ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರಕ್ಕೆ 524 ಕಲಾವಿದರು ಅರ್ಹ

ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚು ಅರ್ಜಿಗಳು ಪುರಸ್ಕೃತ
Last Updated 20 ಜೂನ್ 2021, 3:27 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೋವಿಡ್ ಪರಿಹಾರ ಪ್ಯಾಕೇಜ್‌ನಡಿ ₹ 3 ಸಾವಿರ ಪರಿಹಾರ ಧನ ಪಡೆಯಲು 524 ಕಲಾವಿದರು ಅರ್ಹರಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅರ್ಹ ಕಲಾವಿದರ ಸಂಖ್ಯೆ ಹೆಚ್ಚಿದೆ ಎನ್ನುತ್ತವೆ ಜಿಲ್ಲಾಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಗಳು.

‌ಕೋವಿಡ್‌ನ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯದ 16,095 ಕಲಾವಿದರಿಗೆ ₹ 3 ಸಾವಿರ ಪರಿಹಾರ ಧನ ನೀಡಲು ರಾಜ್ಯ ಸರ್ಕಾರ ಅರ್ಜಿ ಆಹ್ವಾನಿಸಿತ್ತು. ಇದಕ್ಕಾಗಿ ₹ 4.82 ಕೋಟಿ ಹಣವನ್ನು ಮೀಸಲಿಟ್ಟಿದೆ. ಸೇವಾ ಸಿಂಧೂ ಆನ್‌ಲೈನ್ ಪೋರ್ಟಲ್‌ನಲ್ಲಿ ಕಲಾವಿದರು ಅರ್ಜಿ ಸಲ್ಲಿಸಬೇಕು. ಜಿಲ್ಲೆಯಲ್ಲಿ ಈ ಬಾರಿ ಒಟ್ಟು ‌751 ಕಲಾವಿದರು ಅರ್ಜಿ ಸಲ್ಲಿಸಿದ್ದರು.

ಯಕ್ಷಗಾನ, ಜನಪದ ಅಕಾಡೆಮಿ ಸದಸ್ಯರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಉಪನಿರ್ದೇಶಕರನ್ನು ಒಳಗೊಂಡ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಅರ್ಜಿಗಳ ಪರಿಶೀಲನೆ ನಡೆಸಿತ್ತು. ಇವುಗಳಲ್ಲಿ ದಾಖಲೆಗಳು ಸರಿ ಇಲ್ಲದ ಮತ್ತು ಕಾರ್ಯಕ್ರಮಗಳನ್ನು ನೀಡಿದ ಭಾವಚಿತ್ರಗಳನ್ನು ದಾಖಲೆಗಳಲ್ಲಿ ಅಡಕಗೊಳಿಸದ, ಪಿಂಚಣಿ ಪಡೆಯುತ್ತಿದ್ದರೂ ಅರ್ಜಿ ಸಲ್ಲಿಸಿದ ಹಾಗೂ 35 ವರ್ಷದೊಳಗಿನ ‌ಕಲಾವಿದರ ಒಟ್ಟು 227 ಅರ್ಜಿಗಳು ತಿರಸ್ಕೃತವಾಗಿವೆ. ಪುರಸ್ಕೃತ ಎಲ್ಲ ಅರ್ಜಿಗಳನ್ನುಇಲಾಖೆಯ ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ.

ಕಳೆದ ವರ್ಷವೂ ರಾಜ್ಯ ಸರ್ಕಾರ ಕಲಾವಿದರಿಗೆ ಪರಿಹಾರದ ಧನ ನೀಡಿತ್ತು. ಆಗ ಜಿಲ್ಲೆಯಲ್ಲಿ 400ರಿಂದ 500 ಕಲಾವಿದರು ಅರ್ಜಿ ಸಲ್ಲಿಸಿದ್ದರು. ಆ ವರ್ಷ ಹೆಚ್ಚು ಅರ್ಜಿಗಳು ತಿರಸ್ಕೃತವಾಗಿದ್ದವು.ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅರ್ಜಿ ಸಲ್ಲಿಸಿರುವ ಕಲಾವಿದರ ಸಂಖ್ಯೆಯೂ ಹೆಚ್ಚಿದೆ. ತಿರಸ್ಕೃತ ಅರ್ಜಿಗಳ ಸಂಖ್ಯೆ ಕಡಿಮೆ ಇದೆ.

35 ವರ್ಷದೊಳಗಿನವರ 50 ಅರ್ಜಿ ತಿರಸ್ಕೃತ: ಪರಿಹಾರ ಧನ ಪಡೆಯಲು 35 ವರ್ಷದೊಳಗಿನ ಕಲಾವಿದರು ಅರ್ಹರಲ್ಲ ಎಂದು ಸರ್ಕಾರದ ನಿಯಮಗಳಿವೆ. ಇದನ್ನು ವಿರೋಧಿಸಿ ರಾಜ್ಯದಾದ್ಯಂತ ಕಲಾವಿದರು ಆನ್‌ಲೈನ್‌ನಲ್ಲಿ ಪ್ರತಿಭಟನೆ ಸಹ ದಾಖಲಿಸಿದ್ದರು. ಜಿಲ್ಲೆಯಲ್ಲಿಯೂ ಯುವ ಕಲಾವಿದರುಈ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಕೆಲವು ಹಿರಿಯ ಕಲಾವಿದರು ಈ ನಿಯಮ ವಿರೋಧಿಸಿದ ಅರ್ಜಿಯನ್ನೇ ಸಲ್ಲಿಸಲಿಲ್ಲ. ಸರ್ಕಾರ ನಿಯಮ ಸಡಿಲಿಸುವಂತೆ ಆಗ್ರಹಿಸಿದ್ದರು. ಆದರೂ ಪ್ರಯೋಜನವಾಗಿರಲಿಲ್ಲ.

ಕಳೆದ ವರ್ಷ ಕೆಲವು ಜಿಲ್ಲೆಗಳಿಂದ ಕಲಾವಿದರ ಪಟ್ಟಿಯನ್ನು ಅಂತಿಮಗೊಳಿಸಿ ಕೇಂದ್ರ ಕಚೇರಿಗೆ ಸಲ್ಲಿಸಲಾಗಿತ್ತು. ಕೇಂದ್ರ ಕಚೇರಿಯಲ್ಲಿ ಆ ಪಟ್ಟಿಗೆ ಕತ್ತರಿ ಪ್ರಯೋಗ ಸಹ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT