ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: ಗಡಿ ಶಾಲೆಗಳ ನಿರ್ಲಕ್ಷ್ಯ

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ l ಮೂಲ ಸೌಲಭ್ಯ ಕಲ್ಪಿಸಲು ಜನಪ್ರತಿನಿಧಿಗಳ ಅಸಡ್ಡೆ
Last Updated 12 ಜೂನ್ 2022, 19:30 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕು ನೆರೆಯ ಆಂಧ್ರಪ್ರದೇಶದ ಜತೆ ಗಡಿ ಹಂಚಿಕೊಂಡಿದೆ. ಈ ಗಡಿ ಭಾಗದ ಗ್ರಾಮೀಣ ಸರ್ಕಾರಿ ಶಾಲೆಗಳು ಅಧ್ವಾನದ ಸ್ಥಿತಿಯಲ್ಲಿವೆ. ಕಾಯಂ ಶಿಕ್ಷಕರಿಲ್ಲ. ಮೂಲ ಸೌಲಭ್ಯಗಳು ಇಲ್ಲ. ಈ ‘ಇಲ್ಲ’ಗಳ ಕಾರಣದಿಂದ ವಿದ್ಯಾರ್ಥಿಗಳ ಕಲಿಕಾ ಮಟ್ಟ ಕುಸಿಯುತ್ತಿದೆ.

ತಾಲ್ಲೂಕಿನಲ್ಲಿ ಒಟ್ಟು 329 ಶಾಲೆಗಳಿವೆ. ಇದರಲ್ಲಿ 271 ಸರ್ಕಾರಿ ಗಳಾಗಿವೆ. ಈ ಸರ್ಕಾರಿ ಶಾಲೆಗಳ ಪೈಕಿ ಪ್ರಾಥಮಿಕ 178, ಹಿರಿಯ ಪ್ರಾಥಮಿಕ 72 ಹಾಗೂ 21 ಪ್ರೌಢಶಾಲೆಗಳಿವೆ. 2021-22ನೇ ಸಾಲಿನಲ್ಲಿ ಈ ಸರ್ಕಾರಿ ಶಾಲೆಗಳಿಗೆ ಒಟ್ಟು 26,204 ವಿದ್ಯಾರ್ಥಿಗಳು ದಾಖಲಾಗಿದ್ದರು.

ತಾಲ್ಲೂಕಿನಲ್ಲಿ 210 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಹಾಗೂ 31 ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಾಯಂ ಶಿಕ್ಷಕರಿಲ್ಲ. ಮಕ್ಕಳ ಕಲಿಕೆಗೆ ಹಿನ್ನಡೆ ಆಗದಿರಲು ತಾಲ್ಲೂಕಿನಲ್ಲಿ ಇದೀಗ 125 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ, 25 ಸರ್ಕಾರಿ ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ.

ಡಿ.ಎಂ. ನಂಜುಂಡಪ್ಪ ವರದಿ ಪ್ರಕಾರ ಬಾಗೇಪಲ್ಲಿ ಅತಿ ಹಿಂದುಳಿದ ತಾಲ್ಲೂಕಾಗಿದೆ. ನದಿ ನಾಲೆಗಳು, ಕೈಗಾರಿಕೆಗಳು ಇಲ್ಲ. ರೈತರು ಕೃಷಿ ಆಧಾರಿತವಾದ ಜೀವನ ನಡೆಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕಾಯಂ ಶಿಕ್ಷಕರು ಇಲ್ಲ ಎನ್ನುವ ಕೊರತೆ ಒಂದೆಡೆಯಾದರೆ ಕೆಲ ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲವಾಗಿವೆ. ಕೊಠಡಿಗಳ ಚಾವಣಿಯಲ್ಲಿ ಸಿಮೆಂಟ್ ಉದುರುತ್ತದೆ. ಮಳೆ ಬಂದರೆ ಸೋರುತ್ತದೆ. ತೇವಾಂಶದ ನೆಲದಲ್ಲಿ ಮಕ್ಕಳು ಪಾಠ ಕೇಳಬೇಕು.

ಗೊರ್ತಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿ. ಕೊತ್ತಪಲ್ಲಿ ಗ್ರಾಮದ ಸರ್ಕಾರಿ ಶಾಲೆಗೆ ಕಾಂಪೌಂಡ್ ಇದೆ. ಆದರೆ, ಕೊಠಡಿಗಳು ಶಿಥಿಲವಾಗಿವೆ. ಶಾಲೆ ಆವರಣದಲ್ಲಿರುವ ಹೆಣ್ಣು ಮಕ್ಕಳ ಶೌಚಾಲಯದ ನಿರ್ವಹಣೆಯೇ ಇಲ್ಲ. ಶೌಚಾಲಯಕ್ಕೆ ಬಾಗಿಲುಗಳೇ ಇಲ್ಲ.ವಿದ್ಯಾರ್ಥಿನಿಯರಿಗೆ ಶೌಚಾಲಯದ ಕೊರತೆ ಎದುರಾಗಿದೆ. ಮುಖ್ಯದ್ವಾರಕ್ಕೆ ಗೇಟಿನ ವ್ಯವಸ್ಥೆ ಇಲ್ಲ. ಶಾಲೆಯ ಆವರಣ ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ಮಾರ್ಗಾನುಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಕೊಠಡಿಗಳು ಇಲ್ಲ. ತಾಲ್ಲೂಕಿನಲ್ಲಿ ಕೆಲವು ಸರ್ಕಾರಿ ಶಾಲೆಗಳಲ್ಲಿ ತರಗತಿಗಳ ಕೊಠಡಿಗಳ ಕೊರತೆಯಿಂದ 1ರಿಂದ 5 ಹಾಗೂ 6ರಿಂದ 8 ರವರಿಗೂ ತರಗತಿಗಳು ಒಂದೇ ಕೊಠಡಿಯಲ್ಲಿ ನಡೆಯುತ್ತಿವೆ.

ಆಚೇಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ಕೊರತೆ ಇದೆ. ಕೊಠಡಿ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಮಂಜೂರಾಗಿದೆ. ಆದರೆ, ಕೆಲವರ ರಾಜಕೀಯ ಹಸ್ತಕ್ಷೇಪದಿಂದ ಕೊಠಡಿಗಳ ನಿರ್ಮಾಣಕ್ಕೆ ತಡೆ ಉಂಟಾಗಿದೆ.

ಮುಖ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಕಾಯಂ ಶಿಕ್ಷಕರು ಇಲ್ಲ. ಇದರಿಂದ ತಾಲ್ಲೂಕಿನ ಸರ್ಕಾರಿ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಕೆಲ ಶಾಲೆಗಳಲ್ಲಿ ಅನೇಕ ವರ್ಷಗಳಿಂದ ಕಾಯಂ ಶಿಕ್ಷಕರು, ಮುಖ್ಯಶಿಕ್ಷಕರು ನೇಮಕ ಆಗಿಲ್ಲ.

ತರಗತಿವಾರು, ವಿಷಯವಾರು ಶಿಕ್ಷಕರು ನೇಮಕ ಆಗದೇ ಇರುವುದರಿಂದ ಕೆಲಸ ನಿರ್ವಹಿಸುವ ಶಿಕ್ಷಕರೇ ಕನ್ನಡ, ಇಂಗ್ಲಿಷ್, ಗಣಿತ, ವಿಜ್ಞಾನ, ಸಮಾಜ, ಹಿಂದಿ ವಿಷಯಗಳ ಪಾಠಗಳನ್ನು ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಹೆಚ್ಚುವರಿಯಾಗಿ ಮಧ್ಯಾಹ್ನದ ಬಿಸಿಯೂಟ ನಿರ್ವಹಿಸುತ್ತಿದ್ದಾರೆ. ವಿಷಯಾವಾರು ಶಿಕ್ಷಕರು ಇಲ್ಲದ ಕಾರಣ ಮಕ್ಕಳ ಕಲಿಕೆಗೆ ಹಿನ್ನಡೆ ಆಗಿದೆ.

ಬಾಗೇಪಲ್ಲಿ ತಾಲ್ಲೂಕಿನ ಮೇಲೆ ತೆಲುಗಿನ ದಟ್ಟ ಪ್ರಭಾವವಿದೆ. ಶಾಲೆಗಳಿಗೆ ಹೋದರೆ ಮಾತ್ರ ಕನ್ನಡ ಬರುತ್ತದೆ. ಇಲ್ಲದಿದ್ದರೆ ಕನ್ನಡ ಕಲಿಕೆ ಸಾಧ್ಯವಿಲ್ಲ ಎನ್ನುವ ವಾತಾವರಣವಿದೆ. ಸರ್ಕಾರಿ ಶಾಲೆಗಳು ಸೌಲಭ್ಯಗಳ ಕೊರತೆಯಿಂದ ಬಳಲುತ್ತಿರುವುದು ನೇರವಾಗಿ ಭಾಷಾ ಬೆಳವಣಿಗೆಯ ಮೇಲೂ ಪರಿಣಾಮವನ್ನು ಬೀರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT