ಪೊಟ್ಯಾಷ್‌ ಅಭಾವ: ರೈತರಿಗೆ ಬೆಲೆ ಏರಿಕೆ ಬಿಸಿ, ರೈತ ಸಂಪರ್ಕ ಕೇಂದ್ರಗಳ ಬಳಿ ಸರದಿ

7
ಯಳಂದೂರಿನ ಗೊಬ್ಬರದ ಅಂಗಡಿ

ಪೊಟ್ಯಾಷ್‌ ಅಭಾವ: ರೈತರಿಗೆ ಬೆಲೆ ಏರಿಕೆ ಬಿಸಿ, ರೈತ ಸಂಪರ್ಕ ಕೇಂದ್ರಗಳ ಬಳಿ ಸರದಿ

Published:
Updated:
Deccan Herald

ಯಳಂದೂರು: ತಾಲ್ಲೂಕಿನಲ್ಲಿ ಭತ್ತದ ಇಳುವರಿಗೆ ಬಳಸುವ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಕಡಿಮೆ ಬೆಲೆಗೆ ಕೃಷಿಕರಿಗೆ ಲಭಿಸುವ ಪೊಟ್ಯಾಷ್‌ ಗೊಬ್ಬರದ ಬೆಲೆ ದಿಢೀರನೆ ಏರಿಕೆಯಾಗಿದೆ. ಇದರಿಂದ ವಿವಿಧ ತಾಲ್ಲೂಕಿನ ರೈತರು ಪೊಟ್ಯಾಷ್‌ಗಾಗಿ ಪಟ್ಟಣದ ಅಂಗಡಿಗಳು ಮತ್ತು ರೈತ ಸಂಪರ್ಕ ಕೇಂದ್ರಗಳ ಬಳಿ ಸರದಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ.

ಯೂರಿಯಾ ಮತ್ತು ಇತರ ರಸಗೊಬ್ಬರಗಳು ಎಲ್ಲೆಡೆ ಸಿಗುತ್ತವೆ. ಇವುಗಳ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ಆದರೆ, ₹700ಕ್ಕೆ ಸಿಗುತ್ತಿದ್ದ ಪೊಟ್ಯಾಷ್‌ ಮಾತ್ರ ದಿಢೀರನೆ ₹ 900ಕ್ಕೆ ಏರಿದೆ. ಕೊಳ್ಳೇಗಾಲ ಮತ್ತು ಯಳಂದೂರು ಪಟ್ಟಣದಲ್ಲಿಯೂ ಇದು ಲಭಿಸುತ್ತಿಲ್ಲ. ಹಾಗಾಗಿ, ಸಂತೇಮರಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಸಿಗುವ ಭರವಸೆ ಇದೆ ಎನ್ನುತ್ತಾರೆ ಕೃಷಿಕ ಕೊಳ್ಳೇಗಾಲ ರೈತ ಪ್ರಕಾಶ್.

ತಾಲ್ಲೂಕಿನಾದ್ಯಂತ ಬಿತ್ತನೆ ಚಟುವಟಿಕೆ ಪೂರ್ಣಗೊಂಡಿದೆ. ಇನ್ನೂ ಕೆಲ ಬೇಸಾಯಗಾರರು ನಾಟಿ ಮಾಡಲು ಸಿದ್ಧತೆ ನಡೆಸಿದ್ದಾರೆ. ಆದರೂ, ರಸಗೊಬ್ಬರ ಅಭಾವ ತಲೆದೋರದಂತೆ ಕ್ರಮ ವಹಿಸಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ದೊಡ್ಡೇಗೌಡ ಮಾಹಿತಿ ನೀಡಿದರು.

ಈ ಬಾರಿ 3,125 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಲಾಗಿದೆ. 600 ಟನ್‌ ಯೂರಿಯಾಕ್ಕೆ ಬೇಡಿಕೆ ಇದೆ. ರಸಗೊಬ್ಬರ
ಪೂರೈಕೆಯನ್ನು ಯಾವುದೇ ಸಹಕಾರ ಸಂಸ್ಥೆಗಳು ವಹಿಸಿಕೊಂಡಿಲ್ಲ. ಖಾಸಗಿ ಅಂಗಡಿಗಳಿಂದಲೇ ನೀಡಲಾಗುತ್ತದೆ. ತಾಲ್ಲೂಕಿನಲ್ಲಿ 4 ರಸಗೊಬ್ಬರ ಅಂಗಡಿಗಳಿಗೆ ಭೇಟಿ ನೀಡಿ ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !