ಶನಿವಾರ, ಫೆಬ್ರವರಿ 27, 2021
19 °C
ನಗರಸಭೆ ಅಧ್ಯಕ್ಷರ ಮೀಸಲಾತಿ: ಚಾಮರಾಜನಗರ ‌– ಪರಿಶಿಷ್ಟ ಜಾತಿ, ಕೊಳ್ಳೇಗಾಲ– ಹಿಂದುಳಿದ ವರ್ಗ ಬಿ–ಮಹಿಳೆ

ಅಧಿಕಾರಕ್ಕೆ ಏರಲು ಪಕ್ಷಗಳ ಕಸರತ್ತು

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Deccan Herald

ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿರುವುದರಿಂದ ಎರಡೂ ಕಡೆಗಳಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ಪಕ್ಷಗಳು ಕಸರತ್ತು ನಡೆಸಿವೆ. 

ಇದರ ಮಧ್ಯೆಯೇ, ಮತ ಎಣಿಕೆ ದಿನವೇ (ಸೋಮವಾರ) ಸರ್ಕಾರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉ‌ಪಾಧ್ಯಕ್ಷ ಹುದ್ದೆಯ ಮೀಸಲಾತಿ ಪ್ರಕಟಿಸಿರುವುದರಿಂದ ಪಕ್ಷಗಳ ನಡುವೆ ಹೊಸ ರಾಜಕೀಯ ಲೆಕ್ಕಾಚಾರ ಆರಂಭವಾಗಿದೆ.

ಚಾಮರಾಜನಗರ ಮತ್ತು ಕೊಳ್ಳೇಗಾಲದಲ್ಲಿ ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬುದರ ಜೊತೆಗೆ ಯಾರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಗುತ್ತಾರೆ ಎಂಬ ಕುತೂಹಲ ಜನರಲ್ಲೂ ಮೂಡಿದೆ.

ಮೀಸಲಾತಿ ಪ್ರಕಾರ, ಚಾಮರಾಜನಗರ ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಕೊಳ್ಳೇಗಾಲ ನಗರಸಭೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ–ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ–ಎಗೆ ಮೀಸಲಾಗಿದೆ. 

ಕೊಳ್ಳೇಗಾಲದಲ್ಲಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲಾಗುವುದು ಬಹುತೇಕ ಖಚಿತವಾಗಿದೆ. ಅಲ್ಲಿ ಆಯ್ಕೆಯಾಗಿರುವ ಸದಸ್ಯೆಯರ ಪೈಕಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಒಬ್ಬರು ಮಾತ್ರ ಹಿಂದುಳಿದ ವರ್ಗ ಬಿ ವರ್ಗಕ್ಕೆ ಸೇರಿದ್ದಾರೆ.

31 ವಾರ್ಡ್‌ಗಳ ಚಾಮರಾಜನಗರ ನಗರಸಭೆಯಲ್ಲಿ ಬಿಜೆಪಿ 15, ಕಾಂಗ್ರೆಸ್‌ 8, ಎಸ್‌ಡಿಪಿಐ 6, ಬಿಎಸ್‌ಪಿ 1 ಮತ್ತು ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. ಯಾವ ಪಕ್ಷಕ್ಕೂ ಸರಳ ಬಹುಮತ ಬಂದಿಲ್ಲ. ಇಲ್ಲಿ ಅಧಿಕಾರ ಹಿಡಿಯಲು 17 ಸದಸ್ಯರ ಬೆಂಬಲ ಬೇಕು (ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡುವಾಗ ಶಾಸಕ ಹಾಗೂ ಸಂಸದರಿಗೂ ಮತದಾನ ಮಾಡಲು ಅವಕಾಶವಿದೆ).

15 ಸ್ಥಾನ ಹೊಂದಿರುವ ಬಿಜೆಪಿಗೆ ಇನ್ನು ಇಬ್ಬರು ಸದಸ್ಯರ ಬೆಂಬಲ ಬೇಕು. ಹಾಗಾಗಿ ಅದು ಬಿಎಸ್‌ಪಿ ಸದಸ್ಯ ಹಾಗೂ ಪ‍ಕ್ಷೇತರರ ಬೆಂಬಲ ಪಡೆಯಲು ಯತ್ನಿಸುತ್ತಿದೆ. 

ಅದಲ್ಲದೇ ಇದ್ದರೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯುವ ಸಂದರ್ಭದಲ್ಲಿ ಕನಿಷ್ಠ ಇಬ್ಬರು ಸದಸ್ಯರು ಗೈರು ಆಗುವಂತೆ ನೋಡಿಕೊಂಡರೆ, ಅದು ಅಧಿಕಾರಕ್ಕೆ ಬರಲಿದೆ. ಈ ಪ್ರಯತ್ನದಲ್ಲೂ ಅದು ನಿರತವಾಗಿದೆ ಎಂದು ಮೂಲಗಳು ತಿಳಿಸಿವೆ.

ಇತ್ತ ಕಾಂಗ್ರೆಸ್‌ ಜೊತೆ ಎಸ್‌ಡಿಪಿಐ ಕೈ ಜೋಡಿಸುವುದು ಖಚಿತವಾಗಿದೆ. ಪಕ್ಷೇತರ ಹಾಗೂ ಬಿಎಸ್‌ಪಿಯ ಸದಸ್ಯರು ತಮಗೆ ಬೆಂಬಲ ನೀಡಲಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದಾರೆ. ಇದು ಸಾಧ್ಯವಾದಲ್ಲಿ ನಗರಸಭೆಯಲ್ಲಿ ಮತ್ತೆ ಸಮ್ಮಿಶ್ರ ಆಡಳಿತ ಬರಲಿದೆ.

‘ಕೋಮುವಾದಿ ಬಿಜೆಪಿಯನ್ನು ದೂರ ಇಡುವುದಕ್ಕೆ ನಾವು ಕಾಂಗ್ರೆಸ್‌ ಜೊತೆಗೆ ಕೈ ಜೋಡಿಸಲೇ ಬೇಕಿದೆ. ಮೈತ್ರಿ ಮಾತುಕತೆ ನಡೆದಿದೆ. ಉಳಿದ ಇಬ್ಬರೂ ಬೆಂಬಲ ನೀಡುವ ವಿಶ್ವಾಸವಿದೆ’ ಎಂದು ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ಅಬ್ರಾರ್‌ ಅಹಮದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಅಧ್ಯಕ್ಷ ಯಾರು?: ಈ ಬಾರಿಯ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಎಂಟು ಮಂದಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಈ ಪೈಕಿ ಕಾಂಗ್ರೆಸ್‌ನಲ್ಲಿ ಐವರು, ಬಿಜೆಪಿಯಲ್ಲಿ ಇಬ್ಬರು ಮತ್ತು ಎಸ್‌ಡಿಪಿಐನಲ್ಲಿ ಒಬ್ಬರು ಇದ್ದಾರೆ.

ಕಾಂಗ್ರೆಸ್‌ನಲ್ಲಿ ಹಾಲಿ ಉಪಾಧ್ಯಕ್ಷ  ಆರ್.ಎಂ.ರಾಜಪ್ಪ (31ನೇ ವಾರ್ಡ್‌), ನೀಲಮ್ಮ (1ನೇ ವಾರ್ಡ್‌), ಕಲಾವತಿ (13ನೇ ವಾರ್ಡ್‌), ಚಿನ್ನಮ್ಮ (14ನೇ ವಾರ್ಡ್‌) ಮತ್ತು ಆರ್‌.ಪಿ ನಂಜುಂಡಸ್ವಾಮಿ (15ನೇ ವಾರ್ಡ್‌) ಅವರು ಪರಿಶಿಷ್ಟ ಜಾತಿಗೆ ಸೇರಿದ್ದಾರೆ.

ಬಿಜೆಪಿಯಲ್ಲಿ ಎಂ.ಎಸ್‌. ಕುಮುದಾ (26ನೇ ವಾರ್ಡ್‌) ಮತ್ತು ಮಹದೇವಯ್ಯ (30ನೇ ವಾರ್ಡ್‌) ಈ ಸಮುದಾಯಕ್ಕೆ ಸೇರಿದವರು. 9ನೇ ವಾರ್ಡ್‌ನಿಂದ ಗೆದ್ದಿರುವ ಎಸ್‌ಡಿಪಿಐ ಸದಸ್ಯ ಎಂ.ಮಹೇಶ್‌ ಕೂಡ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಮಹದೇವಯ್ಯ ಮತ್ತು ಕುಮುದಾ ಅವರ ಪೈಕಿ ಒಬ್ಬರು ಅಧ್ಯಕ್ಷರಾಗಲಿದ್ದಾರೆ. ಕಾಂಗ್ರೆಸ್‌, ಎಸ್‌ಡಿಪಿಐ ಮೈತ್ರಿ ಅಧಿಕಾರಕ್ಕೆ ಬಂದರೆ ಅಧ್ಯಕ್ಷರ ಆಯ್ಕೆಗಾಗಿ ಆರು ಮಂದಿ ಲಭ್ಯವಿದ್ದು, ಯಾರಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ರಾಜಪ್ಪ ಅವರು ಅಧ್ಯಕ್ಷ ಹುದ್ದೆಯ ಪ್ರಬಲ ಆಕಾಂಕ್ಷಿ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ಆಪ್ತರಾಗಿದ್ದಾರೆ. ಚಿನ್ನಮ್ಮ ಅವರು ಈ ಹಿಂದೆ ಅಧ್ಯಕ್ಷರಾಗಿದ್ದವರು. ಮೂರು ಬಾರಿ ಗೆದ್ದಿರುವ ಕಲಾವತಿ ಅವರೂ ಹಿರಿಯ ಸದಸ್ಯರೇ. ಕಳೆದ ಬಾರಿ ಮೈತ್ರಿ ಆಡಳಿತದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಎಸ್‌ಡಿಪಿಐ, ಈ ಬಾರಿ ಅಧ್ಯಕ್ಷ ಹುದ್ದೆಗೆ ಬೇಡಿಕೆ ಇಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

‘ನಮ್ಮ ಮಹೇಶ್‌ ಯುವಕ. ಎರಡನೇ ಬಾರಿ ಆಯ್ಕೆಯಾಗಿದ್ದಾರೆ. ಐದು ವರ್ಷಗಳ ಅನುಭವ ಅವರಿಗಿದೆ. ಮೈತ್ರಿ ಆಡಳಿತ ಬಂದರೆ ನಮ್ಮ ಪಕ್ಷಕ್ಕೂ ಅಧ್ಯಕ್ಷ ಸ್ಥಾನ ಸಿಗುವ ಅವಕಾಶ ಇದೆ. ಈ ಬಗ್ಗೆಯೂ ಮಾತುಕತೆ ನಡೆಯುತ್ತಿದೆ’ ಎಂದು ಅಬ್ರಾರ್‌ ಅಹಮದ್‌ ತಿಳಿಸಿದರು. 

ಒಂದು ವೇಳೆ ಎಸ್‌ಡಿಪಿಐ ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದರೆ, ಅಧಿಕಾರ ಹಂಚಿಕೆಯ ಬಗ್ಗೆ ಕಾಂಗ್ರೆಸ್‌ ಯೋಚಿಸಬೇಕಾಗಬಹುದು. 

‘ಇನ್ನೂ ನಿರ್ಧಾರ ಇಲ್ಲ’

ಈ ಮಧ್ಯೆ, ‘ಪ್ರಜಾವಾಣಿ’ ಜೊತೆ ಮಾತನಾಡಿದ ಪಕ್ಷೇತರ ಸದಸ್ಯ (17ನೇ ವಾರ್ಡ್‌) ಸಿ.ಎ. ಬಸವಣ್ಣ, ‘ಯಾವ ಪಕ್ಷಕ್ಕೆ ಬೆಂಬಲಿಸಬೇಕು ಎಂಬುದನ್ನು ಇನ್ನೂ ತೀರ್ಮಾನಿಸಿಲ್ಲ. ಕಾಂಗ್ರೆಸ್‌, ಬಿಜೆಪಿ ಮುಖಂಡರು ಸಂಪರ್ಕಿಸಿದ್ದಾರೆ. ನಾನು ಟಿಕೆಟ್‌ ಕೇಳಿದಾಗ ಎರಡೂ ಪಕ್ಷಗಳಿಗೆ ಬೇಡವಾಗಿದ್ದೆ. ಈಗ ಬೇಕಾಗಿದ್ದೇನೆ. ನನ್ನನ್ನು ಗೆಲ್ಲಿಸಿದ ವಾರ್ಡ್‌ನ ಮತದಾರರ ಅಭಿಪ್ರಾಯ ಕೇಳುತ್ತೇನೆ. ವಾರ್ಡ್‌ ಅಭಿವೃದ್ಧಿಗೆ ಯಾರು ಭರವಸೆ ಕೊಡುತ್ತಾರೋ ಅವರನ್ನು ಬೆಂಬಲಿಸುತ್ತೇನೆ’ ಎಂದು ಹೇಳಿದರು.

ಕೊಳ್ಳೇಗಾಲ: ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಖಚಿತ

ಕೊಳ್ಳೇಗಾಲ ನಗರಸಭೆಯಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ–ಮಹಿಳೆಗೆ ಮೀಸಲಾಗಿರುವುದು ಕಾಂಗ್ರೆಸ್‌ಗೆ ವರದಾನವಾಗಿ ಪರಿಣಮಿಸಿದೆ.

19ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನಿಂದ ಗೆದ್ದಿರುವ ಸುಧಾ ಅವರು ಈ ವರ್ಗಕ್ಕೆ ‌ಸೇರಿದ ಏಕೈಕ ಸದಸ್ಯೆಯಾಗಿದ್ದು, ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವುದು ಖಚಿತ.

ಹಾಗಾಗಿ, ಬಿಎಸ್‌ಪಿ ಹಾಗೂ ಪಕ್ಷೇತರರ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದ ಕಾಂಗ್ರೆಸ್‌ಗೆ ಅನಾಯಾಸವಾಗಿ ಅಧ್ಯಕ್ಷ ಪಟ್ಟ ಸಿಗಲಿದೆ. ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬಿಎಸ್‌ಪಿಗೆ ಇದು ನಿರಾಸೆ ತಂದಿದೆ. 

ಒಂದು ವೇಳೆ ಅಲ್ಲಿ ಮೈತ್ರಿ ಏರ್ಪಟ್ಟರೆ ಉಪಾಧ್ಯಕ್ಷ ಸ್ಥಾನಕ್ಕೆ (ಹಿಂದುಳಿದ ವರ್ಗ–ಎ) ಪೈಪೋಟಿ ನಡೆಯಲಿದೆ.

ಆಯ್ಕೆಯಾದ 30 ಮಂದಿಯಲ್ಲಿ ಎಂಟು ಮಂದಿ ಹಿಂದುಳಿದ ವರ್ಗ–ಎಗೆ ಸೇರಿದವರಿದ್ದಾರೆ.

ಬಿಎಸ್‌ಪಿ ಅಭ್ಯರ್ಥಿಗಳಾದ 13 ವಾರ್ಡ್‌ನ ಪವಿತ್ರ, 7ನೇ ವಾರ್ಡ್‌ನ ನಾಸೀರ್ ಶರೀಫ್, ಬಿಜೆಪಿಯಿಂದ ಗೆದ್ದಿದ್ದ ಧರಣೇಶ್ (5ನೇ ವಾರ್ಡ್‌), 12ನೇ ವಾರ್ಡ್‌ನ ಪರಮೇಶ್ವರಯ್ಯ, ಕಾಂಗ್ರೆಸ್‌ನ  ಸುಮೇರಾ ಬೇಗಂ (20ನೇ ವಾರ್ಡ್‌), ಪಕ್ಷೇತರ ಸದಸ್ಯರಾದ ಕವಿತ (1ನೇ ವಾರ್ಡ್‌), ಮನೋಹರ್ (11ನೇ ವಾರ್ಡ್‌), ಶಂಕರ್ (14 ವಾರ್ಡ್‌) ಅಭ್ಯರ್ಥಿಗಳು ಅವರು ಹಿಂದುಳಿದ ವರ್ಗ–ಎ ಸೇರಿದ್ದಾರೆ.

ಒಂದು ವೇಳೆ ಕಾಂಗ್ರೆಸ್‌–ಬಿಎಸ್‌ಪಿ ಮೈತ್ರಿ ಮಾಡಿಕೊಂಡರೆ, ಬಿಎಸ್‌ಪಿಯು ಉಪಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಡಬಹುದು. ಆಗ, ಇಬ್ಬರು ಸದಸ್ಯರಲ್ಲಿ ಒಬ್ಬರು ಉಪಾಧ್ಯಕ್ಷರಾಗಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು