ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾಕರ್ ಆಸ್ತಿಯಲ್ಲಿ ₹1.66 ಕೋಟಿ ಹೆಚ್ಚಳ: ಪತ್ನಿಯ ಮೇಲೆ ಭಾರಿ ಸಾಲದ ಹೊರೆ

ನಾಮಪತ್ರದಲ್ಲಿ ಉಲ್ಲೇಖ
Last Updated 16 ನವೆಂಬರ್ 2019, 15:13 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಳೆದ ಆರು ವರ್ಷಗಳಲ್ಲಿ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿ, ಎರಡನೇ ಅವಧಿಯಲ್ಲಿ 14 ತಿಂಗಳಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಇದೀಗ ಮೂರನೇ ಬಾರಿಗೆ ‘ಅದೃಷ್ಟ’ ಪರೀಕ್ಷೆಗೆ ಮುಂದಾಗಿರುವ ಡಾ.ಕೆ.ಸುಧಾಕರ್ ಅವರು ಶನಿವಾರ ಸರಳವಾಗಿ ನಾಮಪತ್ರ ಸಲ್ಲಿಸಿದ್ದು, ಇದೇ ವೇಳೆ ಅವರು ದಂಪತಿಗೆ ₹17.04 ಕೋಟಿ ಆಸ್ತಿ, ₹10.97 ಕೋಟಿ ಸಾಲವಿದೆ ಎಂದು ಪ್ರಮಾಣಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.

2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸುಧಾಕರ್ ಅವರು ತಮ್ಮ ಕುಟುಂಬದ ಒಟ್ಟು ಆಸ್ತಿ ₹15.38 ಕೋಟಿ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದರು. ಅದಕ್ಕೆ ಹೋಲಿಸಿದರೆ ಕಳೆದ ಒಂದೂವರೆ ವರ್ಷದಲ್ಲಿ ಅವರ ಆಸ್ತಿ ₹1.66 ಕೋಟಿ ಹೆಚ್ಚಳವಾಗಿದೆ. ಸಾಲ ಪ್ರಮಾಣವೂ ₹12 ಲಕ್ಷದಷ್ಟು ಹೆಚ್ಚಳವಾಗಿದೆ.

2018ರ ಚುನಾವಣೆ ಸಂದರ್ಭದಲ್ಲಿ ಸುಧಾಕರ್ ಮತ್ತು ಅವರ ಪತ್ನಿ ಡಾ.ಪ್ರೀತಿ ಅವರ ಒಟ್ಟು ಚರಾಸ್ತಿ ₹11.87 ಕೋಟಿ ಇತ್ತು. ಅದೀಗ ₹14.89 ಕೋಟಿಗೆ ಏರಿಕೆಯಾಗಿದೆ. ₹3.51 ಕೋಟಿ ಯಷ್ಟಿದ್ದ ಸ್ಥಿರಾಸ್ತಿ ಮೌಲ್ಯ ₹2.15 ಕೋಟಿಗೆ ಕುಸಿದಿದೆ.

ಕುಟುಂಬದ ಆಸ್ತಿಯಲ್ಲಿ ‘ಅಗ್ರ’ ಪಾಲು ಹೊಂದಿರುವ ಪ್ರೀತಿ ಅವರ ಮೇಲೆ ಇದೀಗ ದೊಡ್ಡ ಸಾಲದ ಹೊರೆ ಇದೆ. ಶಿವನ್ ಎಂಬುವರಿಗೆ ₹ 10 ಕೋಟಿ ಸೇರಿದಂತೆ ಐದು ಜನರು ಒಟ್ಟು ₹10.68 ಕೋಟಿ ಮರುಪಾವತಿಸಬೇಕಿದೆ. ಈ ಸಾಲದ ಪ್ರಮಾಣ ಕಳೆದ ಚುನಾವಣೆಯಲ್ಲಿ ₹ 10.70 ಕೋಟಿ ಇತ್ತು. ಪ್ರಸ್ತುತ ಸುಧಾಕರ್ ಅವರು ಪಿಸಿಎಆರ್‌ಡಿ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಪತ್ನಿಗೆ ಸೇರಿದಂತೆ ಒಟ್ಟು ₹ 29.84 ಲಕ್ಷ ಮರು ಪಾವತಿಸಬೇಕಿದೆ.

ಸ್ಥಿರಾಸ್ತಿ ಪೈಕಿ ಪಿತ್ರಾರ್ಜಿತ ಮತ್ತು ಸ್ವಯಾರ್ಜಿತ ಸೇರಿ ಸುಧಾಕರ್ ಅವರ ಬಳಿ ₹97.37 ಲಕ್ಷ, ಪತ್ನಿ ಬಳಿ ₹1.17 ಕೋಟಿ ಆಸ್ತಿ ಇದೆ. ಸುಧಾಕರ್ ಅವರ ಚರಾಸ್ತಿ ಕಳೆದ ಒಂದೂವರೆ ವರ್ಷ ಹಿಂದೆ ₹ 2.34 ಕೋಟಿ ಇತ್ತು. ಅದೀಗ ₹1.37 ಕೋಟಿಯಷ್ಟು ಕಡಿಮೆಯಾಗಿದೆ. ಪತ್ನಿಯ ಚರಾಸ್ತಿಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಇನ್ನು ಚರಾಸ್ತಿಯಲ್ಲಿ ವಿವಿಧ ಬ್ಯಾಂಕ್‌ ಖಾತೆಗಳಲ್ಲಿರುವ ಠೇವಣಿ, ಉದ್ಯಮಗಳಲ್ಲಿ ಮಾಡಿರುವ ಹೂಡಿಕೆಗಳು ಸೇರಿವೆ. ಸುಧಾಕರ್ ಬಳಿ 160 ಗ್ರಾಂ ಚಿನ್ನ, ಪ್ರೀತಿ ಅವರ ಬಳಿ ₹ 30 ಲಕ್ಷ ಮೌಲ್ಯದ 1 ಕೆ.ಜಿ. ಬಂಗಾರದ ಆಭರಣಗಳು, ನಾಲ್ಕು ವಜ್ರದ ಹಾರಗಳು, 21 ಕೆ.ಜಿ.ಬೆಳ್ಳಿ ವಸ್ತುಗಳು ಮತ್ತು ₹ 66 ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ಇದೆ. ಈ ದಂಪತಿಯ ಬಳಿ ಒಂದು ಕಾರು, ಮೂರು ಟ್ರ್ಯಾಕ್ಟರ್‌ಗಳು ಇವೆ.

ಕಳೆದ ವಿಧಾನಸಭೆ ಚುನಾವಣೆ ವೇಳೆ ಸುಧಾಕರ್ ದಂಪತಿ ಬಳಿ 5 ಕೆ.ಜಿ.ಬೆಳ್ಳಿ ವಸ್ತುಗಳು ಮತ್ತು ನಾಲ್ಕು ಕಾರುಗಳು, ಒಂದು ಟ್ರ್ಯಾಕ್ಟರ್ ಇತ್ತು. ಕ್ಷೇತ್ರದಾದ್ಯಂತ ಈಗಾಗಲೇ ಜೋರು ಪ್ರಚಾರ ಕೈಗೊಂಡಿರುವ ಸುಧಾಕರ್ ಅವರ ಬಳಿ ಸದ್ಯ ₹4.20 ಲಕ್ಷ ಮತ್ತು ಅವರ ಪತ್ನಿ ಬಳಿ ₹ 3.10 ಲಕ್ಷ ನಗದು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT