7

ಬೆಂಬಲ ಬೆಲೆ ಏರಿಕೆ: ಬಿಜೆಪಿ ಸ್ವಾಗತ

Published:
Updated:

ಚಾಮರಾಜನಗರ: ಮುಂಗಾರು ಋತುವಿನ 14 ಬೆಳೆಗಳ ಬೆಂಬಲ ಬೆಲೆಯನ್ನು ಏರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿಗೆ ಉತ್ತೇಜನ ನೀಡಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕ ಸೋಮವಾರ ಹೇಳಿದೆ.

ಬೆಂಬಲ ಬೆಲೆಯನ್ನು ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಹೆಚ್ಚಿಸಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೂರೊಂದು ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.  ಹೆಸರುಕಾಳು, ಭತ್ತ, ಉದ್ದು, ತೊಗರಿ, ಸೋಯಾಬೀನ್, ಶೇಂಗಾ ಸೇರಿದಂತೆ 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಿರುವುದು ರೈತ ವರ್ಗದಲ್ಲಿ ಸಂತಸ ಮೂಡಿಸಿದೆ. ರೈತರು ಉತ್ಪಾದಿಸುವ ಪ್ರತಿ ಧಾನ್ಯವನ್ನೂ ಸರ್ಕಾರ ಖರೀದಿಸಲು ಮುಂದಾಗಿದೆ. ರೈತರ ವರಮಾನ ಇಮ್ಮಡಿಗೊಳಿಸಲು ಬಹುಮುಖವಾಗಿಯೂ ಗಮನ ಹರಿಸಿದೆ ಎಂದು ಹೇಳಿದರು.

ಹನಿ ನೀರಾವರಿಗೆ ವಿಶೇಷ ಗಮನ ಹರಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಮಣ್ಣಿನ ಆರೋಗ್ಯ ಪರೀಕ್ಷೆ, ಫಸಲ್ ಬಿಮಾ ಯೋಜನೆ, ಪಂಡಿತ್‌ ದೀನ್‌ದಯಾಳ್ ಉಪಾಧ್ಯಾಯ ಕೃಷಿ ಶಿಕ್ಷಣ ಯೋಜನೆ, ಹೈನುಗಾರಿಕೆಗೆ ಉತ್ತೇಜನ ನೀಡಲು ರಾಷ್ಟ್ರೀಯ ಗೋಕುಲ್ ಮಿಷನ್‌ ಸೇರಿದಂತೆ ಗೊಬ್ಬರದ ಕೊರತೆಯನ್ನು ನೀಗಿಸಿ ಹಲವು ರೈತಪರ ಯೋಜನೆಗಳನ್ನು ನೀಡಿದೆ ಎಂದು ಹೇಳಿದರು.

ವಚನ ಭ್ರಷ್ಟರು:  ಪೂರ್ಣ ಪ್ರಮಾಣದ ಸಾಲಮನ್ನಾ ಮಾಡುವುದಾಗಿ ರೈತರಿಗೆ ಮಾತು ಕೊಟ್ಟಿದ್ದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಸುಸ್ತಿಯಾಗಿರುವ ಬೆಳೆ ಸಾಲಗಳನ್ನು ಮಾತ್ರ ಮನ್ನಾ ಮಾಡಿ ವಚನ ಭ್ರಷ್ಟರಾಗಿದ್ದಾರೆ ಎಂದು ಆರೋಪಿಸಿದರು.

ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿ ಎನ್ನುವುದನ್ನು ಮರೆತಿದ್ದಾರೆ. ನಾಲ್ಕು ಜಿಲ್ಲೆಗಳಿಗೆ ಮಾತ್ರ ಅವರು ಮುಖ್ಯಮಂತ್ರಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು. 

ಪಕ್ಷದ ಪ್ರಧಾನ ಕಾರ್ಯದರ್ಶಿ ನಾಗೇಂದ್ರಸ್ವಾಮಿ, ರೈತ ಮೋರ್ಚಾ ಅಧ್ಯಕ್ಷ ಪುಟ್ಟಬಸಪ್ಪ, ಮುಖಂಡರಾದ ಶಿವರುದ್ರಸ್ವಾಮಿ, ಪುರುಷೋತ್ತಮ್‌ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !