ಚಿಂತಾಮಣಿ: ಚಿಂತಾಮಣಿ-ಚೇಳೂರು ರಸ್ತೆಯ ಸಿದ್ದೇಪಲ್ಲಿ ಕ್ರಾಸ್ ಸಮೀಪ ಮಂಗಳವಾರ ಬೊಲೆರೊ ವಾಹನ ಮತ್ತು ಖಾಸಗಿ ಬಸ್ ಡಿಕ್ಕಿಯಾಗಿ ಬೊಲೆರೋ ವಾಹನ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಖಾಸಗಿ ಬಸ್ ಚಾಲಕ ಗಾಯಗೊಂಡಿದ್ದು ಚಿಕಿತ್ಸೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ನಲ್ಲಿದ್ದವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ.
ಚೇಳೂರು ತಾಲ್ಲೂಕಿನ ಪಾತಪಾಳ್ಯ ಸಮೀಪದ ಶಿವಪುರ ಗ್ರಾಮದ ರೆಡ್ಡಪ್ಪ (35) ಸ್ಥಳದಲ್ಲೇ ಮೃತಪಟ್ಟ ವಾಹನ ಚಾಲಕ. ಖಾಸಗಿ ಬಸ್ ಚಾಲಕ ಕಿರಣ್ ಗಾಯಗೊಂಡು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಖಾಸಗಿ ಬಸ್ ಚಿಂತಾಮಣಿಯಿಂದ ಚೇಳೂರು ಮಾರ್ಗವಾಗಿ ಆಂಧ್ರಪ್ರದೇಶದ ಬಿ-ಕೊತ್ತಕೋಟೆಗೆ ಹೋಗುತ್ತಿತ್ತು. ಬೊಲೆರೊ ವಾಹನ ಆಂಧ್ರಪ್ರದೇಶದಿಂದ ಟೊಮೆಟೊ ಕ್ರೇಟ್‌ಗಳನ್ನು ತುಂಬಿಸಿಕೊಂಡು ಚಿಂತಾಮಣಿಯ ಎಪಿಎಂಸಿ ಮಾರುಕಟ್ಟೆಗೆ ಬರುತ್ತಿತ್ತು. ಸಿದ್ದೇಪಲ್ಲಿ ಸಮೀಪ ಎರಡು ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ. ಬೊಲೆರೊ ಬಸ್‌ನಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಪೊಲೀಸರು ಯಂತ್ರ ತರಿಸಿ ವಾಹನಗಳನ್ನು ಬೇರ್ಪಡಿಸಿದರು.
ರಸ್ತೆಯಲ್ಲಿ ಎರಡು ವಾಹನ ಹಾಗೂ ಟೊಮೆಟೊ ಹರಡಿಕೊಂಡು ಸಂಚಾರ ಅಸ್ತವ್ಯಸ್ತವಾಗಿತ್ತು. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ವೆಂಕಟರಮಣಪ್ಪ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಚಿಂತಾಮಣಿ ತಾಲ್ಲೂಕಿನ ಸಿದ್ದೇಪಲ್ಲಿ ಬಳಿ ಮಂಗಳವಾರ ಬೊಲೆರೊ ವಾಹನ ಖಾಸಗಿ ಬಸ್‌ಗೆ ಡಿಕ್ಕಿಯಾಗಿರುವುದು