ಮಂಗಳವಾರ, ಮಾರ್ಚ್ 2, 2021
29 °C
ಭೀಮರಾವ್ ರಾಮ್‌ಜಿ ಪ್ರೌಢಶಾಲೆಯಲ್ಲಿ ಆಟಕ್ಕೆ ಒತ್ತು

ಕ್ರೀಡೆಗಳಲ್ಲಿ ಪ್ರಶಸ್ತಿ ಗಿಟ್ಟಿಸುವ ಶಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಯಳಂದೂರು: ಪಠ್ಯಕ್ಕೆ ನೀಡಿದಷ್ಟು ಆದ್ಯತೆಯನ್ನು ಪಠ್ಯೇತರ ಚಟುವಟಿಕೆಗಳಿಗೂ ನೀಡಬೇಕು. ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ಮಕ್ಕಳಿಗೆ ಕ್ರೀಡಾ ವಿಭಾಗದಲ್ಲಿ ತರಬೇತಿ ನೀಡಿದರೆ ಸಾಧನೆ ಮಾಡುತ್ತಾರೆ. ಶಿಕ್ಷಕರೂ ಆಟದಲ್ಲಿ ಆಸಕ್ತಿ ಹೊಂದಿದ್ದರೆ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿ ತಾಲ್ಲೂಕಿನ ಹೊನ್ನೂರು ಡಾ. ಭೀಮರಾವ್ ರಾಮ್‌ಜಿ ಪ್ರೌಢಶಾಲೆ.

ತಾಲ್ಲೂಕು ಹೊನ್ನೂರು ಖಾಸಗಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮೋಟರ್‌ ಬೈಕ್‌ ಸ್ಪರ್ಧೆಯಲ್ಲೂ ಹಾಗೂ ದೈಹಿಕ ಶಿಕ್ಷಕರು ಈಜು ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಭಾಗವಹಿಸುವ ಮೂಲಕ ಮಕ್ಕಳಿಗೂ ಮಾದರಿಯಾಗಿದ್ದಾರೆ. ವಿದ್ಯಾರ್ಥಿಗಳ ಆಸಕ್ತಿಯ ಕ್ಷೇತ್ರಗಳನ್ನು ಗುರುತಿಸಿ ತರಬೇತಿ ನೀಡುವ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಗಳಿಗೂ ಅಣಿಗೊಳಿಸಿದ್ದಾರೆ.

‘ಪ್ರತಿದಿನ ಮುಂಜಾನೆ ಮತ್ತು ಸಂಜೆ ಮಕ್ಕಳ ಆಸಕ್ತಿಯನ್ನು ಗುರುತಿಸಿ ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತದೆ. ಮೂರು ವರ್ಷಗಳಿಂದಲೂ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ ಕ್ರೀಡಾ ವಿಭಾಗದಲ್ಲಿ ಪ್ರಶಸ್ತಿಗಾಗಿ ಸೆಣಸುತ್ತಲೇ ಬಂದಿದ್ದೇವೆ. ಗಂಡು ಮತ್ತು ಹೆಣ್ಣು ಮಕ್ಕಳು ಕೊಕ್ಕೊ ಮತ್ತು ಬಾಲ್‌ ಬ್ಯಾಡ್ಮಿಂಟನ್‌ ಆಟದಲ್ಲಿ ಪ್ರತಿ ವರ್ಷ ಜಿಲ್ಲಾಮಟ್ಟದಲ್ಲಿ ಪ್ರಶಸ್ತಿ ಗೆಲುವು ಸಾಧಿಸುತ್ತಿದ್ದಾರೆ. ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ವಿಶ್ವಾಸವಿದೆ’ ಎನ್ನುತ್ತಾರೆ ದೈಹಿಕ ಶಿಕ್ಷಣ ಶಿಕ್ಷಕ ಪರಶಿವ.

ಜಿಲ್ಲಾಮಟ್ಟದ ಆಯ್ಕೆಗೆ ನಡೆದ ಸ್ಪರ್ಧೆಯಲ್ಲಿ 1,500 ಮೀಟರ್‌ ಓಟದಲ್ಲಿ ಸಿದ್ಧಪ್ಪ ಪ್ರಥಮ ಸ್ಥಾನ ಹಾಗೂ 800 ಮೀಟರ್‌ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮಹದೇವ ಪ್ರಸಾದ್ 400 ಮೀಟರ್ ಪ್ರಥಮ ಸ್ಥಾನ ಪಡೆದು 100 ಮತ್ತು 200 ಮೀಟರ್‌ ಓಟದಲ್ಲೂ ಪ್ರಶಸ್ತಿ ಗಿಟ್ಟಿಸಿದ್ದಾನೆ. ಸಿಂಧೂ 800 ಮೀಟರ್‌, ಚಂದ್ರಶೇಖರ್ 3,000 ಮೀಟರ್‌ ಓಟದಲ್ಲಿ ಬಹುಮಾನ ಗಳಿಸಿದರೆ, 4x100 ಮೀಟರ್ ರಿಲೆಯಲ್ಲಿ ಶಿವಬಾಬು ಮತ್ತು ಮಧುಶ್ರೀ ತಂಡ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಅರ್ಹತೆ ಪಡೆದಿದೆ ಎಂದು ಮುಖ್ಯಶಿಕ್ಷಕ ಪ್ರಮೋದ್ ಚಂದ್ರನ್ ಮಾಹಿತಿ ನೀಡಿದರು.

ಮಕ್ಕಳ ಸಾಧನೆಗೆ ಕಾರ್ಯದರ್ಶಿ ಡಾ.ಎನ್‌.ಪ್ರಸಾದ್, ಶಿಕ್ಷಕರು ಮತ್ತು ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ ಅಗತ್ಯ ನೆರವು ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು