ನಿಸರ್ಗದ ಶಿಕ್ಷಣ ಇಂದಿನ ಅಗತ್ಯ: ನಾಗೇಶ ಹೆಗಡೆ

7
ಪರಿಸರ ವಿಜ್ಞಾನ ಕುರಿತ ವಿಶೇಷ ಉಪನ್ಯಾಸ, ಸಾಕ್ಷ್ಯಚಿತ್ರ ಪ್ರದರ್ಶನ

ನಿಸರ್ಗದ ಶಿಕ್ಷಣ ಇಂದಿನ ಅಗತ್ಯ: ನಾಗೇಶ ಹೆಗಡೆ

Published:
Updated:
Deccan Herald

ಚಾಮರಾಜನಗರ: ಮನುಷ್ಯ ನಿಸರ್ಗದ ಬಗ್ಗೆ ಹೆಚ್ಚಿನ ಶಿಕ್ಷಣ ಪಡೆಯಬೇಕು. ಪರಿಸರದ ಬಗ್ಗೆ ಜ್ಞಾನ ಬೆಳೆಸಿಕೊಳ್ಳಬೇಕಿದೆ ಎಂದು ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಅಭಿಪ್ರಾಯಪಟ್ಟರು.

ಪಟ್ಟಣದ ಹೊರವಲಯದ ಡಾ.ಬಿ.ಆರ್.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪರಿಸರ ವಿಜ್ಞಾನ ಕುರಿತ ವಿಶೇಷ ಉಪನ್ಯಾಸ ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನದಲ್ಲಿ ಅವರು ಮಾತನಾಡಿದರು.

ಮನುಷ್ಯನಲ್ಲಿ ನಿಸರ್ಗಸ್ನೇಹಿ ಗುಣಗಳಿರುತ್ತವೆ. ಆದರೆ, ತಾನು ಬೆಳೆಯುತ್ತಾ ಕ್ರಮೇಣ ಪರಿಸರ ಜೀವ ವಿರೋಧಿಯಾಗುತ್ತಾನೆ. ಆದ್ದರಿಂದ, ಕಡ್ಡಾಯವಾಗಿ ನಿಸರ್ಗದ ಶಿಕ್ಷಣ ಅಗತ್ಯ ಎಂದು ಹೇಳಿದರು.

ಮನುಷ್ಯನಲ್ಲಿ ಸಂವಹನ ಕ್ರಿಯೆ ಇದ್ದರೆ ಪರಿಸರದ ಸಂರಕ್ಷಣೆ ಸಾಧ್ಯ. ಇಂದಿನ ಮೂರು ತಲೆಮಾರುಗಳಿಗೆ ಪರಿಸರದ ಬಗ್ಗೆ ಅರಿವು ಮೂಡಿದರೆ ಮುಂದಿನ 100 ತಲೆಮಾರುಗಳಿಗೆ ಪರಿಸರವನ್ನು ಉಳಿಸಿ ಬೆಳೆಸುವ ಸಾಮರ್ಥ್ಯ ಬರಲಿದೆ ಎಂದು ಹೇಳಿದರು.

ತಾಪಮಾನ ಹೆಚ್ಚಳ: ಪ್ರತಿವರ್ಷ ಭೂಮಿಯ ಮೇಲಿನ ತಾಪಮಾನ ಹೆಚ್ಚುತ್ತಲೇ ಇದೆ. ಇದರ ಪರಿಣಾಮದಿಂದಾಗಿ ಒಂದಲ್ಲೊಂದು ಅತಿಯಾದ ಕ್ರಿಯೆಗಳು ನಡೆಯುತ್ತಿವೆ. ಮಾನವನ ಚಲನೆಗೆ ದಿಗ್ಭಂದನ ಹಾಕುತ್ತಿದೆ. ಉದಾಹರಣೆಗೆ ಕೊಡಗು, ಕೆರಳದ ಜಲಪ್ರವಾಹ. ಆಧುನಿಕ ಯುಗದಲ್ಲಿ ನಾವೆಲ್ಲರೂ ಕಮರ್ಷಿಯಲ್‌ ಜಾಲಕ್ಕೆ ಸಿಲುಕಿದ್ದೇವೆ. ಇದರಿಂದಲೇ ಅನಾಹುತ, ಪ್ರಳಯಗಳು ಉಂಟಾಗುತ್ತಿವೆ’ ಎಂದರು.

ಪ್ರೊ.ಕೃಷ್ಣಮೂರ್ತಿ ಹನೂರು ಮಾತನಾಡಿ, ‘ಕೊಡಗು, ಕೇರಳದಲ್ಲಿ ಉಂಟಾದ ಜಲಪ್ರವಾಹ, ಆ ಎರಡು ಪ್ರದೇಶಗಳ ಸಮಸ್ಯೆ ಅಲ್ಲ. ಅದು ಬ್ರಹ್ಮಾಂಡದ ಸಮಸ್ಯೆ. ಇಂದು ಅಲ್ಲಿ ಸಂಭವಿಸಿದರೆ, ಮುಂದೊಂದು ದಿನ ನಮ್ಮಲ್ಲಿಯೂ ದುರಂತ ನಡೆಯಬಹುದು. ಬ್ರಹ್ಮಾಂಡದ ಭವಿಷ್ಯ ಕಷ್ಟವಿದೆ. ಈಗಲೇ ಎಚ್ಚೆತ್ತುಕೊಳ್ಳಬೇಕು’ ಎಂದರು.

ಅಭಿವೃದ್ಧಿಯ ಹೆಸರಿನಲ್ಲಿ ಇಂದು ಪರಿಸರವೇ ನಾಶವಾಗಿದೆ. ಕಾಡನ್ನು ಉಳಿಸುವ ಬಗ್ಗೆ ವಚನಕಾರರು, ವಿದ್ವಾಂಸರು, ವಿಜ್ಞಾನಿಗಳು ಎಲ್ಲರೂ ಹಿಂದಿನಿಂದಲೂ ಹೇಳುತ್ತಲೇ ಬಂದಿದ್ದಾರೆ. ಆದರೆ, ಯಾರೊಬ್ಬರೂ ಅದನ್ನು ಅರ್ಥೈಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್.ಜಯದೇವ ಮಾತನಾಡಿ, ‘ಮನುಷ್ಯ ಬದುಕಬೇಕಾದರೆ ಪ್ರಕೃತಿಯೂ ಬದುಕಬೇಕು ಎನ್ನುವ ಅಂತರ್ಗತ ಮನುಷ್ಯನಲ್ಲಿ ಇರಬೇಕು. ಇದಕ್ಕೆ ಪ್ರೇರೇಪಣೆ ನಮ್ಮಲ್ಲಿಯೇ ಇದೆ. ಕೇವಲ ಯಂತ್ರಗಳಿಂದ ಮನುಷ್ಯನೂ ಯಂತ್ರಗಳಂತೆ ವರ್ತಿಸುತ್ತಾನೆ. ಇದರಿಂದ ಸಾವಯವ ಪ್ರಕೃತಿ ಸಂಬಂಧ ಸಾಧ್ಯವಿಲ್ಲ. ಪ್ರಕೃತಿಯಲ್ಲಿ ತೊಡಗಿಸಿಕೊಳ್ಳುವ ಮನೋಧರ್ಮ ಬೆಳೆದರೆ ಮುಂದಿನ ಪೀಳಿಗೆಗೆ ಅದು ಉಳಿಯಲಿದೆ’ ಎಂದರು.

ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಶಿವಬಸವಯ್ಯ, ರಂಗಕರ್ಮಿ ಕೆ.ವೆಂಕಟರಾಜು ಇದ್ದರು.

ದೇಶದ 2ನೇ ಮರುಭೂಮಿ ಕರ್ನಾಟಕದಲ್ಲಿ 

ರಾಜಸ್ಥಾನ, ಹರಿಯಾಣಗಳಲ್ಲಿರುವ ಥಾರ್‌ ಮರುಭೂಮಿ ದೇಶದ ಮೊದಲ ಮರುಭೂಮಿಯಾದರೆ, ಕರ್ನಾಟಕದಲ್ಲಿ ಎರಡನೇ ಮರುಭೂಮಿ ಸೃಷ್ಟಿಯಾಗಲಿದೆ. ಗಣಿಗಾರಿಕೆ ಹಾಗೂ ಇನ್ನಿತರ ಭೂಗರ್ಭಗಳ ಕೊರೆತ, ಪರಿಸರ ನಾಶದ ಪರಿಣಾಮವಾಗಿ ತಾಪಮಾನ ಹೆಚ್ಚಳವಾಗಿ ಕಲಬುರ್ಗಿ, ಬಳ್ಳಾರಿ, ಚಿತ್ರದುರ್ಗ ಪ್ರದೇಶ ಮರುಭೂಮಿಯಾಗಿ ಪರಿವರ್ತನೆಗೊಳ್ಳಲಿದೆ ಎಂದು ನಾಗೇಶ ಹೆಗಡೆ ಆತಂಕ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !