ಮಂಗಳವಾರ, ಮೇ 24, 2022
30 °C

ಪಹಣಿಗೆ ಆಧಾರ್‌ ಜೋಡಣೆ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ರೇಷ್ಮೆ, ಕಂದಾಯ ಇಲಾಖೆ ಹಾಗೂ ಸರ್ಕಾರದ ವಿವಿಧ ಯೋಜನೆಗಳಡಿ ಯಾವುದೇ ಸವಲತ್ತುಗಳನ್ನು ಪಡೆಯಲು ರೈತರು ಜಮೀನಿನ ಪಹಣಿಗಳಿಗೆ ಆಧಾರ್‌ ಸಂಖ್ಯೆ ಮತ್ತು ವಿವರಗಳನ್ನು ನೋಂದಣಿ ಮಾಡಿಸುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.

ತಹಶೀಲ್ದಾರ್‌ಗಳೊಂದಿಗೆ ನಡೆಸಿದ ವಿಡಿಯೊ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.

‘ಫೆ.24ರೊಳಗೆ ಕೃಷಿ, ಕಂದಾಯ ಹಾಗೂ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಎಲ್ಲಾ ರೈತರ ಪಹಣಿಗಳಿಗೆ ಆಧಾರ್ ಸಂಖ್ಯೆ ಜೋಡಣೆಯನ್ನು ಕಡ್ಡಾಯವಾಗಿ ಮಾಡಲು ಕ್ರಮಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.

‘ರೈತರ ಅನುಕೂಲಕ್ಕಾಗಿ ಒಂದೇ ಸೂರಿನಡಿ ಸಮಗ್ರ ಮಾಹಿತಿ ದಾಖಲಿಸಲು ಸರ್ಕಾರವು ಫ್ರೂಟ್ಸ್ (FRUITS) ತಂತ್ರಾಂಶ ಅಭಿವೃದ್ಧಿಪಡಿಸಿದೆ. ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ವಿವರಗಳನ್ನು ದಾಖಲಿಸುವ ಮೂಲಕ ನೋಂದಾಯಿಸಿಕೊಂಡು ಫ್ರೂಟ್ಸ್ ಗುರುತಿನ ಸಂಖ್ಯೆ (ಎಫ್‍ಐಡಿ ನಂಬರ್) ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಬೆಂಬಲ ಬೆಲೆ ಯೋಜನೆ, ಬೆಳೆ ವಿಮೆ, ಇತರೆ ಯೋಜನೆ ಅನುಷ್ಠಾನ ಪ್ರಕ್ರಿಯೆಯಲ್ಲಿ ರೈತರ ಜಮೀನಿನ ವಿವರಗಳನ್ನು ಪಡೆಯಲು ‘ಫ್ರೂಟ್ಸ್’ ತಂತ್ರಾಂಶ ಅಗತ್ಯವಿದ್ದು, ಇದರಲ್ಲಿ ರೈತರ ಜಮೀನಿನ ನಿಖರ ಹಾಗೂ ಸಂಪೂರ್ಣ ಮಾಹಿತಿ ಇರುತ್ತದೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಅಮರೇಶ್ ಮಾತನಾಡಿ, ‘ರೈತರು ಅಗತ್ಯ ದಾಖಲೆಗಳಾದ ಪಹಣಿ, ಆಧಾರ್‌ ಕಾರ್ಡ್, ಬ್ಯಾಂಕ್ ಖಾತೆ ವಿವರ, ಆದಾಯ ಪ್ರಮಾಣ ಪತ್ರ, ಪರಿಶಿಷ್ಟ ಜಾತಿ, ಪರಿಶಿಷ್ಟ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ, ಭಾವಚಿತ್ರಗಳನ್ನು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ನಾಡ ಕಚೇರಿಗಳಿಗೆ ಭೇಟಿ ನೀಡಿ ತಮ್ಮ ಮಾಹಿತಿಗಳನ್ನು ಸಲ್ಲಿಸಿ ಎಫ್‍ಐಡಿ ನಂಬರ್ ಪಡೆದುಕೊಳ್ಳಬೇಕು’ ಎಂದರು.

ಜಿಲ್ಲಾಧಿಕಾರಿ ಆರ್.ಲತಾ ಅವರು ಆಧಾರ್‌ ಜೋಡಣೆ ಸಂಬಂಧ ಜಾಗೃತಿ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿದರು.

ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಲ್.ರೂಪ, ರೇಷ್ಮೆ ಇಲಾಖೆ ಉಪನಿರ್ದೇಶಕ ಬೈರಪ್ಪ, ತೋಟಗಾರಿಕಾ ಉಪನಿರ್ದೇಶಕ ಕೃಷ್ಣಮೂರ್ತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು