ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರು ಅಡ್ಡಗಟ್ಟಿ ₹3.10 ಲಕ್ಷ ಕಸಿದು ಪರಾರಿ ಪ್ರಕರಣ: ಖದೀಮರ ಬಂಧನ

Last Updated 17 ಫೆಬ್ರುವರಿ 2020, 16:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಹಾರೋಬಂಡೆ ಬಳಿ ಜನವರಿ 26 ರಂದು ದನದ ವ್ಯಾಪಾರಿಗಳ ಕಾರು ಅಡ್ಡಗಟ್ಟಿ, ₹3.10 ಲಕ್ಷ ನಗದು ಮತ್ತು ಮೂರು ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದ ಎಂಟು ಮಂದಿ ಖದೀಮರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗಿಡ್ನಪ್ಪನಹಳ್ಳಿಯ ಲಾರಿ ಚಾಲಕ ಜಿಯಾವುಲ್ಲಾ ಖಾನ್, ಹೊಸಕೋಟೆ ಕನಕನಗರ ನಿವಾಸಿ ಹಣ್ಣಿನ ವ್ಯಾಪಾರಿ ಯಾರಬ್ ಬೇಗ್, ಸೂಲಿಬೆಲೆ ಹೋಬಳಿಯ ತಮ್ಮರಸನಹಳ್ಳಿ ಟೆಂಪೋ ಚಾಲಕ ಸೈಯದ್ ಫಾರೀಜ್, ಟೆಂಪೊ ಚಾಲಕ ಸೈಫ್‌ ಬೇಗ್‌, ಟಾಟಾ ಏಸ್ ಚಾಲಕ ಬೆಂಡಗಾನಹಳ್ಳಿಯ ನವಾಜ್ ಬೇಗ್, ಹೋಸಕೋಟೆ ನಗರದ ಜನತಾ ಕಾಲೋನಿಯ ಆಟೋ ಚಾಲಕ ಮಹಮದ್ ಶಾರೂಖ್ ಹನಿಫ್‌, ಶಿಡ್ಲಘಟ್ಟ ನಗರದ ಚಾಲಕ ಸುಹೇಲ್ ಪಾಷಾ ಹಾಗೂ ಬೆಂಗಳೂರಿನ ಸರ್ವೋದಯ ನಗರದ ನಿವಾಸಿ ಚಾಲಕ ನದೀಮ್ ಪಾಷಾ ಬಂಧಿತ ಆರೋಪಿಗಳು.

ಆರೋಪಿಗಳಿಂದ ಪೊಲೀಸರು ಎರಡು ಕಾರು, ₹1.10 ಲಕ್ಷ ನಗದು, ಎರಡು ಚಾಕುಗಳು ಮತ್ತು ಮೂರು ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕೆಲ ಆರೋಪಿಗಳು ಇದೇ ರೀತಿಯ ಕೆಲ ಕೃತ್ಯಗಳಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ಪೊಲೀಸರು ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಬಂಧಿತರಲ್ಲಿ ಪ್ರಮುಖ ಆರೋಪಿಗಳಾದ ಸುಹೇಲ್ ಪಾಷಾ ಮತ್ತು ಸೈಯದ್ ಫಾರೀಜ್ ಅವರು ಉಳಿದವರ ಸಹಕಾರದೊಂದಿಗೆ ದರೋಡೆಗೆ ಸಂಚು ರೂಪಿಸಿದ್ದರು. ಅದರಂತೆ 26 ರಂದು ರಾತ್ರಿ ಬೆಂಗಳೂರಿನಿಂದ ಆಂಧ್ರಪ್ರದೇಶದ ಅನಂತಪುರಕ್ಕೆ ದನಗಳ ವ್ಯಾಪಾರಕ್ಕೆ ತೆರಳುತ್ತಿದ್ದ ಶಿವಾಜಿ ನಗರದ ನಿವಾಸಿ ಫಕ್ರುದ್ದೀನ್ ಬಾಬಾ ಅವರಿಂದ ಹಣ ದೋಚಲು ಆರೋಪಿಗಳು ಮುಂದಾಗಿದ್ದರು ಎಂದು ಪೊಲೀಸರು ತಿಳಿಸಿದರು.

ಸುಹೇಲ್ ಪಾಷಾ, ಸೈಯದ್ ಫಾರೀಜ್, ನವಾಜ್ ಬೇಗ್, ಸೈಫ್‌ ಬೇಗ್‌ ಅವರು ಬೆಂಗಳೂರಿನಿಂದ ಫಕೃಬಾಬಾ ಅವರ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದರು. ವೆಂಕಟಗಿರಿ ಕೋಟೆಯ ಸ್ವಾಮಿ ದಾಬಾ ಬಳಿ ಇನ್ನುಳಿದ ಆರೋಪಿಗಳಾದ ಜಿಯಾವುಲ್ಲಾ ಖಾನ್, ಯಾರಬ್ ಬೇಗ್, ಶಾರೂಖ್ ಹನಿಫ್‌, ನದೀಮ್ ಪಾಷಾ ಅವರು ಅವರು ತಂಡವನ್ನು ಸೇರಿಕೊಂಡಿದ್ದರು ಎಂದು ಹೇಳಿದರು.

ನಸುಕಿನ ಮೂರೂವರೆ ಗಂಟೆ ಸುಮಾರಿಗೆ ಆರೋಪಿಗಳು ಹಾರೊಬಂಡೆ ಗೇಟ್‌ ಬಳಿ ಫಕ್ರುದ್ದೀನ್ ಬಾಬಾ ಅವರ ಕಾರು ಅಡ್ಡಗಟ್ಟಿ, ಕಾರಿನಲ್ಲಿದ್ದ ಸಾದಿಕ್‌ ಎಂಬುವರಿಗೆ ಚಾಕುವಿನಿಂದ ಇರಿದು ಕಾರಿನಲ್ಲಿದ್ದವರಿಂದ ಹಣ, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ಗ್ರಾಮಾಂತರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದೋಚಿದ್ದ ಹಣವನ್ನು ಆರೋಪಿಗಳೆಲ್ಲರೂ ಹಂಚಿಕೊಂಡಿದ್ದರು ಎನ್ನಲಾಗಿದೆ. ಖಚಿತ ಸುಳಿವಿನ ಮೆರೆಗೆ ಪೊಲೀಸರು ಸೋಮವಾರ ನಸುಕಿನ ಜಾವ 1.30ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ನಂದಿಕ್ರಾಸ್‌ ಬಳಿ ಇರುವ ಕೆಳಸೇತುವೆ ಸಮೀಪ ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT