ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ: ನವಸಾಕ್ಷರರಾದ 82 ಕೈದಿಗಳು

ಚಿಕ್ಕಬಳ್ಳಾಪುರ ಜೈಲಿನಲ್ಲಿ ವಿಚಾರಣಾಧೀನಕ ಕೈದಿಗಳಿಗೆ ಅಕ್ಷರಾಭ್ಯಾಸ
Published 26 ಜೂನ್ 2024, 6:53 IST
Last Updated 26 ಜೂನ್ 2024, 6:53 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹದಲ್ಲಿ ಓದು–ಬರಹ ಗೊತ್ತಿಲ್ಲದ 82 ಮಂದಿ ಅನಕ್ಷರಸ್ಥ ವಿಚಾರಣಾಧೀನ ಕೈದಿಗಳನ್ನು ‘ನವಸಾಕ್ಷರ’ರನ್ನಾಗಿ ಮಾಡಲಾಗಿದೆ. ಈ ಮೂಲಕ ಜೈಲಿಗೆ ಬಂದ ವಿಚಾರಣಾಧೀನ ಕೈದಿಗಳು ಅಕ್ಷರಸ್ಥರಾಗಿದ್ದಾರೆ.

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಹಯೋಗದಲ್ಲಿ ಜಿಲ್ಲಾ ಕಾರಾಗೃಹದಲ್ಲಿ ‘ಕಲಿಕೆಯಿಂದ ಬದಲಾವಣೆ’ ಎಂಬ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ನಾನಾ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಹೊತ್ತು ಅನಕ್ಷರಸ್ಥರಾಗಿರುವ ವಿಚಾರಣಾಧೀನ ಕೈದಿಗಳಿಗೆ ಇಲ್ಲಿ ಅಕ್ಷರ ಪಾಠ ಹೇಳಿಕೊಡಲಾಗುತ್ತದೆ. 

ಹೀಗೆ ಕಾರಾಗೃಹದ ಕೋಣೆಯಲ್ಲಿ ದಿನದೂಡುವ ಜೈಲುಹಕ್ಕಿಗಳಿಗೆ ‘ಅಕ್ಷರಾಭ್ಯಾಸ’ ಮಾಡಿಸುವ ಮೂಲಕ ಅವರ ಬಾಳಲ್ಲಿ ಬೆಳಕು ಮೂಡಿಸುವ ಮತ್ತು ಅಕ್ಷರದ ಅರಿವು ಬಿತ್ತುವ ಯತ್ನ ಮಾಡಿದ್ದಾರೆ ಜಿಲ್ಲಾ ಕಾರಾಗೃಹದ ಅಧಿಕಾರಿಗಳು.

2021–22ನೇ ಸಾಲಿನಲ್ಲಿ ಜಿಲ್ಲಾ ಕಾರಾಗೃಹದಲ್ಲಿನ 42 ಮಂದಿ ವಿಚಾರಣಾಧೀನ ಕೈದಿಗಳಿಗೆ ಅಕ್ಷರಾಭ್ಯಾಸ ಮಾಡಿಸಲಾಗಿದೆ. 2022–23ನೇ ಸಾಲಿನಲ್ಲಿ 40 ಮಂದಿ ಕೈದಿಗಳಿಗೆ ಅಕ್ಷರ ಕಲಿಸಲಾಗಿದೆ. ಈಗ 44 ಮಂದಿ ಕೈದಿಗಳಿಗೆ ಅಕ್ಷರ ಕಲಿಸುವ ಯೋಜನೆಯನ್ನು ಕಾರಾಗೃಹದ ಅಧಿಕಾರಿಗಳು ಹೊಂದಿದ್ದಾರೆ.

ಕಾರಾಗೃಹಕ್ಕೆ ಬಂದ ವಿಚಾರಣಾಧೀನ ಕೈದಿಗಳಲ್ಲಿ ಕೆಲವರಿಗೆ ಓದು ಮತ್ತು ಬರಹ ಗೊತ್ತಿರುವುದಿಲ್ಲ. ಕಾರಾಗೃಹಕ್ಕೆ ಬಂದ ವೇಳೆ ಅವರು ಸಹಿ ಮಾಡುವರೊ ಹೆಬ್ಬೆಟ್ಟು ಒತ್ತುವರೊ ಒಂದು ವೇಳೆ ಸಹಿ ಮಾಡಿದರೂ ಅವರ ಓದಿನ ಮಟ್ಟ ಹೇಗಿದೆ ಎನ್ನುವುದನ್ನು ತಿಳಿಯಲಾಗುತ್ತದೆ. ಹೀಗೆ ಓದು ಬರಹ ಬಾರದ ಕೈದಿಗಳನ್ನು ಗುರುತಿಸಿ ಅವರಿಗೆ ಅಕ್ಷರ ಕಲಿಸಲಾಗುತ್ತದೆ. 

ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯಿಂದ ಪುಸ್ತಕ, ಸ್ಲೆಟ್ ಸೇರಿದಂತೆ ಓದು ಬರಹಕ್ಕೆ ಅಗತ್ಯ ಪರಿಕರಗಳನ್ನು ಒದಗಿಸಲಾಗುತ್ತದೆ. ಪ್ರತಿ ವರ್ಷದ ಅಕ್ಟೋಬರ್‌ನಲ್ಲಿ ಈ ಯೋಜನೆ ಜಾರಿಯಾಗುತ್ತದೆ. ವಯಸ್ಕರ ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿ ಮೊದಲಿಗೆ ಕಾರಾಗೃಹಕ್ಕೆ ಭೇಟಿ ನೀಡಿ ಅಕ್ಷರಾಭ್ಯಾಸದ ಬಗ್ಗೆ ಕೈದಿಗಳಿಗೆ ತಿಳಿಸುವರು. ಆ ನಂತರ ಜೈಲಿನಲ್ಲಿರುವ ಪದವೀಧರ ವಿಚಾರಣಾಧೀನ ಕೈದಿಗಳು ಪಾಠ ಹೇಳಿಕೊಡುವರು. ಕೈದಿಗಳೇ ಇಲ್ಲಿ ಶಿಕ್ಷಕರಾಗುತ್ತಾರೆ. ಅಂತಿಮವಾಗಿ ಕಾರಾಗೃಹದಲ್ಲಿಯೇ ಪರೀಕ್ಷೆಗಳು ನಡೆಯುತ್ತವೆ. 

‘ಈಗಾಗಲೇ 2021–22 ಮತ್ತು 2022–23ರ ಪರೀಕ್ಷೆಗಳು ಪೂರ್ಣವಾಗಿವೆ. ಈ ಕೈದಿಗಳಿಗೆ ಓದು ಬರಹ ಕಲಿಸಲಾಗಿದೆ. ಈಗ ಜೈಲಿನಲ್ಲಿರುವ 44 ಕೈದಿಗಳಿಗೆ ಅಕ್ಷರ ಕಲಿಸಲು ಮುಂದಾಗಿದ್ದೇವೆ. ವಯಸ್ಕರ ಶಿಕ್ಷಣ ಇಲಾಖೆಗೆ ಈ ಬಗ್ಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅವರು ಅಗತ್ಯ ಪರಿಕರಗಳನ್ನು ನೀಡುವರು’ ಎಂದು ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಶೋಭಾ ಆರ್. ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲವರಿಗೆ ಸಹಿ ಮಾಡಲು ಬರುವುದಿಲ್ಲ. ಹೆಬ್ಬೆಟ್ಟು ಒತ್ತುವರು. ಒಂದನೇ ತರಗತಿ ಇಲ್ಲವೆ ಎರಡನೇ ತರಗತಿ ಮಾತ್ರ ಓದಿರುವವರು ದಪ್ಪದಾಗಿ ಸಹಿ ಮಾಡುವರು. ಇಂತಹವರನ್ನು ಗಮನಿಸಿ ಅವರಿಗೆ ಅಕ್ಷರಾಭ್ಯಾಸ ಮಾಡಿಸಲಾಗುತ್ತದೆ’ ಎಂದರು.

ಸಾಮಾನ್ಯವಾಗಿ ಕೊಲೆ ಪ್ರಕರಣದ ವಿಚಾರಣಾಧೀನ ಕೈದಿಗಳು ಕನಿಷ್ಠ ಮೂರು ತಿಂಗಳಾದರೂ ಜೈಲಿನಲ್ಲಿ ಇರುತ್ತಾರೆ. ಇದು ವಿಚಾರಣಾಧೀನ ಕೈದಿಗಳ ಕಾರಾಗೃಹವಾದ ಕಾರಣ ಬರುತ್ತಾರೆ ಹೋಗುತ್ತಿರುತ್ತಾರೆ. ಜೈಲಿನಿಂದ ಹೊರ ಹೋಗುವಾಗ ಕನಿಷ್ಠ ಸಹಿ ಮಾಡಲು ಬರುವಷ್ಟಾದರೂ ಅಕ್ಷರ ಕಲಿಸಲಾಗುತ್ತದೆ ಎಂದು ಹೇಳಿದರು.

ಆಂಧ್ರ ಕೈದಿಗಳಿಗೆ ಕನ್ನಡ ಕಲಿಕೆ

‘ಚಿಕ್ಕಬಳ್ಳಾಪುರ ಜಿಲ್ಲೆನಲ್ಲಿರುವ ಬಹಳಷ್ಟು ಕೈದಿಗಳು ಆಂಧ್ರಪ್ರದೇಶದವರು. ಇವರಿಗೆ ಕನ್ನಡ ಓದಲು ಮತ್ತು ಬರೆಯಲು ಬರುವುದಿಲ್ಲ. ಇವರಿಗೆ ಕನ್ನಡ ಕಲಿಸುತ್ತೇವೆ’ ಎಂದು ಜೈಲರ್ ಶೋಭಾ ಆರ್. ತಿಳಿಸಿದರು. ಪೋಕ್ಸೊ ಪ್ರಕರಣಗಳಲ್ಲಿ ಪದವೀಧರ ಯುವಕರು ಜೈಲು ಸೇರಿದ್ದಾರೆ. ಇವರಿಂದ ಓದು ಬರಹ ಕಲಿಸಲಾಗುತ್ತದೆ ಎಂದರು.

ಜೈಲಿನಿಂದ ಹೊರ ಹೋದಾಗ ಅವರಿಗೆ ಕನಿಷ್ಠ ಮಟ್ಟದಲ್ಲಿ ಓದು ಮತ್ತು ಬರಹ ಗೊತ್ತಿರಲಿ ಎನ್ನುವ ಸದುದ್ದೇಶದಿಂದ ಈ ಕಾರ್ಯಕ್ರಮ ನಡೆಯುತ್ತಿದೆ.
ಶೋಭಾ ಆರ್., ಜೈಲರ್, ಚಿಕ್ಕಬಳ್ಳಾಪುರ
ಇಲಾಖೆಯಿಂದ ಪುಸ್ತಕ ಸೇರಿದಂಗೆ ಓದು ಬರಹಕ್ಕೆ ಅಗತ್ಯ ಪರಿಕರ ಪೂರೈಸಲಾಗುತ್ತದೆ. ಕೈದಿಗಳನ್ನು ಸಾಕ್ಷರನ್ನಾಗಿಸುವ ಈ ಕಾರ್ಯಕ್ರಮ ಮಹತ್ವದ್ದಾಗಿದೆ.
ಆಂಜನೇಯ, ವಯಸ್ಕರ ಶಿಕ್ಷಣ ಅಧಿಕಾರಿ, ಚಿಕ್ಕಬಳ್ಳಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT