ಶನಿವಾರ, ಮಾರ್ಚ್ 6, 2021
18 °C
ನಿಗದಿಗಿಂತಲೂ ಹೆಚ್ಚು ಮಕ್ಕಳನ್ನು ಕರೆದೊಯ್ದ ಚಾಲಕ, ಅತಿಯಾದ ವೇಗದಲ್ಲಿ ನಿಯಂತ್ರಣಕ್ಕೆ ಬಾರದ ಆಟೊ

ಚಿಕ್ಕಬಳ್ಳಾಪುರ ಜಿಲ್ಲೆ:ಸಂಚಾರನಿಯಮ ಉಲ್ಲಂಘನೆ, ಆಟೊ ಪಲ್ಟಿಯಾಗಿ ವಿದ್ಯಾರ್ಥಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಿಕ್ಕಬಳ್ಳಾಪುರ: ತಾಲ್ಲೂಕಿನ ಮಾದನಾಯಕನಹಳ್ಳಿಯಿಂದ ಮಂಡಿಕಲ್ಲು ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೊವೊಂದು ಕಮ್ಮಗುಟ್ಟಹಳ್ಳಿ ಬಳಿ ಶನಿವಾರ ಬೆಳಿಗ್ಗೆ ಪಲ್ಟಿಯಾಗಿ ಒಬ್ಬ ವಿದ್ಯಾರ್ಥಿ ಸ್ಥಳದಲ್ಲಿಯೇ ಮೃತಪಟ್ಟು, ಸುಮಾರು 12 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಅತಿ ವೇಗದಲ್ಲಿ ಆಟೊ ಓಡುತ್ತಿದ್ದ ಆಟೊ ಚಾಲಕನ ನಿಯಂತ್ರಣ ಕಳೆದುಕೊಂಡು ಬಲಗಡೆ ಪಲ್ಟಿ ಹೊಡೆದಿದೆ. ಆಟೊದಲ್ಲಿದ್ದ ವಿದ್ಯಾರ್ಥಿಗಳ ಪೈಕಿ ಮಂಡಿಕಲ್ಲು ಸರ್ಕಾರಿ ಪ್ರೌಢಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಚಂದು (13) ತಲೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಚಾಲಕ ಆಟೊ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು.

ತಾಲ್ಲೂಕಿನ ಮುತ್ತುಕದಹಳ್ಳಿಯ ವೆಂಕಟರಮಣಪ್ಪ, ನಾಗವೇಣಿ ದಂಪತಿ ಪುತ್ರ ಚಂದು ಮಾದನಾಯಕನಹಳ್ಳಿಯಲ್ಲಿದ್ದ ತನ್ನ ಅಜ್ಜಿ ಮನೆಯಲ್ಲಿ ಇದ್ದುಕೊಂಡು ಮಂಡಿಕಲ್ಲು ಪ್ರೌಢಶಾಲೆಗೆ ಹೋಗುತ್ತಿದ್ದ. ಒಬ್ಬನೇ ಗಂಡು ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಗಾಯಾಳು ವಿದ್ಯಾರ್ಥಿಗಳನ್ನು ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಮೃತ ವಿದ್ಯಾರ್ಥಿಯ ಶವದ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಯಿತು. ಗುಡಿಬಂಡೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಟೊ ಚಾಲಕ ನಿತ್ಯ ಮಾದನಾಯಕನಹಳ್ಳಿಯಿಂದ ಮಂಡಿಕಲ್ಲು ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಎಂದು ತಿಳಿದು ಬಂದಿದೆ. ಶನಿವಾರ ಆಟೊದಲ್ಲಿ ಪ್ರೌಢಶಾಲೆಯ 12 ವಿದ್ಯಾರ್ಥಿಗಳ ಜತೆಗೆ ಪ್ರಾಥಮಿಕ ಶಾಲೆಯ ಕೆಲ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಚಾಲಕ ಹಣದ ಆಸೆಗೆ ಸಂಚಾರ ನಿಯಮ ಉಲ್ಲಂಘಿಸಿ ನಿಗದಿಗಿಂತಲೂ ಹೆಚ್ಚು ಮಕ್ಕಳನ್ನು ಕರೆದೊಯ್ಯುವ ಜತೆಗೆ ಅಜಾಗರೂಕತೆಯಿಂದ ವಾಹನ ಓಡಿಸಿದ್ದೆ ಈ ಅನಾಹುತಕ್ಕೆ ಕಾರಣವಾಗಿದೆ. ಸಾರಿಗೆ ಇಲಾಖೆಯವರು, ಸಂಚಾರ ಪೊಲೀಸರು ಆಟೊದವರ ಆಟಾಟೋಪ ಕಂಡರೂ ಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದರಿಂದ ಅಮಾಯಕ ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ಮಾದನಾಯಕನಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು