ಸಾಲಮನ್ನಾ: ಮುಖ್ಯಮಂತ್ರಿ ವಿರುದ್ಧ ಪ್ರತಿಭಟನೆ

7

ಸಾಲಮನ್ನಾ: ಮುಖ್ಯಮಂತ್ರಿ ವಿರುದ್ಧ ಪ್ರತಿಭಟನೆ

Published:
Updated:
Deccan Herald

ಚಾಮರಾಜನಗರ: ರೈತರ ಸಾಲ ಮನ್ನಾ ಮಾಡದೇ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಮಾತು ತಪ್ಪಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಬುಧವಾರ ಜಿಲ್ಲಾಡಳಿತ ಭವನದ ಮುಂದಿರುವ ಅಂಬೇಡ್ಕರ್‌ ಪ್ರತಿಮೆ ಬಳಿ ಮೌನ ಪ್ರತಿಭಟನೆ ನಡೆಸಿದರು.

ಕೈ ಮತ್ತು ತಲೆಗೆ ಕಪ್ಪುಪಟ್ಟಿ ಕಟ್ಟಿಕೊಂಡಿದ್ದ ಪ್ರತಿಭಟನಾಕಾರರು, ಬೇಡಿಕೆಗಳನ್ನು ಹೊಂದಿದ್ದ ಮನವಿ ಪತ್ರವನ್ನು ಜಿಲ್ಲಾಧಿಕಾರಿಯವರ ಮೂಲಕ ಮುಖ್ಯಮಂತ್ರಿ ಅವರಿಗೆ ಸಲ್ಲಿಸಿದರು.

ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ಹಾಗೂ ವಿಧಾನಸೌಧದಲ್ಲಿ ರೈತ ಮುಖಂಡರಿಗೆ ನೀಡಿದ ಭರವಸೆಯಂತೆ ಮೊದಲನೇ ಹಂತದಲ್ಲಿ ರೈತರ ಎಲ್ಲ ಬೆಳೆ ಸಾಲಗಳನ್ನು ಮನ್ನಾ ಮಾಡಬೇಕು. 2ನೇ ಹಂತದಲ್ಲಿ ರೈತರು ಪಡೆದಿರುವ ಎಲ್ಲ ರೀತಿಯ ಕೃಷಿ ಚಟುವಟಿಕೆಯ ಸಾಲ, ಪರಿಕರಗಳನ್ನು ಕೊಳ್ಳಲು ಮಾಡಿರುವ ಸಾಲಗಳನ್ನು ಮನ್ನಾ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಜೊತೆಗೆ, ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ಗ್ರಾಮೀಣ ಜನರಿಗೆ ನೀಡಿರುವ ಕುರಿ, ಹಸು, ಕೋಳಿ ಸಾಕಾಣಿಕೆ, ಎತ್ತಿನ ಗಾಡಿ ಸಾಲಗಳನ್ನು ಮತ್ತು ಮಹಿಳಾ ಸ್ವ–ಸಹಾಯ ಸಂಘಗಳ ಸಾಲವನ್ನೂ ಮನ್ನಾ ಮಾಡುವಂತೆ ಒತ್ತಾಯಿಸಿದರು.

ಹೋರಾಟದ ಎಚ್ಚರಿಕೆ: ಮುಖ್ಯಮಂತ್ರಿ ಅವರು ಸಾಲ ಮನ್ನಾ ಘೋಷಣೆ ಮಾಡುವವರೆಗೂ ನಿರಂತರವಾಗಿ ವಿವಿಧ ರೀತಿಯ ಚಳವಳಿಗಳನ್ನು ಮುಂ‌ದುವರೆಸಲು ಸಂಘ ತೀರ್ಮಾನಿಸಿದೆ. ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಡಿಎಸ್‌ನ ಎಲ್ಲ 37 ಶಾಸಕರ ಮನೆ ಮತ್ತು ಕಚೇರಿ ಮುಂದೆ ಸತ್ಯಾಗ್ರಹ ನಡೆಸಲಾಗುವುದು. ಜೊತೆಗೆ ಮುಖ್ಯಮಂತ್ರಿಗಳು ಭಾಗವಹಿಸುವ ಎಲ್ಲ ಸಾರ್ವಜನಿಕ ಸಭೆ ಮತ್ತು ಸಮಾರಂಭಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ. ಸಿದ್ದರಾಜು ಹೇಳಿದ್ದಾರೆ.

ಸಂಕಷ್ಟದಲ್ಲಿರುವ ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಲು ಹಾಗೂ ಗ್ರಾಮೀಣ ಪ್ರದೇಶದ ಆರ್ಥಿಕ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ ಶೇ 65 ಮತ್ತು ರಾಜ್ಯ ಸರ್ಕಾರ ಶೇ 35ರ ಅನುಪಾತದಲ್ಲಿ ವಿಶೇಷ ಪ್ಯಾಕೇಜ್‌ ನೀಡಬೇಕು ಎಂದು ಒತ್ತಾಯಿಸಲು ರಾಜ್ಯದ ಎಲ್ಲ ಸಂಸದರ ಮನೆ ಅಥವಾ ಕಚೇರಿ ಮುಂದೆ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ರೈತ ಮುಖಂಡರಾದ ಎ.ಎಂ. ಮಹೇಶ್ ಪ್ರಭು, ಶಿವರಾಂ, ಹೆಬ್ಬಸೂರು ಬಸವಣ್ಣ, ಟಿ.ಎಸ್‌. ಶಾಂತ ಮಲ್ಲಪ್ಪ, ಶಿವಮಲ್ಲು, ಮರಿಯಾಲ ನಾಗರಾಜು, ಎಚ್‌.ಸಿ. ಮಹೇಶ್ ಕುಮಾರ್‌, ಲಿಂಗರಾಜು ಉಮ್ಮತ್ತೂರು, ಮಹೇಶ ಮರಿಯಾಲ, ಮಾಧುಸ್ವಾಮಿ, ಲಕ್ಷ್ಮಣ, ಬಾಬು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !