ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ‘229 ಗ್ರಾಮ ಒನ್ ಕೇಂದ್ರ ಸ್ಥಾಪನೆ

ತಿಂಗಳಾಂತ್ಯಕ್ಕೆ ಕಾರ್ಯಾರಂಭ: ಜಿಲ್ಲಾಧಿಕಾರಿ ಆರ್‌. ಲತಾ ಭರವಸೆ
Last Updated 11 ಫೆಬ್ರುವರಿ 2022, 3:08 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ 229 ಗ್ರಾಮ ಒನ್ ಕೇಂದ್ರಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತೆರೆಯಲು ಕ್ರಮವಹಿಸಲಾಗಿದ್ದು, ಈ ಪೈಕಿ 201 ಕೇಂದ್ರಗಳು ಈ ತಿಂಗಳ ಅಂತ್ಯದೊಳಗೆ ಆರಂಭವಾಗಿ ಸಾರ್ವಜನಿಕ ಸೇವೆಗೆ ಮುಕ್ತವಾಗಲಿವೆ’ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಗ್ರಾಮ ಒನ್ ಕೇಂದ್ರದ ಪ್ರಾಂಚೈಸಿಗಳ ಆಯ್ಕೆ ಮಾಡುವ ಜಿಲ್ಲಾಮಟ್ಟದ ಕಾರ್ಯಪಡೆ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಸರ್ಕಾರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಒನ್ ಯೋಜನೆಯನ್ನು ಪರಿಣಾಮಕಾರಿಯಾಗಿ ಪ್ರಾಂಚೈಸಿಗಳ ಮೂಲಕ ಅನುಷ್ಠಾನಗೊಳಿಸಲು ಆನ್‌ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿತ್ತು. ಜಿಲ್ಲೆಗೆ ಸಂಬಂಧಿಸಿದಂತೆ ಎಲ್ಲಾ 157 ಗ್ರಾಮ ಪಂಚಾಯಿತಿಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪ್ರತಿ ಪಂಚಾಯಿತಿಗೆ ಒಂದು ಅಥವಾ ಎರಡರಂತೆ ಗ್ರಾಮ ಒನ್ ಕೇಂದ್ರ ಸ್ಥಾಪಿಸಲು ಕ್ರಮವಹಿಸಲಾಗಿದೆ ಎಂದರು.

ಆನ್‌ಲೈನ್ ಮೂಲಕ ಸ್ವೀಕಾರ ಆಗಿರುವ 393 ಅರ್ಜಿಗಳ ಪೈಕಿ 201 ಕೇಂದ್ರಗಳಿಗೆ ಅರ್ಹ ಪ್ರಾಂಚೈಸಿಗಳನ್ನು ಆಯ್ಕೆ ಮಾಡಲಾಗಿದೆ. ಈ 201 ಕೇಂದ್ರಗಳು ಈ ತಿಂಗಳ ಅಂತ್ಯದೊಳಗೆ ಲೋಕಾರ್ಪಣೆ ಮಾಡಲಿವೆ. ಉಳಿದ 28 ಕೇಂದ್ರಗಳಿಗೂ ಪ್ರಾಂಚೈಸಿಗಳನ್ನು ಆಯ್ಕೆ ಮಾಡಿ ಈ ತಿಂಗಳ ಅಂತ್ಯದೊಳಗೆ ಅಥವಾ ಮಾರ್ಚ್ ಆರಂಭದಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಸರ್ಕಾರದ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಸೇವಾ ಸಿಂಧು ಯೋಜನೆಯಡಿ ಗ್ರಾಮ ಒನ್ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಅದರಂತೆ ಜಿಲ್ಲೆಯಲ್ಲಿ ಸರ್ಕಾರಿ ಸೇವೆಗಳನ್ನು ಗ್ರಾಮಸ್ಥರಿಗೆ ತಲುಪಿಸುವ ಉದ್ದೇಶದಿಂದ ಗ್ರಾಮ ಒನ್ ಕೇಂದ್ರಗಳು ವಾರದ ಏಳು ದಿನಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದರು.

ಈ ಯೋಜನೆಯಡಿ 750ಕ್ಕೂ ಹೆಚ್ಚು ನಾಗರಿಕ ಸೇವೆ ಪಡೆಯಲು ಅರ್ಜಿ ಸ್ವೀಕರಿಸಲಾಗುವುದು. ಸಕಾಲ, ಮಾಹಿತಿ ಹಕ್ಕು ಅಧಿನಿಯಮ, ಬ್ಯಾಂಕಿಂಗ್ ಸೇವೆ ಹಾಗೂ ಸಾರ್ವಜನಿಕರ ಕುಂದುಕೊರತೆ ನಿವಾರಣೆ ಕೋರಿ ಅರ್ಜಿಗಳನ್ನು ಸಹ ಸ್ವೀಕರಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT