಟ್ಟೆ ದೇವಸ್ಥಾನದ ಬಳಿ ಏಳು ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಪ್ರಾಯೋಗಿಕ ಯೋಜನೆ

ಬೆಂಕಿಗೆ ಆಹುತಿಯಾದ ಸ್ಥಳದಲ್ಲಿ ಹಸಿರು ಸೃಷ್ಟಿಯ ಸಾಹಸ

Published:
Updated:
Deccan Herald

ಗುಂಡ್ಲುಪೇಟೆ: ಕಾಳ್ಗಿಚ್ಚಿನಿಂದಾಗಿ ಮರಗಿಡಗಳೆಲ್ಲ ನಾಶವಾಗಿ ಪಾಳು ಭೂಮಿಯಂತಾಗಿದ್ದ ಪ್ರದೇಶದಲ್ಲಿ ಮತ್ತೆ ಹಸಿರು ಸೃಷ್ಟಿಸಲು ಮುಂದಾಗಿರುವ ಅರಣ್ಯ ಇಲಾಖೆ, ಏಳು ಎಕರೆ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಬಿದಿರು ಸೇರಿದಂತೆ ವಿವಿಧ ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸುತ್ತಿದೆ. 

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ವಲಯದಲ್ಲಿ 2014ರ ಆಗಸ್ಟ್‌ನಲ್ಲಿ ಬೆಂಕಿ ಬಿದ್ದು ಮಂಗಲ ಗೇಟ್‌ನಿಂದ ತಾವರಗಟ್ಟೆ ಸುತ್ತಮುತ್ತ ಪ್ರದೇಶದ ಸುಮಾರು 400ರಿಂದ 450 ಹೆಕ್ಟೇರ್ ಕಾಡು ಸುಟ್ಟು ಕರಕಲಾಗಿತ್ತು. 2017ರಲ್ಲಿ ಬಂಡೀಪುರ ಆನೆ ಕ್ಯಾಂಪಿನ ಬಳಿ ಬೆಂಕಿ ಬಿದ್ದು ಸುಮಾರು 8 ರಿಂದ 10 ಎಕರೆ ಅರಣ್ಯ ಪ್ರದೇಶ ನಾಶವಾಗಿತ್ತು. 

ಬರಡಾಗಿದ್ದ ಈ ಪ್ರದೇಶದಲ್ಲಿ ಲಂಟಾನಾ ಹಾಗೂ ಇನ್ನಿತರ ಕಳೆ ಗಿಡಗಳು ಬೆಳೆದಿದ್ದವು. ಪಾಳು ಭೂಮಿಯಾಗಿದ್ದ ಈ ಪ್ರದೇಶದಲ್ಲಿ ಏಳು ಎಕರೆ ಜಾಗ ಗುರುತಿಸಿ, ಅಲ್ಲಿ ಪ್ರಾಯೋಗಿಕವಾಗಿ ಹಣ್ಣುಗಳ ಗಿಡಗಳನ್ನು ನೆಟ್ಟಿದೆ. 

ಬಂಡೀಪುರ ಅರಣ್ಯ ಪ್ರದೇಶದಲ್ಲಿ ತಾವರಕಟ್ಟೆ ಮಹದೇಶ್ವರ ದೇವಸ್ಥಾನವಿದ್ದು, ಇಲ್ಲಿ ಒಂದು ಕೆರೆ ಇದೆ. ಇಲ್ಲಿ ಪ್ರಾಣಿಗಳಿಗೆ ಉತ್ತಮವಾಗಿ ಮೇವು ಮತ್ತು ನೀರು ದೊರಕುತ್ತಿತ್ತು. ಬಿದಿರು ಮೆಳೆಗಳಿಂದಾಗಿ ಪರಿಸರ ಇನ್ನಷ್ಟು ತಂಪಾಗಿತ್ತು. ಕೆರೆ ಇದ್ದುದರಿಂದ ಈ ಭಾಗದಲ್ಲಿ ಪ್ರಾಣಿಗಳ ಓಡಾಟವೂ ಹೆಚ್ಚಿತ್ತು. ಹೀಗಾಗಿ, ಇದು ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿ ಬದಲಾಗಿತ್ತು. ಆದರೆ, ಬೆಂಕಿಗೆ ಆಹುತಿಯಾದ ನಂತರ ಕಳೆ ಗಿಡ ಹೊರತು ಇಲ್ಲಿ ಬೇರೇನೂ ಬರಲಿಲ್ಲ. ಇಲಾಖೆ ಈ ಭಾಗದಲ್ಲಿ ಗಿಡಗಳನ್ನು ನೆಟ್ಟರೂ ಪ್ರಯೋಜನವಾಗಲಿಲ್ಲ. 

ಪ್ರಾಯೋಗಿಕ ಯೋಜನೆ: ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ದಟ್ಟವಾಗಿ ಲಂಟಾನ ಬೆಳೆದಿದ್ದರಿಂದ ಆ ಭಾಗದಲ್ಲಿ ಆಶ್ರಯ ಪಡೆದಿರುವ ಪ್ರಾಣಿಗಳಿಗೆ ಆಹಾರಕ್ಕೆ ತೊಂದರೆಯಾಯಿತು. ಲಂಟಾನ ‌ಗಿಡಗಳನ್ನು ತೆರವುಗೊಳಿಸಿದರೂ ಹಸಿರು ಬೆಳೆಯಲಿಲ್ಲ. ಹಾಗಾಗಿ, ಇಲ್ಲಿ ಹಸಿರು ಸೃಷ್ಟಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಾಯೋಗಿಕ ಯೋಜನೆಯನ್ನು ರೂಪಿಸಿದರು. ಅದಕ್ಕೆ ಮೇಲಧಿಕಾರಿಗಳಿಂದ ಅನುಮತಿ ಪಡೆದು ಪ್ರಾಣಿಗಳಿಗೆ ಆಹಾರ ನೀಡುವಂತಹ ಹುಲ್ಲು, ಬಿದಿರು, ಮಾವು, ಹಲಸು, ಅತ್ತಿ, ನೇರಳೆ, ಆಲ ಸೇರಿದಂತೆ ಹಲವು ಗಿಡಗಳನ್ನು ನೆಟ್ಟಿದ್ದಾರೆ.

ಸಣ್ಣ ಗಿಡಗಳನ್ನು ಪ್ರಾಣಿಗಳು ತಿಂದು ಹಾಕುತ್ತವೆ ಎಂಬ ಕಾರಣಕ್ಕೆ ಸೌರ ಬೇಲಿ ಅಳವಡಿಸಲಾಗುತ್ತಿದೆ. ಅರಣ್ಯದ ಒಳಭಾಗದಲ್ಲಿ ಬೇಲಿ ನಿರ್ಮಿಸುತ್ತಿರುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಇಲಾಖೆಯ ಯೋಜನೆಯನ್ನು ಬೆಂಬಲಿಸಿದ್ದಾರೆ.

ಇಂತಹ ಪ್ರಯೋಗಗಳು ನಡೆದಾಗ ಮಾತ್ರ ಕಾಡನ್ನು ಉಳಿಸಿಕೊಳ್ಳಲು ಸಾಧ್ಯ. ದೇಶದ ವಿವಿಧ ಕಡೆ ಇಂತಹ ಇಂತಹ ಪ್ರಯತ್ನಗಳು ಯಶಸ್ವಿಯಾಗಿವೆ. ಬೆಂಕಿಗೆ ಆಹುತಿಯಾದ ಜಾಗದಲ್ಲಿ ಬೇರೆ ಗಿಡಗಳನ್ನು ನೆಟ್ಟರೂ, ಅವುಗಳನ್ನು ಪ್ರಾಣಿಗಳು ತಿಂದರೆ ಏನು ಪ್ರಯೋಜನವಾಗುವುದಿಲ್ಲ. ಅದನ್ನು ರಕ್ಷಣೆ ಮಾಡಲೇ ಬೇಕಾಗುತ್ತದೆ. ಅರಣ್ಯ ಇಲಾಖೆ ಕಾರ್ಯ ಮೆಚ್ಚುವಂತಹದ್ದು ಎಂದು ಪರಿಸರ ಪ್ರೇಮಿ ಶ್ರೀಕಂಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಶ್ವತ ಬೇಲಿ ಅಲ್ಲ, ಗಿಡಗಳ ರಕ್ಷಣೆಗಾಗಿ ಅಷ್ಟೆ’

ಲಂಟಾನ ಗಿಡಗಳನ್ನು ತೆರವುಗೊಳಿಸಿ ಹಾಗೆಯೇ ಬಿಟ್ಟರೆ ಆ ಜಾಗದಲ್ಲಿ ಪಾರ್ಥೇನಿಯಂ ಹಾಗೂ ಇತರ ಕಳೆ ಗಿಡಗಳು ಬೆಳೆಯುತ್ತವೆ. ಹುಲ್ಲು ಬೆಳೆಯುವುದಕ್ಕೆ ಇವು ಬಿಡುವುದಿಲ್ಲ. ಹಣ್ಣಿನ ಜಾತಿಯ ಗಿಡಗಳನ್ನು ಹಾಕಿದರೆ ಪಕ್ಷಿಗಳಿಗೂ ಉಪಯೋಗವಾಗುತ್ತದೆ. ಗಿಡಗಳನ್ನು ನೆಟ್ಟು ರಕ್ಷಣೆ ಮಾಡದಿದ್ದರೆ ಯಾವ ಪ್ರಯೋಜನವೂ ಇಲ್ಲ. ಹಾಗಾಗಿ ತಾತ್ಕಾಲಿಕವಾಗಿ ಬೇಲಿ ನಿರ್ಮಿಸಲಾಗುತ್ತದೆ. ಗಿಡಗಳು ಬೆಳೆದ ನಂತರ, ಅಂದರೆ ಎರಡು–ಮೂರು ವರ್ಷಗಳ ನಂತರ ಬೇಲಿಯನ್ನು ತೆರವುಗೊಳಿಸಲಾಗುತ್ತದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಅಂಬಾಡಿ ಮಾಧವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಂತಹ ಕ್ರಮ ಕೈಗೊಳ್ಳದಿದ್ದರೆ ದಶಕಗಳು ಕಳೆದರೂ ಈ ಭಾಗದಲ್ಲಿ ಮರ, ಹುಲ್ಲು ಬೆಳೆಯುವುದಿಲ್ಲ ಎಂಬ ಕಾರಣಕ್ಕೆ ಪಿಸಿಸಿಎಫ್‌ ಅವರ ಅನುಮತಿ ಪಡೆದು ಈ ಕಾರ್ಯಕ್ಕೆ ಕೈ ಹಾಕಿದ್ದೇವೆ. ಎರಡು ಮೂರು ವರ್ಷಗಳಲ್ಲಿ ಬಿದಿರು ಹಾಗೂ ಇನ್ನಿತರ ಗಿಡಗಳು ಒಂದು ಹಂತಕ್ಕೆ ಬರಲಿವೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !