ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ಕೊಡುವೆ: ಡಾ.ಕೆ.ಸುಧಾಕರ್

ತಾಲ್ಲೂಕಿನ ಮಂಡಿಕಲ್ ಹೋಬಳಿ ವ್ಯಾಪ್ತಿಯಲ್ಲಿ ಬಿಜೆಪಿ ಪ್ರಚಾರ
Last Updated 28 ನವೆಂಬರ್ 2019, 10:04 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ರಾಜಕೀಯವಾಗಿ ದಿವಾಳಿಯಾಗಿವೆ. ಬಡವರ ಆರೋಗ್ಯ ಚೆನ್ನಾಗಿರಲಿ ಎಂದು ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡಿಸಿದ್ದೇನೆ. ಆಸ್ಪತ್ರೆಗಾಗಿ ಈಗಾಗಲೇ ₨700 ಕೋಟಿ ಮೊತ್ತದ ಅನುದಾನ ತಂದಿದ್ದೇನೆ. ಕಳೆದ 70 ವರ್ಷದಲ್ಲಿ ಯಾರೂ ಮಾಡದ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ತಿಳಿಸಿದರು.

ತಾಲ್ಲೂಕಿನ ಮಂಡಿಕಲ್ ಹೋಬಳಿಯಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿ, ‘ಜೆಡಿಎಸ್-ಕಾಂಗ್ರೆಸ್ ಅನೈತಿಕವಾಗಿ ಸರ್ಕಾರ ರಚಿಸಿ 14 ತಿಂಗಳು ಅಧಿಕಾರ ನಡೆಸಿ ನಮ್ಮ ಭಾಗದ ಜನರಿಗೆ ಅನ್ಯಾಯ ಮಾಡಿದರು. ಚಿಕ್ಕಬಳ್ಳಾಪುರ ಜನರಿಗೆ ಸುಣ್ಣ, ಕನಕಪುರ ಜನರಿಗೆ ಬೆಣ್ಣೆ ಇಟ್ಟರು. ಈಗ ವೈದ್ಯಕೀಯ ಕಾಲೇಜು ನಿಮಗೆ ಎಲ್ಲಿಗೆ ಬೇಕು? ನೀವೇ ನಿರ್ಧಾರ ಮಾಡಿ. ನಿಮಗೆ ದೇವನಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಬೇಕಾ? ಶಿಡ್ಲಘಟ್ಟ ಜೆಡಿಎಸ್ ಅಭ್ಯರ್ಥಿ ಬೇಕಾ? ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಬೇಕಾ ಎನ್ನುವುದನ್ನು ನೀವೇ ನಿರ್ಧರಿಸಿ ಎಂದರು.

ಅನಿವಾರ್ಯವಾಗಿ ನಾನು ರಾಜೀನಾಮೆ ನೀಡಿದ್ದೇನೆ. ಇದು ನನ್ನ ಆಸೆಗಾಗಿ ಬಂದ ಚುನಾವಣೆ ಅಲ್ಲ, ಅಭಿವೃದ್ಧಿಗೆ ಬಂದ ಚುನಾವಣೆ. ನೀವು ಬೇರೆ ಊರಿನವರಿಗೆ ಮತ ಕೊಟ್ಟರೆ ನಿಮ್ಮ ಭವಿಷ್ಯ ಮಂಕಾಗಲಿದೆ. ನಿಮ್ಮ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಎಂದು ಮತಯಾಚಸಿದರು.

ಮೆಡಿಕಲ್ ಕಾಲೇಜು ಮಾತ್ರವಲ್ಲ ಮುಂದಿನ ದಿನಗಳಲ್ಲಿ ಕೈಗಾರಿಕೆಗಳನ್ನು ತರಲಿದ್ದೇನೆ. ಇಲ್ಲಿನ ಯುವಕರಿಗೆ ಉದ್ಯೋಗ ಕೊಡುತ್ತೇನೆ. ಶಿಕ್ಷಣ, ಆರೋಗ್ಯ ಮಹಿಳಾ ಸಬಲೀಕರಣಕ್ಕೆ ಒತ್ತು ಕೊಟ್ಟಿದ್ದೇನೆ. ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮವಹಿಸುತ್ತೇನೆ ಎಂದು ಹೇಳಿದರು.

ಕ್ಷೇತ್ರದಲ್ಲಿ ಕಳೆದ ಆರು ವರ್ಷದಲ್ಲಿ ಪ್ರಗತಿ ಕಾರ್ಯಗಳು ಆಗಿವೆ. ಅದು ಮುಂದುವರಿಯಬೇಕು. ಈ ಕ್ಷೇತ್ರಕ್ಕೆ ಹಲವಾರು ಶಾಸಕರಾಗಿ ಬಂದು ಹೋಗಿದ್ದಾರೆ. ಆದರೆ ನೀರಾವರಿಗೆ ಯಾವುದೇ ಕೆಲಸ ಮಾಡಿಲ್ಲ. ಆದರೆ ನಾನು ಆಯ್ಕೆಯಾದ ಮೇಲೆ ಎಚ್.ಎನ್. ವ್ಯಾಲಿ ಮೂಲಕ ನೀರು ತಂದಿದ್ದೇನೆ. ಎತ್ತಿನಹೊಳೆ ಯೋಜನೆ ಮೂಲಕ ನಮ್ಮ ಜಿಲ್ಲೆಗೆ ನೀರು ಬರಲಿದೆ. ಈ ಯೋಜನೆ ತರಲು ಕಾಂಗ್ರೆಸ್‌ನವರಿಂದ ಸಾಧ್ಯವಿಲ್ಲ. ನಾನು ನಿಮಗೆ ಮಾತು ಕೊಡುತ್ತೇನೆ. ನಿಮ್ಮ ಮಕ್ಕಳ ಭವಿಷ್ಯ ರೂಪಿಸುವ ಕಾರ್ಯ ಮಾಡುತ್ತೇನೆ ಎಂದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಪ್ರಧಾನಿ ನರೇಂಧ್ರ ಮೋದಿ ನೇತೃತ್ವದಲ್ಲಿ ದೇಶ, ವಿದೇಶದಲ್ಲಿ ನಮ್ಮ ದೇಶದ ಹೆಸರು ಜನಪ್ರಿಯವಾಗಿದೆ ಎಂದರು.

ಮಂಡಿಕಲ್ ಹೋಬಳಿಗೆ ಕಳೆದ ಆರು ವರ್ಷದಲ್ಲಿ ₨20 ಕೋಟಿ ಗಿಂತ ಹೆಚ್ಚಿನ ಅನುದಾನ ಕೊಟ್ಟಿದ್ದೇನೆ. ಮಂಡಿಕಲ್‌ನಿಂದ ಶೆಟ್ಟಿಗೆರೆ ರಸ್ತೆಗೆ ₨5 ಕೋಟಿ, ಶಾದಿ ಮಹಲ್‌ಗೆ ₨50 ಲಕ್ಷ ನೀಡಿದ್ದೇನೆ. ₨10 ಲಕ್ಷ ಮೊತ್ತದ ಕುಡಿಯುವ ನೀರಿನ ಘಟಕ, ಜೀಗಾನಹಳ್ಳಿ ಕ್ರಾಸ್‌ನಿಂದ ಮಂಡಿಕಲ್ ರಸ್ತೆಗೆ ₨5 ಕೋಟಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಯೋಗಾಲಯಕ್ಕೆ ₨80 ಲಕ್ಷದ ಅನುದಾನ ನೀಡುವ ಮೂಲಕ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ ಎಂದು ತಿಳಿಸಿದರು.

ಮಾದರಿ ಜಿಲ್ಲೆ ಮಾಡುತ್ತೇನೆ
‘ಚಿಕ್ಕಬಳ್ಳಾಪುರ ಜಿಲ್ಲೆಯನ್ನು ದೇಶಕ್ಕೆ ಮಾದರಿ ಮಾಡುವ ಗುರಿ ಹೊಂದಿದ್ದು, ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ. ನಾನು ಕುರಾನ್, ಬೈಬಲ್ ಹಾಗೂ ಭಗವದ್ಗೀತೆ ಮೂರನ್ನು ನಂಬುತ್ತೇನೆ. ಆದರೆ, ಇದಕ್ಕಿಂತ ಹೆಚ್ಚಾಗಿ ಸಂವಿಧಾನವನ್ನು ನಂಬುತ್ತೇನೆ. ಇದರಿಂದ ಸರ್ವ ಧರ್ಮಗಳನ್ನು ಒಂದಾಗಿ ಕಾಣುವ ಸಂವಿಧಾನದ ಆಶಯವನ್ನು ಜಿಲ್ಲೆಯಲ್ಲಿ ಈಡೇರಿಸುವುದು ನನ್ನ ಗುರಿ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೇಶವರೆಡ್ಡಿ, ಮುಖಂಡರಾದ ರಾಮಸ್ವಾಮಿ, ವೆಂಕಟೇಶ್, ವಿಜಯ್‌ ಕುಮಾರ್, ರವಿ, ಪಾಪಣ್ಣ, ಗೋವಿಂದಸ್ವಾಮಿ, ರಜತಾದ್ರಿ, ಕೃಷ್ಣಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT