ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಅಸ್ತ್ರವಾಗಲಿ: ಸಂಸದ ವೀರಪ್ಪ ಮೊಯಿಲಿ ಸಲಹೆ

ಗಾಣಿಗರ ಸಂಘದ ಜಿಲ್ಲಾ ಮಟ್ಟದ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
Last Updated 9 ಸೆಪ್ಟೆಂಬರ್ 2018, 14:32 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಗಾಣಿಗ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು, ಶೈಕ್ಷಣಿಕವಾಗಿ, ಆರ್ಥಿಕ, ರಾಜಕೀಯವಾಗಿ ಮೇಲೆ ಬರಲು ಸಂಘಟನೆ ಮುಖ್ಯವಾಗಿದೆ. ಜತೆಗೆ ಶಿಕ್ಷಣವನ್ನು ಮೊದಲ ಅಸ್ತ್ರವಾಗಿಸಿಕೊಂಡು ಮೇಲೆ ಬರಬೇಕಿದೆ’ ಎಂದು ಸಂಸದ ವೀರಪ್ಪ ಮೊಯಿಲಿ ಹೇಳಿದರು.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ಗಾಣಿಗರ ಸಂಘದ ಜಿಲ್ಲಾ ಮಟ್ಟದ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ಹಿಂದೆ ಆಡಳಿತ ನಡೆಸಿದ ಯಾವ ಸರ್ಕಾರಗಳು ಸಹ ಹಿಂದುಳಿದ ವರ್ಗಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಲಿಲ್ಲ. ಅವುಗಳಿಗೆ ಸಂಬಂಧಿತ ಆಯೋಗಗಳ ವರದಿಗಳನ್ನು ಕೂಡ ನಿರ್ಲಕ್ಷ್ಯ ಮಾಡಿದವು. ಆದರೆ, ದೇವರಾಜ ಅರಸು ಅವರು ಹಾವನೂರು ವರದಿ ಜಾರಿ ಮಾಡುವ ಮೂಲಕ ಹಿಂದುಳಿದ ವರ್ಗದವರಿಗೆ ಸಾಮಾಜಿಕ ಚೈತನ್ಯ ನೀಡಿದರು’ ಎಂದು ತಿಳಿಸಿದರು.

‘ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಿಂದುಳಿದ ವರ್ಗಗಳು ಅಭಿವೃದ್ಧಿಯಾಗಲಿ ಎಂಬ ಉದ್ದೇಶದಿಂದ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಚಿನ್ನಪ್ಪ ರೆಡ್ಡಿ ಆಯೋಗದ ವರದಿಯನ್ನು ಪ್ರಬಲ ವಿರೋಧದ ನಡುವೆಯೂ ಪರಿಷ್ಕರಿಸಿ ಜಾರಿಗೊಳಿಸಿದೆ. ಪರಿಣಾಮ, ಹಿಂದುಳಿದ ವರ್ಗಕ್ಕೆ ಸೇರಿದ ಗಾಣಿಗ ಸಮುದಾಯ ಕೂಡ ಅಭಿವೃದ್ಧಿ ಹೊಂದಲು ಸಾಧ್ಯವಾಯಿತು’ ಎಂದರು.

‘ನಾನು ಕೇಂದ್ರದಲ್ಲಿ ಎರಡನೇ ಬಾರಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷನಾದ ಸಂದರ್ಭದಲ್ಲಿ ದೇಶದ ಪ್ರತಿಷ್ಠಿತ ಐಐಟಿ, ಐಐಎಂಗಳಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಮೀಸಲಾತಿ ಕಲ್ಪಿಸಿ ಕೊಟ್ಟಿದ್ದೆ. ಹಿಂದುಳಿದ ವರ್ಗಗಳು ಸಾಮಾಜಿಕವಾಗಿ ಮುಂದುವರಿಯಬೇಕಾದರೆ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವತ್ತ ಗಮನ ಹರಿಸಬೇಕು. ಪ್ರತಿಯೊಬ್ಬರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು’ ಎಂದು ಹೇಳಿದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಮಾತನಾಡಿ, ‘ನಾನು ಈ ಹಿಂದೆ ಸಹಕಾರ ಸಚಿವನಾಗಿದ್ದ ವೇಳೆ ವಿರೋಧದ ನಡುವೆಯೂ ಹಿಂದುಳಿದ ವರ್ಗದವರಿಗೆ ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಿ ಏಳಿಗೆಗೆ ಶ್ರಮಿಸಿರುವೆ. ಇವತ್ತು ಯುವ ಜನರು ಸಮುದಾಯ ಸಂಘಟಿಸುವ ಕೆಲಸಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಅಗತ್ಯವಿದೆ’ ಎಂದು ತಿಳಿಸಿದರು.

ಗಾಣಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಜಿ.ವಿಜಯಕುಮಾರ್ ಮಾತನಾಡಿ, ‘ರಾಜ್ಯದಲ್ಲಿ 25 ಲಕ್ಷಕ್ಕೂ ಹೆಚ್ಚು ಗಾಣಿಗರಿದ್ದಾರೆ. ನಮ್ಮ ಸಮುದಾಯವನ್ನು ಎಲ್ಲಾ ರಾಜಕೀಯ ಪಕ್ಷಗಳು ಮತಕ್ಕಾಗಿ ಬಳಸಿಕೊಳ್ಳುತ್ತಿವೆ ವಿನಾ ಸ್ವಾವಲಂಬಿಗಳನ್ನಾಗಿ ಬದುಕಲು ಅವಕಾಶ ಕೊಡದೆ ವಂಚಿಸುತ್ತಿವೆ. ನಮ್ಮ ಕುಲ ವೃತ್ತಿಗೆ ಬೇಕಾದ ಸವಲತ್ತುಗಳನ್ನು ಒದಗಿಸಿ ಕೊಡುವಲ್ಲಿ ಸರ್ಕಾರಗಳು ವಿಫಲವಾಗಿವೆ’ ಎಂದರು.

‘ನಮ್ಮ ಸಮುದಾಯದ ಅನೇಕ ವರ್ಷಗಳ ಬೇಡಿಕೆಯಾದ ಬೀಜ ಉತ್ಪಾದನಾ ನಿಗಮಮತ್ತು ತೈಲ ಮಾರುಕಟ್ಟೆ ಮಂಡಳಿಯನ್ನು ರಾಜ್ಯ ಸರ್ಕಾರ ಶೀಘ್ರವಾಗಿ ರಚನೆ ಮಾಡಬೇಕು. ಸಮುದಾಯದ ಅಭಿವೃದ್ಧಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೀಸಲಿಟ್ಟ ₹5 ಕೋಟಿ ಸಾಲದು. ಅದನ್ನು ಹೆಚ್ಚಿಸಬೇಕು. ನಮ್ಮ ಬೇಡಿಕೆಗಳನ್ನು ಆದ್ಯತೆ ಮೆರೆಗೆ ಈಡೇರಿಸಬೇಕು’ ಎಂದು ಆಗ್ರಹಿಸಿದರು.

ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಗಾಣಿಗ ಎಜುಕೇಷನ್ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಆರ್.ನಾಗರಾಜ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್, ಅಖಿಲ ಭಾರತ ತೇಲಿ ಸಾಹು ಮಹಾಸಭಾ ಕಾರ್ಯಾಧ್ಯಕ್ಷ ಪಿ.ಎಂ.ರಘುನಾಥ್, ಎಸ್‌ಎಲ್‌ಎನ್‌ ಚಾರಿಟಬಲ್ ಟ್ರಸ್ಟ್ ಮಾಜಿ ಅಧ್ಯಕ್ಷ ಬಿ.ಜಿ.ರಮೇಶ್, ಅಖಿಲ ಕರ್ನಾಟಕ ಗಾಣಿಗರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುನಿಸಂಪಂಗಿ ರಾಮಯ್ಯ, ಕಾರ್ಯದರ್ಶಿ ಸಿ.ವಿ.ಮಧುಸೂಧನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT