ಗುರುವಾರ , ಮೇ 19, 2022
21 °C

ಭಾಗ್ಯನಗರಕ್ಕೆ ಆದೇಶ ಕರವೇ ಸಂಭ್ರಮಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ‘ಬಾಗೇಪಲ್ಲಿ’ಯನ್ನು ‘ಭಾಗ್ಯನಗರ’ ಎಂದು ಮರುನಾಮಕರಣ ಮಾಡಲು ಸರ್ಕಾರ ಜಿಲ್ಲಾಧಿಕಾರಿಯವರಿಗೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಕರ್ನಾಟಕ ರಕ್ಷಣಾವೇದಿಕೆಯ ತಾಲ್ಲೂಕು ಅಧ್ಯಕ್ಷ ಬಿ.ಎ.ಬಾಬಾಜಾನ್ ನೇತೃತ್ವದಲ್ಲಿ ಕಾರ್ಯಕರ್ತರು ಬಸ್ ನಿಲ್ದಾಣದ ಮುಂಭಾಗದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಎ.ಬಾಬಾಜಾನ್ ಮಾತನಾಡಿ, ‘ಅನೇಕ ಪ್ರಗತಿಪರ, ದಲಿತ, ಕನ್ನಡ ಪರ ಸಂಘಟನೆಗಳು ಹೋರಾಟಗಳನ್ನು ಮಾಡಿ, ಬಾಗೇಪಲ್ಲಿ ಎಂಬ ತೆಲುಗು ಪದವನ್ನು ತೆಗೆದು ‘ಭಾಗ್ಯನಗರ’ ಎಂದು ಮರುನಾಮಕರಣ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿ ಹೋರಾಟ ಮಾಡಿದ್ದಾರೆ’ ಎಂದು ತಿಳಿಸಿದರು.

‘ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಬಾಗೇಪಲ್ಲಿಯನ್ನು ಭಾಗ್ಯನಗರ ಮಾಡುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದರು. ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಎಸ್. ಗುರುಮೂರ್ತಿರವರು ಜ.27ರಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯವರಿಗೆ ಪತ್ರವನ್ನು ಕಳಿಸಿದ್ದು, ಬಾಗೇಪಲ್ಲಿ ಎಂಬ ಪಟ್ಟಣದ ಹೆಸರನ್ನು ‘ಭಾಗ್ಯನಗರ’ ಎಂದು ಬದಲಾವಣೆ ಮಾಡುವ ಬಗ್ಗೆ ಸೂಚನೆ ನೀಡಿರುವುದು ಸ್ವಾಗತಾರ್ಹವಾಗಿದೆ’ ಎಂದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಸುಧಾಕರ್, ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅಭಿನಂದನೆ ಸಲ್ಲಿಸಿದರು. ಕನ್ನಡಸೇನೆ ತಾಲ್ಲೂಕು ಅಧ್ಯಕ್ಷ ರವೀಂದ್ರ, ರಂಗನಾಥ, ಷೇಕ್ ಹಿದಾಯಿತ್ತುಲ್ಲಾ, ಶಾಂತಿ, ವೆಂಕಟೇಶ್, ಸಲೀಂ ಮಂಜುನಾಥ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು