ಭಾನುವಾರ, ಮಾರ್ಚ್ 29, 2020
19 °C
ಹಣ್ಣು, ಹೂ, ತರಕಾರಿಗಳಿಗೆ ಬಾರದ ಬೇಡಿಕೆ; ಬುಧವಾರದ ನಂತರ ದರ ಹೆಚ್ಚಾಗುವ ಸಾಧ್ಯತೆ

ಮಳೆ, ಶೀತಗಾಳಿಗೆ ನಲುಗಿದ ಮಾರುಕಟ್ಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಾಮರಾಜನಗರ: ಶ್ರಾವಣ ಮಾಸದ ಆರಂಭದಿಂದ ಮಾರುಕಟ್ಟೆಯ ಚಟುವಟಿಕೆಗಳು ಗರಿಗೆದರಲಿವೆ ಎನ್ನುವ ಮಾರಾಟಗಾರರ ಕನಸಿಗೆ ಮಳೆರಾಯ ತಣ್ಣೀರೆರಚಿದ್ದಾನೆ. ಸತತವಾಗಿ ಸುರಿಯುತ್ತಿರುವ ಮಳೆ ಹಾಗೂ ಬೀಸುತ್ತಿರುವ ಶೀತಗಾಳಿಗೆ ತರಕಾರಿ, ಹಣ್ಣುಗಳೊಂದಿಗೆ ಹೂವು ಕೂಡ ಕೊಳೆಯುತ್ತಿವೆ. ಬೇಡಿಕೆಯೂ ಕಡಿಮೆಯಾಗಿದೆ. 

ಹಾಗಾಗಿ, ಮಾರುಕಟ್ಟೆಯಲ್ಲಿ ಹಣ್ಣು‌, ತರಕಾರಿ, ಹೂವುಗಳ ಬೆಲೆಯಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ. ಆದರೆ, ಈ ವಾರ ಬಕ್ರೀದ್‌ (ಬುಧವಾರ) ಮತ್ತು ವರಮಹಾಲಕ್ಷ್ಮಿ (ಶುಕ್ರವಾರ) ಹಬ್ಬಗಳು ಇರುವುದರಿಂದ ಧಾರಣೆ ಏರಿಕೆಯಾಗುವ ಸಾಧ್ಯತೆ ಇದೆ. 

ಟೊಮೆಟೊ ಕೊಂಚ ಚೇತರಿಕೆ: ಕಳೆದ ವಾರ ಮಾರುಕಟ್ಟೆಯಲ್ಲಿ ₹5ಕ್ಕೆ ಮಾರಾಟವಾಗುತ್ತಿದ್ದ ಕೆ.ಜಿ. ಟೊಮೆಟೊ ಈ ವಾರ ₹8ರಿಂದ ₹10ಕ್ಕೆ ಸಿಗುತ್ತಿದೆ. ಆಗಸ್ಟ್‌ 19ರಂದು ಒಂದು ದಿನ ಮಾತ್ರ ಮಾರಾಟ ಮಳಿಗೆಯಲ್ಲಿ ಆಶ್ಚರ್ಯಕರ ಎಂಬಂತೆ ಕೆ.ಜಿ. ಟೊಮೆಟೊ ₹20ರಿಂದ ₹25ಕ್ಕೆ ಮಾರಾಟವಾಯಿತು ಎನ್ನುತ್ತಾರೆ ಟೊಮೆಟೊ ಬೆಳೆದು ಮಾರುಕಟ್ಟೆಗೆ ಹಾಕಿದ ರೈತರು.

ಕ್ಯಾರೆಟ್‌ನ ಬೆಲೆ ₹10 ಅಗ್ಗ ಆಗಿದೆ. ಹೋದ ವಾರ ಕ್ಯಾರೆಟ್‌ನ ಬೆಲೆ ₹40 ಇತ್ತು.

ಹಣ್ಣುಗಳ ಪೈಕಿ ಕಪ್ಪು ದ್ರಾಕ್ಷಿಯ ಬೆಲೆ ತುಟ್ಟಿಯಾಗಿದೆ. ಕಳೆದ ವಾರಕ್ಕಿಂತ ₹20 ಹೆಚ್ಚಾಗಿದೆ. ಪ್ರಸ್ತುತ ₹80ರಿಂದ ₹100ಕ್ಕೆ ಮಾರಾಟವಾಗುತ್ತಿದೆ. ಉಳಿದಂತೆ ಕಿತ್ತಳೆ, ಸೀಬೆ ಕಾಯಿ, ಸೀತಾಫಲ, ಮೂಸಂಬಿ, ಅನನಾಸು ಹಾಗೂ ಬೇರಿಕಾಯಿಗಳ ದರದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ.

‘ಮಳೆ ಹಾಗೂ ಶೀತಗಾಳಿಗೆ ತರಕಾರಿಗಳು ಬೇಗ ಕೆಡುತ್ತವೆ. ಇದರಿಂದ ತರಕಾರಿ, ಹಣ್ಣುಗಳನ್ನು ಹೆಚ್ಚು ದಿನ ಸಂಗ್ರಹಿಸಿಡಲು ಸಾಧ್ಯವಿಲ್ಲ. ತರಕಾರಿ ಖರೀದಿ ಮಾಡುವವರು ಸ್ವಚ್ಛ ಹಾಗೂ ಶುದ್ಧತೆಯನ್ನು ನಿರೀಕ್ಷಿಸುತ್ತಾರೆ. ಕೆಟ್ಟ ತರಕಾರಿಯನ್ನು ಖರೀದಿಸುವುದಿಲ್ಲ. ಇದರಿಂದ ವ್ಯಾಪಾರರಿಗೆ ಹೆಚ್ಚು ನಷ್ಟ’ ಎನ್ನುವುದು ಹಾಪ್‌ಕಾಮ್ಸ್‌ ವ್ಯಾಪಾರಿ ಟಿ.ಮಹೇಶ್ ಅಭಿಪ್ರಾಯ.

ಹೂವಿನ ರಕ್ಷಣೆ ಕಷ್ಟಸಾಧ್ಯ: ‘ಮಳೆಯ ಅಬ್ಬರಕ್ಕೆ ಹೂವು ಕೊಳೆಯುತ್ತವೆ. ಇದನ್ನು ರಕ್ಷಿಸಿಡಲು ಕಷ್ಟಸಾಧ್ಯ. ಆದ್ದರಿಂದ ಅಂದಿನ ದಿನವೇ ಮಾರಾಟ ಮಾಡಬೇಕು. ಉಳಿದರೆ ಕಡಿಮೆ ಬೆಲೆಗೆ ಮಾರುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎನ್ನುವುದು ಹೂವಿನ ವ್ಯಾಪಾರಿಗಳ ಅಳಲು.

ಕಳೆದ ವಾರಕ್ಕೆ ಹೋಲಿಸಿದರೆ, ಕನಕಾಂಬರ ಈ ವಾರ ಸ್ವಲ್ಪ ಚೇತರಿಸಿಕೊಂಡಿದೆ. ಉಳಿದ ಯಾವ ಹೂವುಗಳ ದರದಲ್ಲೂ ದೊಡ್ಡ ಬದಲಾವಣೆಯಾಗಿಲ್ಲ.

ಮೊಟ್ಟೆಗೆ ಬೇಡಿಕೆ ಕುಸಿತ

ಮಳೆರಾಯನ ಅಬ್ಬರ ಹಾಗೂ ಶ್ರಾವಣ ಮಾಸದ ಪರಿಣಾಮ ಮೊಟ್ಟೆಗೂ ತಟ್ಟಿದೆ. ಶ್ರಾವಣ ಮಾಸದಲ್ಲಿ ಹೆಚ್ಚು ಪೂಜಾ ಕಾರ್ಯಕ್ರಮಗಳು, ಮದುವೆ ಶುಭ ಸಮಾರಂಭಗಳು ನಡೆಯುತ್ತವೆ. ಸಾಮಾನ್ಯವಾಗಿ ಈ ಮಾಸದಲ್ಲಿ ಮೊಟ್ಟೆಗೆ ನಿರೀಕ್ಷಿತ ಮಟ್ಟದಲ್ಲಿ ಬೇಡಿಕೆ ಇರುವುದಿಲ್ಲ. ಜಿಲ್ಲಾ ಕೇಂದ್ರದಲ್ಲಿ ಫಾರಂ ಕೋಳಿಮೊಟ್ಟೆ ಬಳಕೆಯಲ್ಲಿದೆ. ನಾಡ ಕೋಳಿ ಮೊಟ್ಟೆಗೆ ಬೇಡಿಕೆ ಇಲ್ಲ. ಕಳೆದ ವಾರ ಮಾರುಕಟ್ಟೆಯಲ್ಲಿ 100 ಮೊಟ್ಟೆಗೆ ₹480 ಬೆಲೆ ಇತ್ತು. ಸೋಮವಾರ ₹362 ಇತ್ತು.

‘ಶ್ರಾವಣ ಮಾಸದಲ್ಲಿ ಜನರು ಹೆಚ್ಚಾಗಿ ಮೊಟ್ಟೆ ತಿನ್ನುವುದಿಲ್ಲ. ಬುಧವಾರದ ನಂತರ ಬೇಡಿಕೆ ಏರಲಿದೆ. ಜೊತೆಗೆ ಬೆಲೆ ಹೆಚ್ಚಳ ಆಗುವ ಸಾಧ್ಯತೆ ಇದೆ’ ಎಂದು ಹೇಳುತ್ತಾರೆ ಮೊಟ್ಟೆ ವ್ಯಾಪಾರಿ ನವೀನ್ ಕುಮಾರ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು