ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: ಅರಣ್ಯ ಕೃಷಿಯಲ್ಲಿ ಹೆಚ್ಚಿನ ಲಾಭ

Published 30 ಸೆಪ್ಟೆಂಬರ್ 2023, 12:53 IST
Last Updated 30 ಸೆಪ್ಟೆಂಬರ್ 2023, 12:53 IST
ಅಕ್ಷರ ಗಾತ್ರ

-ಪಿ.ಎಸ್.ರಾಜೇಶ್

ಬಾಗೇಪಲ್ಲಿ: ವೈಜ್ಞಾನಿಕ ಕೃಷಿ ಪದ್ಧತಿ, ಸಾವಯವ ರಸಗೊಬ್ಬರ ಬಳಕೆ ಮಾಡಿಕೊಂಡು ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ಕೃಷಿಗಳಲ್ಲಿ ಬೇಸಾಯ ಮಾಡಿ ವಾರ್ಷಿಕ ಲಕ್ಷಾಂತರ ರೂಪಾಯಿ ಲಾಭ ಗಳಿಸುವ ಅಪರೂಪದ ರೈತ ಮಹಿಳೆ ತಾಲ್ಲೂಕಿನ ಗುಂಟಿಗಾನಪಲ್ಲಿ ಗ್ರಾಮದ ನಾರಾಯಣಮ್ಮ ಪಾಪಿರೆಡ್ಡಿ ಅವರು.

ತಾಲ್ಲೂಕಿನ ಕಾನಗಮಾಕಲಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುಂಟಿಗಾನಪಲ್ಲಿ ಗ್ರಾಮ ಇದೆ. ಗ್ರಾಮದ ಪಕ್ಕದಲ್ಲಿ 10 ಎಕರೆ ತೋಟದ ಪ್ರದೇಶ ಇದೆ. ವೈಜ್ಞಾನಿಕ, ತಾಂತ್ರಿಕ ಸಮಗ್ರ ಕೃಷಿ ಬೆಳೆಯಲ್ಲಿ ವೈವಿಧ್ಯ, ವಿನೂತನ ತಳಿಯ ಗಿಡಗಳು ಹಾಗೂ ಮರಗಳನ್ನು ಬೆಳೆಸಿದ್ದಾರೆ. 3 ಎಕರೆ ಪ್ರದೇಶದಲ್ಲಿ ದಿಲ್‌ಕುಶ್ ದ್ರಾಕ್ಷಿ ಬೆಳೆ ಬೆಳೆದು ವಾರ್ಷಿಕ ₹25 ಲಕ್ಷದಿಂದ ₹30 ಲಕ್ಷದವರೆಗೂ ಲಾಭ ಪಡೆದಿದ್ದಾರೆ. 4 ಎಕರೆ ಪ್ರದೇಶದಲ್ಲಿ ಅಲಹಬಾದ್‌ನ ಸೀಬೆ ಹಾಕಿ, ವಾರ್ಷಿಕ ₹10 ರಿಂದ ₹15 ಲಕ್ಷ ಲಾಭ ಗಳಿಸಿದ್ದಾರೆ.

ಸೀಬೆ 1,500 ಗಿಡ, ಸಪೋಟ 50, ಮಾವು 50, ಹಲಸು 20, ನಿಂಬೆ 10, ತೆಂಗು 50, ಶ್ರೀಗಂಧ 500, ಬಾಳೆ 50, ನುಗ್ಗೆ 10 ಹಾಗೂ ಹೆಬ್ಬೇವು 200 ಸೇರಿದಂತೆ ವಿವಿಧ ಜಾತಿಗಳ ಗಿಡಗಳನ್ನು ಬೆಳೆದಿದ್ದಾರೆ.

ಅರಣ್ಯ ಮರಗಳು 1000, ತೋಟಗಾರಿಕೆಯ 50 ವಿವಿಧ ಜಾತಿಯ 200 ಮರ ಬೆಳೆದಿದ್ದಾರೆ. ಅಲ್ಲದೇ ಹೊಲ-ಗದ್ದೆಯಲ್ಲಿ ತೊಗರಿ, ಅವರೆ, ನೆಲಗಡಲೆ, ರಾಗಿ ಭತ್ತ, ಅಲಸಂದೆ ಸೇರಿದಂತೆ ಕೃಷಿ ಬೆಳೆಗಳನ್ನು ಬೆಳೆಯುತ್ತಾರೆ.

ವೈಜ್ಞಾನಿಕ ಕೃಷಿ ಪದ್ಧತಿಗಳಲ್ಲಿ ಹನಿ ನೀರಾವರಿ, ತುಂತುರು ನೀರಾವರಿ, ಮಳೆ ನೀರಿನ ಸಂಸ್ಕರಣೆ ತೊಟ್ಟಿ, ಕೃಷಿ ಹೊಂಡ, ಚೆಕ್ ಡ್ಯಾಂ ನಿರ್ಮಿಸಿಕೊಂಡಿದ್ದಾರೆ. ಮಳೆಯ ನೀರನ್ನು ಸಂಗ್ರಹ ಮಾಡಿಕೊಂಡು, ಬೆಳೆಗಳಿಗೆ ನೀರು ಹಾಯಿಸಿದ್ದಾರೆ. ಇದರ ಜೊತೆಗೆ 2 ಕೊಳವೆ ಬಾವಿಗಳಲ್ಲಿ ನೀರಿನ ಸರಬರಾಜಿನಿಂದ ಉತ್ತಮ ಬೆಳೆ ಬರಲು ನೆರವಾಗಿದೆ.

ನಾಟಿ ತಳಿಯ ಹಸು, ಎಮ್ಮೆ, ಕೋಳಿ ಸಾಕಾಣೆ ಮಾಡಿದ್ದಾರೆ. ತೋಟದಲ್ಲಿ ರಸಸಾರ ತೊಟ್ಟಿ ನಿರ್ಮಿಸಿದ್ದಾರೆ. ಪ್ರಾಣಿಗಳ ಮೇವು ತ್ಯಾಜ್ಯ, ಗಂಜಲ ಹಾಗೂ ಸಗಣಿಯನ್ನು ತೊಟ್ಟಿಗೆ ಹಾಕಿದ್ದಾರೆ. ಸಾವಯವ ಗೊಬ್ಬರ ಮಾಡಿ, ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಸಿಂಪಡಿಸಿದ್ದಾರೆ. ಈ ಗೊಬ್ಬರದಿಂದ ಉತ್ತಮವಾಗಿ ಫಸಲು ಬರಲು ಕಾರಣ ಆಗಿದೆ ಎಂದು ನಾರಾಯಣಮ್ಮ ತಿಳಿಸುತ್ತಾರೆ.

ತೋಟದಲ್ಲಿ ಬೆಳೆಯುವ ಸೀಬೆ ಹಣ್ಣುಗಳು ಕೇರಳ ಸೇರಿದಂತೆ ವಿವಿಧ ಪ್ರದೇಶಗಳಿಗೆ ಹಾಗೂ ದ್ರಾಕ್ಷಿ ಬಾಂಗ್ಲಾದೇಶ, ಒಡಿಶಾ, ನೇಪಾಳ, ಕೇರಳ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತದೆ. ಉತ್ತಮ ಬೆಳೆಗಳನ್ನು ಬೆಂಗಳೂರಿನ ರಿಲಯನ್ಸ್, ಬಿಗ್‌ಬಜಾರ್ ನಂತಹ ಮಾರುಕಟ್ಟೆಗಳಿಗೆ ಮಾರಾಟ ಮಾಡುತ್ತೇವೆ. ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ಕೃಷಿ ಬೆಳೆಗಳಿಂದ ವಾರ್ಷಿಕವಾಗಿ ಖರ್ಚು, ಕೂಲಿ ಹೋಗಿ ಕನಿಷ್ಠ ₹25 ಲಕ್ಷ ಲಾಭ ಸಿಗುತ್ತದೆ ಎಂದು ಅವರು ಪ್ರಜಾವಾಣಿಗೆ ತಿಳಿಸಿದರು.

ಬಾಲ್ಯದಿಂದಲೂ ಕೃಷಿಯನ್ನೇ ನಂಬಿದ್ದೇನೆ. ಕೆಲ ಬಾರಿ ಬೆಳೆ ನಷ್ಟ ಆಗುತ್ತದೆ. ಆದರೆ ಕೆಲ ಬಾರಿ ನಿರೀಕ್ಷಿಸಿದಷ್ಟು ಲಾಭ ಬಂದಿದೆ. ಸಾವಯವ ರಸಗೊಬ್ಬರ, ವೈಜ್ಞಾನಿಕ ಸಮಗ್ರ ಕೃಷಿ ಪದ್ಧತಿಗಳಿಂದ ಉತ್ತಮವಾಗಿ ಬೆಳೆ ಬೆಳೆಯಬಹುದು. ಆದರೆ ಕೆಲ ರೈತರು ಹೊಲ, ಗದ್ದೆ ಇದ್ದರೂ ಬೆಳೆ ಬೆಳೆಯುವುದಿಲ್ಲ. ತಂತ್ರಜ್ಞಾನ ಅಳವಡಿಕೆಯಿಂದ ರೈತರಿಗೆ ಹೆಚ್ಚಿನ ಲಾಭ ಬರಲಿದೆ ಎಂದು ನಾರಾಯಣಮ್ಮ ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡರು.

ನಾಟಿ ತಳಿಯ ಹಸುಗಳಿಗೆ ಮೇವು ಹಾಕಿರುವುದು.
ನಾಟಿ ತಳಿಯ ಹಸುಗಳಿಗೆ ಮೇವು ಹಾಕಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT