ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ‘ಕೈ’ಗಾಯಕ್ಕೆ ಬಿಜೆಪಿ ‘ಸರ್ಜರಿ’!

ಚಿಕ್ಕಬಳ್ಳಾಪುರದ ಉಪ ಚುನಾವಣೆಯ ಬಳಿಕ ಗೌರಿಬಿದನೂರು ಕ್ಷೇತ್ರದಲ್ಲಿ ಬದಲಾಗುತ್ತಿರುವ ರಾಜಕೀಯ ಗಾಳಿ, ಬಿಜೆಪಿ ಪಾಳೆಯದತ್ತ ಮುಖ ಮಾಡುತ್ತಿರುವ ಅತೃಪ್ತ ಕಾಂಗ್ರೆಸ್‌ ಮುಖಂಡರು
Last Updated 25 ಜನವರಿ 2020, 19:30 IST
ಅಕ್ಷರ ಗಾತ್ರ

ಗೌರಿಬಿದನೂರು: ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ಕಾಂಗ್ರೆಸ್‌ನ ಭದ್ರಕೋಟೆಯಲ್ಲಿ ದಾಖಲೆಯ ಗೆಲುವು ಸಾಧಿಸುವ ಮೂಲಕ ಕೇಸರಿ ಪಾಳೆಯದ ಖಾತೆ ತೆರೆಯುತ್ತಿದ್ದಂತೆ, ಹೊಸ ಖಾತೆ ಪುಸ್ತಕದ ಒಳಗಿನ ಕೇಸರಿಯ ಘಮ ಇದೀಗ ನೆರೆಯ ಗೌರಿಬಿದನೂರು ಕ್ಷೇತ್ರದತ್ತಲೂ ಸೂಸಲು ಆರಂಭಿಸಿದೆ.

ರಾಜಕೀಯ ಅಪಾಯಕ್ಕೆ ಎದೆ ಒಡ್ಡಿ ಗೆದ್ದು ಬಂದ ಸುಧಾಕರ್ ಅವರ ಅಗಾಧ ಆತ್ಮವಿಶ್ವಾಸ ಇದೀಗ ವೈರಿ ಪಾಳೆಯಗಳಲ್ಲಿ ಸದ್ದಿಲ್ಲದೆ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಅದರ ಪರಿಣಾಮ ಎನ್ನುವಂತೆ ಕ್ಷೇತ್ರದ ಕಾಂಗ್ರೆಸ್‌ ಪಾಳೆಯದಲ್ಲಿ ಬೇಗುದಿ ನಡುವೆ ದಿನದೂಡುತ್ತಿದ್ದ ಮುಖಂಡರೆಲ್ಲ ಇದೀಗ ಚಿಕ್ಕಬಳ್ಳಾಪುರದ ‘ಡಾಕ್ಟರ್’ ಬಳಿ ಹೊಸ ಔಷಧಿ ಹುಡುಕಿಕೊಂಡು ಹೊರಟಿದ್ದಾರೆ ಎನ್ನುವ ಮಾತುಗಳು ಸ್ಥಳೀಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಕ್ಷೇತ್ರದ ಶಾಸಕ ಎನ್‌.ಎಚ್‌.ಶಿವಶಂಕರರೆಡ್ಡಿ ಮತ್ತು ಡಾ.ಕೆ.ಸುಧಾಕರ್ ಅವರ ನಡುವಿನ ರಾಜಕೀಯ ದ್ವೇಷ ಕಳೆದ ಉಪ ಚುನಾವಣೆ ಹೊತ್ತಿಗೆ ಬೀದಿಗೆ ಬಂದು ನಿಂತದ್ದು ಈಗ ಇತಿಹಾಸ. ಉಭಯ ನಾಯಕರ ರಾಜಕೀಯ ಹಿನ್ನೆಲೆ, ತಂತ್ರಗಾರಿಕೆ, ಪ್ರಭಾವ ಅಳೆದು ತೂಗಿದ ನಾಯಕರು ಇದೀಗ ಹೊಸ ಭರವಸೆಯೊಂದಿಗೆ ಕಾಂಗ್ರೆಸ್‌ಗೆ ‘ಕೈ’ಕೊಟ್ಟು, ಕಮಲ ಪಾಳೆಯದವರನ್ನು ಆಲಂಗಿಸಲು ಹೊರಟಿದ್ದಾರೆ. ಇದೆಲ್ಲದರ ಪರಿಣಾಮವಾಗಿ ಇದೀಗ ತಾಲ್ಲೂಕಿನ ರಾಜಕೀಯ ಶಕ್ತಿ ಕೇಂದ್ರವಾಗಿರುವ ‘ನಾಗಸಂದ್ರ’ದಲ್ಲಿ ಸುಧಾಕರ್‌ ಅವರ ಸ್ವಾಗತಕ್ಕೆ ಭರದ ಸಿದ್ಧತೆ ನಡೆದಿದೆ.

ಉಪ ಚುನಾವಣೆಯ ಪ್ರಚಾರದ ವೇಳೆ ಸುಧಾಕರ್ ಅವರ ಸ್ವಗ್ರಾಮ ಪೇರೇಸಂದ್ರದಲ್ಲಿ ಶಿವಶಂಕರರೆಡ್ಡಿ ಅವರು ಪ್ರಚಾರಕ್ಕಿಂತಲೂ ಅನರ್ಹರಾಗಿದ್ದ ಶಾಸಕರ ಬಗ್ಗೆ ಅಪಪ್ರಚಾರ ಮಾಡಿ ತೊಡೆ ತಟ್ಟಿ ಬಂದಿದ್ದರು. ಇದರಿಂದ ಕೆರಳಿದ್ದ ಸುಧಾಕರ್ ಅವರು ಅದಕ್ಕೆ ಪ್ರತ್ಯುತ್ತರವಾಗಿ ಶಿವಶಂಕರರೆಡ್ಡಿ ಅವರ ಹುಟ್ಟೂರಿಗೆ ಬಂದು ಅವರು ಮಾಡಿರುವ ಅಕ್ರಮಗಳು ಹಾಗೂ ರಾಜಕೀಯ ಕುತಂತ್ರಗಳನ್ನು ಬಯಲಿಗೆಳೆಯುತ್ತೇನೆ ಎಂದು ತಿಳಿಸಿದ್ದರು.

ಆಡಿದ ಮಾತಿನಂತೆ ಸುಧಾಕರ್ ಅವರು ಇದೀಗ ಗಣರಾಜ್ಯೋತ್ಸವ ಕಾರ್ಯಕ್ರಮದ ನೆಪದಲ್ಲಿ ಭಾನುವಾರ (ಜ.26) ತಮ್ಮ ರಾಜಕೀಯ ಶತ್ರುವಿನ ಹುಟ್ಟೂರಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಸ್ಥಳೀಯ ಬಿಜೆಪಿ ಮುಖಂಡರು ಹುಮ್ಮಸ್ಸಿನಲ್ಲಿ ಕಾಯುತ್ತಿದ್ದಾರೆ. ನಾಗಸಂದ್ರದ ಜಗುಲಿಯಲ್ಲಿ ನಿಂತು ಸುಧಾಕರ್ ಅವರಾಡಬಹುದಾದ ಮಾತುಗಳ ಬಗ್ಗೆ ಸದ್ಯ ಕುತೂಹಲ ಮನೆ ಮಾಡಿದೆ.

ಜಿಲ್ಲಾ ಕೇಂದ್ರದಲ್ಲಿ ಕಮಲದ ಕಂಪು ಹರಡಿಸಿರುವ ಸುಧಾಕರ್ ಅವರ ಬಣ ಸೇರಲು ಸ್ಥಳೀಯ ಕಾಂಗ್ರೆಸ್‌ ಪಾಳೆಯದ ಅತೃಪ್ತ ನಾಯಕರು ತುದಿಗಾಲಲ್ಲಿ ನಿಂತಿದ್ದಾರೆ. ಇತ್ತೀಚೆಗೆ ನಗರದಲ್ಲಿ ಆಯೋಜಿಸಿದ್ದ ಸಿಎಎ ಪರ ಪ್ರಚಾರಕ್ಕೆ ಆಗಮಿಸಿದ್ದ ಸುಧಾಕರ್ ಅವರನ್ನು ಭೇಟಿ ಮಾಡಿ ಶುಭ ಕೋರಲು ಮುಗಿಬಿದ್ದ ಕೈ ಮುಖಂಡರ ನಡವಳಿಕೆ ಸ್ಥಳೀಯ ರಾಜಕೀಯ ವಿದ್ಯಮಾನಗಳ ಬಗ್ಗೆ ಗಂಭೀರವಾಗಿ ಚರ್ಚೆಗೆ ಎಡೆ ಮಾಡಿತ್ತು.

ಈ ಹಿಂದೆ ತಾಲ್ಲೂಕಿನ ಕಾಂಗ್ರೆಸ್ ಪಾಳೆಯ ದಶಕಗಳಿಂದ ಪ್ರಬಲ ನಾಯಕರಾಗಿದ್ದ ಆರ್.ಅಶೋಕ್ ಕುಮಾರ್, ಬಿ.ಜಿ.ವೇಣುಗೋಪಾಲರೆಡ್ಡಿ, ಜಿ.ಕೆ.ಸತೀಶ್ ಕುಮಾರ್, ಜೆ.ಕಾಂತರಾಜು, ಅಬ್ದುಲ್ಲಾ, ಎಂ.ನರಸಿಂಹಮೂರ್ತಿ, ಮಲ್ಲಸಂದ್ರ ಗಂಗಾಧರ್, ಡಿ.ನರಸಿಂಹಮೂರ್ತಿ ಸೇರಿದಂತೆ ಅನೇಕ ನಾಯಕರು, ಸಮಾಜ ಸೇವಕ ಕೆ.ಎಚ್‌.ಪುಟ್ಟಸ್ವಾಮಿ ಗೌಡ ಅವರ ಬಣದೊಂದಿಗೆ ಗುರುತಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಟಾಂಗ್‌ ಕೊಟ್ಟಿದ್ದರು. ಇವರೆಲ್ಲ ಇದೀಗ ಸುಧಾಕರ್ ಅವರ ಜತೆ ಕೈಜೋಡಿಸಲು ಮುಂದಾಗಿದ್ದಾರೆ ಎನ್ನುವುದು ಸದ್ಯದ ರಾಜಕೀಯ ವದಂತಿ.

ಶಿವಶಂಕರರೆಡ್ಡಿ ಅವರಿಗೆ ರಾಜಕೀಯ ಬಲ ತುಂಬುವ ಮುಖಂಡರನ್ನು ತಮ್ಮತ್ತ ಸೆಳೆದುಕೊಂಡು ಅವರನ್ನು ಸ್ಥಳೀಯ ರಾಜಕೀಯದಲ್ಲಿ ಅಸಹಾಯಕರನ್ನಾಗಿ ಮಾಡಿ ರಾಜಕೀಯ ಹಗೆ ತೀರಿಸಿಕೊಳ್ಳಬೇಕು ಎನ್ನುವುದು ಸುಧಾಕರ್ ಅವರ ಆದ್ಯತೆ ಗುರಿಯಾಗಿದೆ ಎನ್ನುತ್ತಾರೆ ಸ್ಥಳೀಯ ರಾಜಕಾರಣ ಬಲ್ಲವರು. ಆದರೆ ಸುದೀರ್ಘ ರಾಜಕೀಯ ಅನುಭವ ಉಳ್ಳ ಶಿವಶಂಕರರೆಡ್ಡಿ ಅವರ ಬಲ ಕುಂದಿಸುವುದು ಸುಲಭದ ಮಾತಲ್ಲ ಎನ್ನುವ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಉಭಯ ನಾಯಕರ ರಾಜಕೀಯ ‘ಪ್ರತಿಷ್ಠೆ’ ಮುಂದೆ ಯಾವ ಸ್ವರೂಪ ಪಡೆಯುತ್ತದೆ ಎನ್ನುವುದು ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟು ಹಾಕುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT