ನೆಲದ ಪರಂಪರೆ ಉಳಿಸುವ ಪ್ರಯೋಗ ನಡೆಯಲಿ

7
ಸುಗಮ ಸಂಗೀತ ತರಬೇತಿ ಶಿಬಿರಕ್ಕೆ ಪ್ರೊ.ಜಿ.ಎಸ್.ಜಯದೇವ ಚಾಲನೆ

ನೆಲದ ಪರಂಪರೆ ಉಳಿಸುವ ಪ್ರಯೋಗ ನಡೆಯಲಿ

Published:
Updated:
Deccan Herald

ಚಾಮರಾಜನಗರ: ನೆಲದ ಪರಂಪರೆ, ಸ್ಥಳೀಯ ಜನಪದ ಪ್ರಕಾರಗಳು ಉಳಿಯುವಂತಹ ಪ್ರಯೋಗಗಳು ಎಲ್ಲೆಡೆ ನಡೆಯಬೇಕು ಎಂದು ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್.ಜಯದೇವ ಅಭಿಪ್ರಾಯಪಟ್ಟರು.

ಪಟ್ಟಣದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್.ಪಟೇಲ್‌ ಸಭಾಂಗಣದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಗುರುವಾರ ಹಮ್ಮಿಕೊಂಡಿದ್ದ ಮೂರು ದಿನಗಳ ಸುಗಮ ಸಂಗೀತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹಾಡಿನ ಸ್ವರೂಪ ಎಂದಿಗೂ ಬೆರಗು ಮೂಡಿಸುತ್ತದೆ. ಸಂಗೀತ– ಸಾಹಿತ್ಯವನ್ನು ಆಸ್ವಾದಿಸಬೇಕು. ಇಲ್ಲವಾದರೆ ಪ್ರಾಣಿ ಸದೃಶರಾಗುತ್ತೇವೆ. ನೆಲದ ಪರಂಪರೆಗಳನ್ನು ಅದರಂತೆಯೇ ಉಳಿಸಿಕೊಳ್ಳುವ ಪ್ರಯೋಗಗಳು ನಡೆಯಬೇಕಿದೆ’ ಎಂದು ಹೇಳಿದರು.

‘ಗಡಿ ಜಲ್ಲೆಯಲ್ಲಿ ರಾಜಕೀಯ ಅಸಡ್ಡೆ ಎದ್ದು ಕಾಣುತ್ತಿದೆ. ರಾಜಕೀಯ ಧುರೀಣರು ಕಡೆಗಣಿಸಿದರೂ ನಮ್ಮ ಜಿಲ್ಲೆಯ ಸಂಸ್ಕೃತಿ, ಪರಂಪರೆ ಹಿಂದೆ ಬಿದ್ದಿಲ್ಲ. ನಾಟ್ಯ, ನಟನೆ ಹಾಗೂ ಜನಪದ ಕ್ಷೇತ್ರದ ಅದ್ಭುತ ಪ್ರತಿಭೆಗಳಿಂದ ಜಿಲ್ಲೆ ಸಾಂಸ್ಕೃತಿಕವಾಗಿ ಬೆಳಗುತ್ತಿದೆ’ ಎಂದು ಹೇಳಿದರು.

ಮಹದೇಶ್ವರ, ಮಂಟೇಸ್ವಾಮಿ ಕುರಿತ ಸಾಹಿತ್ಯ ಗೀತೆಗಳು ಮತ್ತೊಮ್ಮೆ ಕೇಳಬೇಕೆನಿಸುತ್ತವೆ. ಮಲೆಮಹದೇಶ್ವರ ಕುರಿತ ಜನಪದ ಸಾಹಿತ್ಯ ಪ್ರಪಂಚದ 2ನೇ ಸಂಗೀತ ಸಾಹಿತ್ಯವಾಗಿದೆ. ಇಂತಹ ಹಾಡಿನ ಸ್ವರೂಪ ಎಂದಿಗೂ ಬೆರಗು ಮೂಡಿಸುತ್ತದೆ. ಈ ನೆಲದಲ್ಲಿ ಸಂಗೀತ ತುಂಬಿದ ಪ್ರತಿಭೆಗಳಿದ್ದಾರೆ. ಮನುಷ್ಯನ ಹುಟ್ಟು ಸ್ವಭಾವವಾದ ಕ್ರೌರ್ಯ, ಹಿಂಸೆಯನ್ನು ಸಂಗೀತ ಕಡಿಮೆ ಮಾಡುತ್ತದೆ. ಸುಸಂಸ್ಕೃತರನ್ನಾಗಿ ಮಾಡುವ ಶಕ್ತಿ ಸಂಗೀತ– ಸಾಹಿತ್ಯದಲ್ಲಿ ಅಡಗಿದೆ ಎಂದರು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟ್ರಾರ್‌ ಅಶೋಕ ಎನ್. ಚಲವಾದಿ ಮಾತನಾಡಿ, ‘ತರಬೇತಿ ಶಿಬಿರದ ಕಾರ್ಯವ್ಯಾಪ್ತಿ ರಾಜ್ಯಕ್ಕೆ ವಿಸ್ತಾರವಾಗಬೇಕು. ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ಪ್ರತಿಭೆಗಳ ವ್ಯಕ್ತಿತ್ವ ವಿಕಸನಕ್ಕೆ ಇದು ಮೊದಲ ಮೆಟ್ಟಿಲು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ ಮಾತನಾಡಿ, ‘ಜೀವನದ ಭಾಗವಾಗಿ ಕಲೆ, ಸಂಸ್ಕೃತಿ ಇರಬೇಕು. ಜೀವನ ನಡೆಸಲು ವೃತ್ತಿ, ಪ್ರವೃತ್ತಿಯಾಗಿ ಪ್ರತಿಭೆ ಇರಬೇಕು. ವೃತ್ತಿ ಹಣ ಸಂಪಾದನೆಗೆ, ಪ್ರವೃತ್ತಿ ನಮ್ಮ ಆತ್ಮ ಸಂತೋಷಕ್ಕೆ. ಇದರಿಂದಲೇ ಪಕ್ವತೆ, ಗೌರವ ಸಿಗುತ್ತದೆ’ ಎಂದು ಹೇಳಿದರು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯ ಸಂಚಾಲಕ ಆನಂದ ಮಾದಲಗೆರೆ, ಶಿಬಿರದ ನಿರ್ದೇಶಕ ಬಿ.ಬಸವರಾಜು, ಸಂಪನ್ಮೂಲ ವ್ಯಕ್ತಿಗಳಾದ ಟಿ.ರಾಜಾರಾಮ್‌, ಸಿ.ಎಂ.ನರಸಿಂಹಮೂರ್ತಿ, ರಾಜಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !