ಬುಧವಾರ, ಜುಲೈ 6, 2022
22 °C
ಚಿಕ್ಕಬಳ್ಳಾಪುರ ನಗರಸಭೆ: ₹ 1.5 ಕೋಟಿ ಉಳಿತಾಯ ಆಯವ್ಯಯ ಮಂಡನೆ

ಬಜೆಟ್ ಸಭೆಯಲ್ಲಿ ‘ಖಾತೆ’ ಗದ್ದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಇಲ್ಲಿನ ನಗರಸಭೆಯಲ್ಲಿ ಮಂಗಳವಾರ ನಡೆದ ಬಜೆಟ್ ಮಂಡನೆ ಸಭೆಯು ‘ಖಾತೆ’ ಗದ್ದಲದಲ್ಲಿ ಮುಳುಗೆದ್ದಿತ್ತು. 

ನಗರಸಭೆ ಅಧ್ಯಕ್ಷ ಡಿ.ಎಸ್. ಆನಂದರೆಡ್ಡಿ ಬಾಬು ಬಜೆಟ್ ಮಂಡಿಸಿದರು. ಬಜೆಟ್‌ನ ಚರ್ಚೆ ನಡೆಯುತ್ತಿದ್ದ ವೇಳೆ ಸದಸ್ಯ ಗಜೇಂದ್ರ, ನರಸಿಂಹಮೂರ್ತಿ ಮತ್ತಿತರರು ನಗರಸಭೆಯಲ್ಲಿ ಖಾತೆಗಳನ್ನು ಮಾಡಿಕೊಡುತ್ತಿಲ್ಲ. ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಆಗುತ್ತಿದೆ. ಖಾತೆ ಮಾಡಿದರೆ ನಗರಸಭೆಗೆ ಆದಾಯ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಗ ಪೌರಾಯುಕ್ತ ಮಹಾಂತೇಶ್ ಮತ್ತು ಆನಂದರೆಡ್ಡಿ ಸದಸ್ಯರನ್ನು ಸಮಾಧಾನಪಡಿಸಿ, ‘ಖಾತೆ ಅದಾಲತ್’ ನಡೆಯುತ್ತಿದೆ. ಇ–ಖಾತೆಗಳನ್ನು ನೀಡುತ್ತಿದ್ದೇವೆ. ನಗರ ಯೋಜನಾ‍ ಪ್ರಾಧಿಕಾರದಿಂದ ಅನುಮೋದನೆ ಪಡೆಯದೆ ಅಕ್ರಮವಾಗಿ ನಿರ್ಮಾಣವಾಗಿರುವ ಮನೆಗಳಿಗೆ ಖಾತೆ ಮಾಡಿಕೊಡಲು ಸಾಧ್ಯವಿಲ್ಲ’ ಎಂದು ಹೇಳಿದರು. 

‘ಈ ವಿಚಾರವಾಗಿ ನಾನು ಎರಡು ಮೂರು ಬಾರಿ ಮೇಲಧಿಕಾರಿಗಳನ್ನು ಭೇಟಿ ಮಾಡಿದ್ದೇನೆ. ನಮಗೂ ಜನರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವ ಮನೋಭಾವವಿದೆ. ಖಾತೆ ಮಾಡಲು ನಾನು ಅಡ್ಡಗಾಲು ಹಾಕಿಲ್ಲ. ಖಾತೆ ವಿಚಾರವನ್ನು ಸಚಿವರ ಗಮನಕ್ಕೆ ತಂದಿದ್ದೇನೆ. ಸರ್ಕಾರ ಆದೇಶದ ನಂತರ ಖಾತೆ ಮಾಡಿಕೊಡಲಾಗುವುದು. ಇದು ಬಜೆಟ್ ಸಭೆ. ಈ ಅರಿವು ಸದಸ್ಯರಿಗೆ ಇರಬೇಕು’ ಎಂದು ಆನಂದರೆಡ್ಡಿ ಹೇಳಿದರು. ‌

ಸಭೆಯಲ್ಲಿ ಬಹಳಷ್ಟು ಸಮಯ ಖಾತೆ ವಿಚಾರ ಸದ್ದು ಮಾಡಿತು. ‘ಇದು ಬಜೆಟ್ ಸಭೆ. ಇಲ್ಲಿ ಬಜೆಟ್‌ಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿ’ ಎಂದು ಅಧ್ಯಕ್ಷರು
ಹೇಳಿದರು. 

ಐಡಿಎಸ್‌ಎಂಟಿ ಬಡಾವಣೆಯಲ್ಲಿ ಖಾತೆ ವಿಚಾರವಾಗಿ ಈ ಹಿಂದಿನ
ಅಧಿಕಾರಿಗಳ ತಪ್ಪಿನ ಕಾರಣದಿಂದ ಸಮಸ್ಯೆಗಳು ಆಗಿವೆ. ಪರಿಹರಿಸಿ ಎಂದು ಸದಸ್ಯರು ಆಗ್ರಹಿಸಿದರು. ಆಗ ಮಧ್ಯಪ್ರವೇಶಿಸಿದ ಪೌರಾಯುಕ್ತ ಮಹಾಂತೇಶ್, ‘ಎಂಟತ್ತು ಸಮಸ್ಯೆಗಳಿವೆ’ ಎಂದರು. 

‘ನಗರದಲ್ಲಿ ಬಹಳಷ್ಟು ಕಟ್ಟಡಗಳ ಮಾಲೀಕರು ತೆರಿಗೆ ಕಟ್ಟುತ್ತಿಲ್ಲ. ಇದರಿಂದ ಕಂದಾಯ ಕಡಿಮೆ ಆಗುತ್ತಿದೆ. ಈ ಬಗ್ಗೆ ಕ್ರಮವಹಿಸಬೇಕು’ ಎಂದು ಸದಸ್ಯರು ಆಗ್ರಹಿಸಿದರು.

‘ಈ ಬಜೆಟ್‌ನಲ್ಲಿ ಮಹಿಳೆಯರಿಗೆ ಯಾವುದೇ ಕಾರ್ಯಕ್ರಮವಿಲ್ಲ’ ಎಂದರು ಮಹಿಳಾ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಆಗ, ಆನಂದರೆಡ್ಡಿ, ‘ಮಹಿಳೆಯರಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಹಣ ತೆಗೆದಿರಿಸಲಾಗುವುದು’ ಎಂದರು. 

ಉಳಿತಾಯ ಬಜೆಟ್: ಹೀಗೆ ಬೇರೆ ಬೇರೆ ವಿಷಯಗಳ ಚರ್ಚೆಗಳ ನಡುವೆಯೇ ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು ಮಂಡಿಸಿದ ಬಜೆಟ್‌ ವಿಷಯದ ಕುರಿತು ಚರ್ಚೆಗಳು ನಡೆದವು. 

2022–23ನೇ ಸಾಲಿನಲ್ಲಿ ರಾಜಸ್ವ ಸ್ವೀಕೃತಿ, ಬಂಡವಾಳ ಸ್ವೀಕೃತಿ, ಅಸಾಧಾರಣ ಸ್ವೀಕೃತಿ ಯಿಂದ ನಗರಸಭೆಗೆ ಒಟ್ಟು ₹ 56,51,78,400 ಆದಾಯ ಬರಲಿದೆ. ಇದರಲ್ಲಿ ₹ 55,46,07,000 ವಿವಿಧ ಯೋಜನೆಗಳಿಗೆ ವೆಚ್ಚ ವಾಗಲಿದೆ. ₹ 1,05,71,400 ಉಳಿತಾಯ ವಾಗಲಿದೆ ಎಂದು ಅಧ್ಯಕ್ಷರು
ತಿಳಿಸಿದರು. 

ಸರ್ಕಾರದ ವಿವಿಧ ಯೋಜನೆಯಡಿ ₹ 12,04 ಕೋಟಿ ಅನುದಾನವನ್ನು ನಗರಸಭೆಯು ನಿರೀಕ್ಷಿಸಿದೆ ಎಂದು ಹೇಳಿದರು.

ನಗರಸಭೆ ಉಪಾಧ್ಯಕ್ಷ ವೀಣಾ ರಾಮು ವೇದಿಕೆಯಲ್ಲಿ ಇದ್ದರು.  ಸದಸ್ಯರಾದ ಕಣಿತಹಳ್ಳಿ ವೆಂಕಟೇಶ್, ಅಂಬರೀಷ್, ನರಸಿಂಹಮೂರ್ತಿ, ಗ್ಯಾಸ್ ನಾಗರಾಜ್, ಗಜೇಂದ್ರ, ನರಸಿಂಹಮೂರ್ತಿ, ಮಟಮಪ್ಪ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು