ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಉಪ ಚುನಾವಣೆ: ಶೇ86.19 ಮತದಾನ

ಸ್ಪರ್ಧಾ ಕಣಗಳಲ್ಲಿದ್ದ ಒಂಬತ್ತು ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರ
Last Updated 5 ಡಿಸೆಂಬರ್ 2019, 14:25 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಯಾವುದೇ ಅಹಿತಕರ ಘಟನೆಗಳಿಲ್ಲದೆ ಗುರುವಾರ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಮತದಾನ ಶಾಂತಿಯುತವಾಗಿ ನಡೆಯಿತು. ಅಂದಾಜು ಶೇ 86.19 ಮತದಾನವಾಗಿದೆ.

ಬೆಳಿಗ್ಗೆ 7ಕ್ಕೆ ಶುರುವಾದ ಮತದಾನ ಆರಂಭದಲ್ಲಿ ಮಂದಗತಿಯಲ್ಲಿತ್ತು. ಚಳಿಯ ಕಾರಣಕ್ಕೆ ಬೆಳ್ಳಂಬೆಳಗೆ ಮತಗಟ್ಟೆಯತ್ತ ಜನ ಮುಖಮಾಡದ ಕಾರಣಕ್ಕೆ ಮತಗಟ್ಟೆಗಳು ಭಣಗುಡುತ್ತಿದ್ದವು. ಪರಿಣಾಮ, ಮತದಾನ ಆರಂಭಗೊಂಡು ನಾಲ್ಕು ತಾಸುಗಳು ಕಳೆದರೂ ಬೆಳಿಗ್ಗೆ 11ರ ಸುಮಾರಿಗೆ ಶೇ 20.78ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 1 ರಿಂದ ಸಂಜೆ 5ರ ವರೆಗೆ ಮತದಾನದಲ್ಲಿ ತೀವ್ರ ಚುರುಕು ಕಾಣಿಸಿಕೊಂಡು ಮತದಾನದ ಪ್ರಮಾಣ ಶೇ 79.8ಕ್ಕೆ ತಲುಪಿತ್ತು.

ಮಧ್ಯಾಹ್ನದ ನಂತರ ಮತಗಟ್ಟೆಗಳ ಮುಂದೆ ಮತದಾರರ ಉದ್ದನೆಯ ಸರದಿ ಸಾಲುಗಳು ಕಂಡುಬಂದವು. ಮೊದಲ ಬಾರಿ ಮತ ಚಲಾಯಿಸಲು ಬಂದಿದ್ದ ಯುವ ಮತದಾರರು ಸರದಿ ಸಾಲಿನಲ್ಲಿ ಉತ್ಸಾಹದಿಂದ ಮತ ಚಲಾಯಿಸುವುದನ್ನೇ ಕುತೂಹಲದಿಂದ ಎದುರು ನೊಡುತ್ತಿದ್ದರು. ಇನ್ನು ಮತ ಚಲಾಯಿಸಿ ಬಂದವರ ಮೊಗದಲ್ಲಂತೂ ಏನೋ ಸಾಧಿಸಿದ ಕಳೆ ಗೋಚರಿಸುತ್ತಿತ್ತು.

ವಯೋವೃದ್ಧರು, ಅಂಗವಿಕಲರು ಸಹ ಕುಟುಂಬದವರ ನೆರವಿನೊಂದಿಗೆ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದರು. ಅಂಗವಿಕಲರು ಮತ್ತು ನಡೆಲಾರದಂತಹ ಸ್ಥಿತಿಯಲ್ಲಿರುವ ಮತದಾರರ ಅನುಕೂಲಕ್ಕಾಗಿ ಮತಗಟ್ಟೆಗಳಲ್ಲಿ ಗಾಲಿ ಕುರ್ಚಿ ವ್ಯವಸ್ಥೆ ಮಾಡಲಾಗಿತ್ತು.

ಕ್ಷೇತ್ರ ವ್ಯಾಪ್ತಿಯಲ್ಲಿ 99,449 ಪುರುಷ, 1,00,747 ಮಹಿಳೆ ಮತ್ತು 22 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2,00,218 ಮತದಾರರಿದ್ದು, ಮತದಾನಕ್ಕಾಗಿ 254 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಉಪ ಚುನಾವಣೆಯಲ್ಲಿ 87,167 ಪುರುಷರು, 85,485 ಮಹಿಳೆಯರು ಸೇರಿದಂತೆ 1,72,652 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಕ್ಷೇತ್ರದ ಸ್ಪರ್ಧಾ ಕಣಗಳಲ್ಲಿದ್ದ ಒಂಬತ್ತು ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದ್ದು, ಈ ಪೈಕಿ ಯಾವ ಯಾರಿಗೆ ‘ಅದೃಷ್ಟ’ ಒಲಿಯಲಿದೆ ಎಂದು ಡಿ.9ರಂದು ನಡೆಯುವ ಮತ ಎಣಿಕೆಯಲ್ಲಿ ತಿಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT