ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭೆಗೆ ಅಧಿಕಾರಿಗಳ ಗೈರು: ಜನಪ್ರತಿನಿಧಿಗಳ ಆಕ್ರೋಶ

ಸಾಮಾನ್ಯ ಸಭೆಗೆ ಹೈಕೋರ್ಟ್‌ ತಡೆಯಾಜ್ಞೆ
Last Updated 9 ಸೆಪ್ಟೆಂಬರ್ 2022, 3:03 IST
ಅಕ್ಷರ ಗಾತ್ರ

ಚಿಂತಾಮಣಿ: ಬುಧವಾರ ಕರೆಯಲಾಗಿದ್ದ ನಗರಸಭೆ ಸಾಮಾನ್ಯ ಸಭೆಗೆ ಅಧಿಕಾರಿಗಳ ಗೈರು ಹಾಜರಿ ಖಂಡಿಸಿ ಅಧ್ಯಕ್ಷೆ, ಉಪಾಧ್ಯಕ್ಷೆ ಸೇರಿದಂತೆ ಆಡಳಿತಪಕ್ಷದ ಸದಸ್ಯರು ಧಿಕ್ಕಾರ ಕೂಗಿ ಸಭೆ ಬಹಿಷ್ಕರಿಸಿದರು. ಆದರೆ,ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಸಭೆ ರದ್ದುಗೊಳಿಸಲಾಯಿತು ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದು ಗೊಂದಲ ಉಂಟು ಮಾಡಿತ್ತು.

ನಗರಸಭೆ ಅಧ್ಯಕ್ಷೆ ರೇಖಾಉಮೇಶ್ ಅಧ್ಯಕ್ಷತೆಯಲ್ಲಿ ಬುಧವಾರ ಸಾಮಾನ್ಯ ಸಭೆ ಕರೆಯಲಾಗಿತ್ತು. ಅಧ್ಯಕ್ಷೆ, ಉಪಾಧ್ಯಕ್ಷೆ ಸೇರಿದಂತೆ ಆಡಳಿತಾರೂಡ ಸದಸ್ಯರು ಹಾಜರಾಗಿದ್ದರು. ಆದರೆ ಆಯುಕ್ತರನ್ನು ಹೊರತುಪಡಿಸಿ ಅಧಿಕಾರಿಗಳು ಗೈರಾಗಿದ್ದು ಸದಸ್ಯರ ಆಕ್ರೋಶ ಕಾರಣವಾಯಿತು.

ಸಾಮಾನ್ಯ ಸಭೆಯ ನೀಡಿರುವ ನೋಟೀಸ್ ಕ್ರಮಬದ್ಧತೆ ಪ್ರಶ್ನಿಸಿ ಸದಸ್ಯ ಡಿ.ಎನ್.ಶಂಕರ ಹೈಕೋರ್ಟ್ ನಲ್ಲಿ ರಿಟ್ ಸಲ್ಲಿಸಿದ್ದರು. ನ್ಯಾಯಾಲಯ ತಾತ್ಕಾಲಿಕವಾಗಿ ತಡೆಯಾಜ್ಞೆ ನೀಡಿದೆ.

‘ಅಧಿಕಾರಿಗಳ ಗೈರು ಜನಪ್ರತಿನಿಧಿಗಳಿಗೆ ಮಾಡಿದ ಅಪಮಾನ. ಸಭೆಗೆ ಬರದಂತೆ ತಡೆದವರು ಯಾರು’ ಎಂದು ಸದಸ್ಯ ಶಫೀಕ್, ಅಕ್ಷಯ್ ಕುಮಾರ್, ನಾಗರಾಜ್ ಮತ್ತಿತರರು ಪ್ರಶ್ನಿಸಿದರು.

‘ನ್ಯಾಯಾಲಯದ ತಡೆಯಾಜ್ಞೆ ಇದ್ದರೆ ಸಭೆಗೆ ಹಾಜರಾಗಿ ತಿಳಿಸಬೇಕಾಗಿತ್ತು. ಅಧ್ಯಕ್ಷರು ಮತ್ತು ಸದಸ್ಯರು ಸಭೆಯಲ್ಲಿ ಕುಳಿತಿದ್ದರೂ ಮಾಹಿತಿ ನೀಡದೆ ಅಧಿಕಾರಿಗಳು ಗೈರಾಗಿರುವುದು ಎಲ್ಲ ಸದಸ್ಯರಿಗೆ ಮಾಡಿದ ಅವಮಾನ. ಇದರಲ್ಲಿ ಯಾರದೋ ಕೈವಾಡ ಇದೆ. ಅಧಿಕಾರಿಗಳು ಸಭೆಗೆ ಬಾರದಂತೆ ತಡೆದಿದ್ದಾರೆ’ ಎಂದು ಧಿಕ್ಕಾರ ಕೂಗಿದರು.

ಪೌರಾಯುಕ್ತರು ನೀಡಿದ ವಿವರಣೆ ಒಪ್ಪದ ರೇಖಾ ಉಮೇಶ್ ಸಭೆ ಬಹಿಷ್ಕರಿಸಿ ಹೊರನಡೆದರು. ಎಲ್ಲ ಸದಸ್ಯರು ಸೇರಿ ನಗರಸಭೆ ಮುಂದೆ ಧಿಕ್ಕಾರ ಕೂಗಿದರು.

ನಗರದ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಸಭೆ ಕರೆದರೆ ಕೆಲವರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರುವ ಮೂಲಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅಡೆತಡೆ ಉಂಟು ಮಾಡುತ್ತಿದ್ದಾರೆ. ನ್ಯಾಯಾಲಯಕ್ಕೆ ಹೋಗಿರುವ ಹಿನ್ನೆಲೆಯಾದರೂ ಏನು ಎಂದು ಸದಸ್ಯರು ಪ್ರಶ್ನಿಸಿದರು.

ಶಾಸಕರ ವಿರುದ್ಧ ಆಕ್ರೋಶ

ಸದಸ್ಯ ಶಫೀಕ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಒಂದು ಸಭೆಗೂ ಶಾಸಕರು ಹಾಜರಾಗಿಲ್ಲ. ನಗರದ ಜನರ ಸಮಸ್ಯೆ ಮತ್ತು ಅಭಿವೃದ್ಧಿ ಬಗ್ಗೆ ಅವರಿಗೆ ಕಾಳಜಿ ಇಲ್ಲ. ಸಭೆಗಳಿಗೆ ಹಾಜರಾಗಿ ನಗರದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿ ಸರ್ಕಾರಕ್ಕೆ ಮನವಿ, ಪ್ರಸ್ತಾವನೆ ಸಲ್ಲಿಸಿ ಹೆಚ್ಚಿನ ಅನುದಾನ ತರಬೇಕು. ಆದರೆ ಅವರು ಕೇವಲ ಗುದ್ದಲಿ ಪೂಜೆಗೆ ಮಾತ್ರ ಸೀಮಿತರಾಗಿದ್ದಾರೆಎಂದುದೂರಿದರು.

ಸದಸ್ಯ ಕೆ.ವಿ ರೆಡ್ಡಪ್ಪ, ‘ಆಶ್ರಯ ಮನೆಗಳು ಮಂಜೂರಾಗಿವೆ. ಕಾರ್ಯಾದೇಶ ನೀಡಿ ಮನೆಗಳು ಪೂರ್ಣವಾಗಬೇಕಿತ್ತು. ಶಾಸಕರೇ ಆಶ್ರಯ ಸಮಿತಿಯ ಅಧ್ಯಕ್ಷರಾಗಿದ್ದರೂ ಕಾರ್ಯಾದೇಶ ನೀಡದೆ ತಡೆಯೊಡ್ಡಿದ್ದಾರೆ’ ಎಂದು ಆರೋಪಿಸಿದರು.

‘ಸಭೆಗೆ ಅಡ್ಡಿ ಪಡಿಸುವುದು ಸರಿಯಲ್ಲ’

ಚಿಂತಾಮಣಿ: ‘ನಗರಸಭೆ ಸದಸ್ಯ ಸಾಮಾನ್ಯ ಸಭೆ ನಡೆಯದಂತೆ ನ್ಯಾಯಾಲಯದ ಆದೇಶ ತರುವುದು ಎಷ್ಟು ಸರಿ. ನಗರದ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಇಂತಹ ಸದಸ್ಯರು ಬೇಕೆ’ ಎಂದು ಕಾಂಗ್ರೆಸ್ ಮುಖಂಡ ಸೈಯದ್ ಮಾಲಿಕ್ ಪಾಷಾ ಪ್ರಶ್ನಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೆ.7 ರಂದು ನಡೆಯುವ ನಗರಸಭೆಯ ಸಾಮಾನ್ಯ ಸಭೆಗೆ ಆ.30 ರಂದು ನೋಟೀಸ್ ಕಳುಹಿಸಲಾಗಿದೆ. ಮುಂಚಿತವಾಗಿ ನೋಟಿಸ್‌ ನೀಡಲಾಗಿದ್ದರೂ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ತಡೆಯಾಜ್ಞೆ ತರಲಾಗಿದೆ’ ಎಂದುದೂರಿದರು.

ಅಧಿಕಾರಿಗಳ ಕೊರತೆ: ನಗರಸಭೆಯಲ್ಲಿ ಅಧಿಕಾರಿಗಳ ಕೊರತೆ ಇದೆ. ಶಾಸಕರು ಅಧಿಕಾರಿ ಮತ್ತು ಸಿಬ್ಬಂದಿಯ ಕೊರತೆ ನೀಗಿಸಬೇಕೆ ಹೊರತು ಕೆಲಸಗಳಿಗೆ ತಡೆ ಮಾಡಬಾರದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT