ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಭವನ ನೋಡಿ 'ಮದುವೆ ಛತ್ರಕ್ಕೂ ಯೋಗ್ಯವಲ್ಲದ ಕಟ್ಟಡ' ಎಂದ ಸಚಿವ ಎಂ.ಸಿ ಸುಧಾಕರ್

Published 11 ಜೂನ್ 2023, 13:57 IST
Last Updated 11 ಜೂನ್ 2023, 13:57 IST
ಅಕ್ಷರ ಗಾತ್ರ

ಚಿಂತಾಮಣಿ: ‘ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಾರ್ವಜನಿಕ ಸಭೆ, ಸಮಾರಂಭಗಳಿಗಾಗಿ ರೂಪಿಸಲಾಗಿದ್ದ ಅಂಬೇಡ್ಕರ್ ಭವನವನ್ನು ಮದುವೆ ಮಂಟಪವನ್ನಾಗಿ ನಿರ್ಮಿಸಲಾಗಿದೆ. ಆದರೆ, ಅದಕ್ಕೂ ಅಗತ್ಯ ಸೌಲಭ್ಯಗಳಿಲ್ಲ. ಈ ಕಟ್ಟಡ ಕಾಮಗಾರಿಯು ಸಂಪೂರ್ಣವಾಗಿ ಕಳಪೆಯಾಗಿದ್ದು, ಸೌಲಭ್ಯಗಳುಳ್ಳ ಭವನವೂ ಆಗಲಿಲ್ಲ. ಮದುವೆ ಮಂಟಪವೂ ಆಗಲಿಲ್ಲ’ ಹೀಗೆಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. 

ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಭವನದ ಸ್ಥಳಕ್ಕೆ ಭಾನುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು, ಪರಿಶೀಲನೆ ನಡೆಸಿದರು. 

‘ನಗರಸಭೆಯಿಂದ ಕೊಟ್ಟಿರುವ ನಿವೇಶನದ ಗಡಿಯನ್ನು ಗುರುತಿಸಲಾಗಿಲ್ಲ. ಕೀ ನಕ್ಷೆ ತಯಾರಿಸಿಲ್ಲ. ಯಾವುದೇ ಮುನ್ನೋಟವಿಲ್ಲದೆ, ನಿರ್ದಿಷ್ಟ ಗುರಿ ಇಲ್ಲದೆ ಕಟ್ಟಡ ನಿರ್ಮಿಸಲಾಗಿದೆ. ನನ್ನ ಪರಿಕಲ್ಪನೆ ಬೇರೆಯಾಗಿತ್ತು. ಯಾರು ಇದರ ಬಗ್ಗೆ ಗಮನಹರಿಸಿಲ್ಲ. ಸಾಧ್ಯವಾದಷ್ಟು ಬದಲಾವಣೆ ವಿನ್ಯಾಸವನ್ನು ತಯಾರಿಸಲು ತಜ್ಞರಿಗೆ ಒಪ್ಪಿಸಿ ಪರ್ಯಾಯ ನಕ್ಷೆ ತಯಾರಿಸಿ ಸಂಘಟನೆಗಳ ಮುಖಂಡರೊಡನೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು. 

ಅಂಬೇಡ್ಕರ್ ಭವನ ಕಲೆ, ಸಾಹಿತ್ಯ, ಸಂಸ್ಕೃತಿಯ ಕೇಂದ್ರವಾಗಬೇಕು. ಅಂಬೇಡ್ಕರ್ ಗ್ರಂಥಾಲಯ, ಅಧ್ಯಯನ ಕೇಂದ್ರ ಎನ್ನುವುದು ಗುರಿಯಾಗಬೇಕು. ನಾಡಿನ ಕಲೆ, ಸಂಸ್ಕೃತಿ ಭಾಷೆ ಮತ್ತು ಇತರೆ ಚಟುವಟಿಕೆಗಳಿಗೆ ನಗರದ ಹೃದಯ ಭಾಗದಲ್ಲಿ ನಿರ್ಮಾಣ ಮಾಡುವ ಚಿಂತನೆ ಮಾಡಿದ್ದೆ ಎಂದರು.

2006ರಲ್ಲಿ ಸರ್ಕಾರ ಅಂಬೇಡ್ಕರ್ ಭವನ ನಿರ್ಮಾಣ ಮಾಡುವ ಯೋಜನೆ ರೂಪಿಸಿ ₹5 ಲಕ್ಷ ಅನುದಾನ ಮಂಜೂರು ಮಾಡಿತ್ತು. ಆಶ್ರಯ ಬಡಾವಣೆಯಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ನಿವೇಶನ ಗುರುತಿಸಲಾಗಿತ್ತು. ₹70 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ನಿವೇಶನದ ಸ್ಥಳ ಪರಿಶೀಲನೆ ಮಾಡಿದಾಗ, ಸೂಕ್ತವಾಗಿ ಕಾಣಲಿಲ್ಲ. ಪರಿಶಿಷ್ಟ ಜಾತಿ/ಪಂಗಡ ಹಾಗೂ ಎಲ್ಲ ಸಮುದಾಯಗಳಿಗೂ ಅನುಕೂಲವಾಗುವಂತೆ ಭವನ ನಿರ್ಮಾಣವಾಗಲು ನಗರಸಭೆಯಿಂದ ನಿವೇಶನ ನೀಡಲಾಯಿತು ಎಂದರು.

ಇದುವರೆಗೆ ₹4.49 ಕೋಟಿ ಖರ್ಚು ಮಾಡಲಾಗಿದೆ. ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದಾಗ ಅಂಬೇಡ್ಕರ್ ಭವನ ಎನ್ನಲಾಗುವ ಕಟ್ಟಡವು ಮದುವೆ ಛತ್ರಕ್ಕೂ ಅನುಕೂಲವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಲೆ, ಸಾಹಿತ್ಯ, ಸಂಸ್ಕೃತಿ ಭವನಕ್ಕೂ ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. ಒಂದು ವಾರದ ಒಳಗಾಗಿ ಸಂಪೂರ್ಣ ವಿವರಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮಾಡಿರುವುದನ್ನು ಯಾವ ರೀತಿ ಉತ್ತಮಗೊಳಿಸಬಹುದು ಎಂದು ಖಾಸಗಿಯವರಿಂದಲೂ ಸಲಹೆ ಪಡೆಯಲಾಗುವುದು. ನಂತರ ಸರ್ಕಾರದಿಂದ ಹೆಚ್ಚಿನ ಅನುದಾನ ತರಲಾಗುವುದು ಎಂದು ಭರವಸೆ ನೀಡಿದರು.

ಗ್ರೇಡ್-2 ತಹಶೀಲ್ದಾರ್ ರಾಜೇಂದ್ರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ನಿರ್ಮಿತಿ ಕೇಂದ್ರದ ಅಧಿಕಾರಿಗಳು, ದಲಿತ ಸಂಘಟನೆಗಳ ಮುಖಂಡರಾದ ಎನ್.ಮುನಿಶಾಮಿ, ಗೊಲ್ಲಹಳ್ಳಿ ಶಿವಪ್ರಸಾದ್, ಕೆ.ಲಕ್ಷ್ಮಿನಾರಾಯಣ ಮತ್ತಿತರರು ಇದ್ದರು. 

ಈ ಅವ್ಯವಸ್ಥೆಗೆ ನನ್ನ ಸೋಲು ಕಾರಣ

‘ಅವಿಭಜಿತ ಕೋಲಾರ ಜಿಲ್ಲೆಯಲ್ಲೇ ಅತ್ಯುತ್ತಮ ಭವನ ನಿರ್ಮಾಣ ಮಾಡಬೇಕು ಎಂದು ಚಿಂತನೆ ನಡೆಸಿದ್ದೆ.  1350 ಜನರಿಗೆ ಆಸನ ವ್ಯವಸ್ಥೆ ಕೆಳ ಅಂತಸ್ತಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಹವಾನಿಯಂತ್ರಿತ ಸಭಾಂಗಣ ಮತ್ತಿತರ ವ್ಯವಸ್ಥೆಗಳುಳ್ಳ ನೀಲಿನಕ್ಷೆ ತಯಾರಿಸಲಾಗಿತ್ತು. ಕೆಯುಐಡಿಎಫ್‌ಸಿಯಿಂದ ₹20 ಕೋಟಿ ಸಾಲ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ₹4 ಕೋಟಿ ಭವನಕ್ಕೆ₹ 4 ಕೋಟಿ ಬೀದಿಬದಿ ವ್ಯಾಪಾರಿಗಳ ಅಂಗಡಿಗಳ ನಿರ್ಮಾಣ ಉಳಿದ ₹12 ಕೋಟಿಯನ್ನು ರಾಮಕುಂಟೆ ಪ್ರದೇಶದಲ್ಲಿ ಖಾಸಗಿ ಬಸ್ ನಿಲ್ದಾಣ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿತ್ತು. ಚುನಾವಣೆಯಲ್ಲಿ ನಾನು ಸೋತ ನಂತರ ಎಲ್ಲವೂ ಅವ್ಯಸ್ಥೆ ಆಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT