ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪರೇಷನ್ ಸಾಧ್ಯತೆ: ಕಾಂಗ್ರೆಸ್‌ನತ್ತ ಬಿಜೆಪಿ ನಗರಸಭೆ ಸದಸ್ಯರು?

Published 21 ಜುಲೈ 2023, 19:30 IST
Last Updated 21 ಜುಲೈ 2023, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆಯ ಎರಡನೇ ಅವಧಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ನಗರಸಭೆ ಸದಸ್ಯರ ನಡುವೆ ನಾನಾ ಚರ್ಚೆಗಳು ನಡೆಯುತ್ತಿವೆ.

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇನ್ನೂ ಮೀಸಲಾತಿ ನಿಗದಿ ಆಗಿಲ್ಲ. ಮೊದಲ ಅವಧಿಯಲ್ಲಿ ಬಹುಮತವಿದ್ದರೂ ಅಧಿಕಾರ ಹಿಡಿಯಲು ಸಾಧ್ಯವಾಗದ ಕಾಂಗ್ರೆಸ್ ಈ ಬಾರಿ ಅಧಿಕಾರ ಪಡೆಯಲು ಈಗಲೇ ನಾನಾ ತಂತ್ರಗಳನ್ನು ನಡೆಸಿದೆ. ನಗರಸಭೆಯ ಬಿಜೆಪಿಯ ನಾಲ್ಕೈದು ಮಂದಿ ಸದಸ್ಯರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎನ್ನುವ ಸುದ್ದಿ ಸದಸ್ಯರ ನಡುವೆ ದೊಡ್ಡ ಮಟ್ಟದಲ್ಲಿಯೇ ಚರ್ಚೆಗೆ ಕಾರಣವಾಗಿದೆ.

ಈ ಪಕ್ಷಾಂತರದ ಸುದ್ದಿಯನ್ನು ಬಿಜೆಪಿ ಸದಸ್ಯರೇ ನಿರಾಕರಿಸುವುದಿಲ್ಲ. ಮೀಸಲಾತಿ ಘೋಷಣೆಯಾದ ನಂತರ ಕೆಲವು ಬಿಜೆಪಿ ಸದಸ್ಯರು ಕಾಂಗ್ರೆಸ್‌ನತ್ತ ಮುಖ ಮಾಡುವ ಸಾಧ್ಯತೆ ದಟ್ಟವಾಗಿದೆ.

ಜೆಡಿಎಸ್‌ ಸದಸ್ಯೆ ಮನೆಯಲ್ಲಿ ಔತಣ: ‌ನಗರಸಭೆ ಮಾಜಿ ಉಪಾಧ್ಯಕ್ಷೆ ಹಾಗೂ ಜೆಡಿಎಸ್ ಸದಸ್ಯೆ ವೀಣಾ ರಾಮು ಅವರ ಮನೆಯಲ್ಲಿ ಇತ್ತೀಚೆಗೆ ಔತಣ ಕೂಟ ಸಹ ನಡೆದಿದೆ. ಈ ಊಟದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ಸಹ ಪಾಲ್ಗೊಂಡಿದ್ದಾರೆ. ಅಚ್ಚರಿಯ ಬೆಳವಣಿಗೆ ಎಂದರೆ ಬಿಜೆಪಿ ಸದಸ್ಯರೊಬ್ಬರು ಸಹ ಹಾಜರಿದ್ದಾರೆ. ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಕಾಂಗ್ರೆಸ್ ಮುಖಂಡ ನಂದಿ ಆಂಜನಪ್ಪ ನೇತೃತ್ವದಲ್ಲಿ ಈ ಸಭೆ ನಡೆದಿದೆ.

31 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್‌ನ 16, ಜೆಡಿಎಸ್ 2, ಬಿಜೆಪಿ 9 ಮತ್ತು ನಾಲ್ಕು ಮಂದಿ ಪಕ್ಷೇತರ ಸದಸ್ಯರು ಇದ್ದಾರೆ. 2020ರ ಅಕ್ಟೋಬರ್‌ನಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ಕಾಂಗ್ರೆಸ್‌ನ ಏಳು ಸದಸ್ಯರು ವಿಪ್ ಉಲ್ಲಂಘಿಸಿದ್ದರು. ಇದರಿಂದ ಕಾಂಗ್ರೆಸ್ ಅಧಿಕಾರದಿಂದ ವಂಚಿತವಾಯಿತು. ಪಕ್ಷೇತರ ಸದಸ್ಯ ಡಿ.ಎಸ್.ಆನಂದರೆಡ್ಡಿ ಬಾಬು ಅಧ್ಯಕ್ಷರಾಗಿ ಮತ್ತು ಜೆಡಿಎಸ್‌ನ ವೀಣಾ ರಾಮು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಅಂದು ಪಕ್ಷದ ವಿಪ್ ಉಲ್ಲಂಘಿಸಿದ ಕಾಂಗ್ರೆಸ್ ಸದಸ್ಯರು ನಂತರದ ಬೆಳವಣಿಗೆಯಲ್ಲಿ ಮತ್ತೆ ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡರು. ವಿಧಾನಸಭೆ ಚುನಾವಣೆಯ ಸಮಯದಲ್ಲಿ ಪ್ರದೀಪ್ ಈಶ್ವರ್‌ಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಪಕ್ಷ ತೊರೆದ ಮೂವರು ಸದಸ್ಯರು ಸಹ ಈಗ ಕಾಂಗ್ರೆಸ್ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‌ಹೀಗೆ ಕಾಂಗ್ರೆಸ್ ಸದಸ್ಯರೆಲ್ಲರೂ ಅಧಿಕಾರ ಹಿಡಿಯಲು ಒಗ್ಗೂಡಿದ್ದಾರೆ.

‘ಈ ಬಾರಿ ಕಾಂಗ್ರೆಸ್ ಅಧಿಕಾರ ಹಿಡಿಯಬೇಕು. ಪಕ್ಷದ ಸದಸ್ಯರೆಲ್ಲರೂ ಈ ವಿಚಾರವಾಗಿ ಒಮ್ಮತಕ್ಕೆ ಬಂದಿದ್ದಾರೆ. ಯಾವುದೇ ಮೀಸಲಾತಿ ಬರಲಿ ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲಾಗುವುದು. ಈ ವಿಚಾರವಾಗಿಯೇ ಸಭೆಯಲ್ಲಿ ಚರ್ಚೆ ಆಯಿತು’ ಎಂದು ನಗರಸಭೆ ಕಾಂಗ್ರೆಸ್ ಸದಸ್ಯ ಕಣಿತಹಳ್ಳಿ ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಪಕ್ಷದ ಕೆಲವು ಸದಸ್ಯರು ಕಾಂಗ್ರೆಸ್‌ಗೆ ಹೋಗುವ ಸಾಧ್ಯತೆ ಇದೆ. ಅವರ ಸ್ವಹಿತಾಸಕ್ತಿ ಕಾಪಾಡಿಕೊಳ್ಳಲು ಮತ್ತು ಅಕ್ರಮಗಳನ್ನು ಮುಚ್ಚಿಕೊಳ್ಳಲು ಹೋಗುತ್ತಿದ್ದಾರೆ. ಚುನಾವಣೆ ಸಮೀಪ ಬಂದಾಗ ಎಲ್ಲವೂ ಬಹಿರಂಗವಾಗಲಿದೆ’ ಎಂದು ಬಿಜೆಪಿಯ ನಗರಸಭೆ ಸದಸ್ಯರೊಬ್ಬರು ಮಾಹಿತಿ ನೀಡಿದರು.

‘ಕೈ’ ಮುಖಂಡರ ಮುಸುಕಿನ ಗುದ್ದಾಟ

ಒಂದೆಡೆ ಕಾಂಗ್ರೆಸ್ ಅಧಿಕಾರ ಹಿಡಿಯಲು ಹೆಜ್ಜೆ ಇಟ್ಟಿದ್ದರೆ ಮತ್ತೊಂದು ಕಡೆ ಪಕ್ಷದ ಮುಖಂಡ ನಡುವೆ ಮುಸುಕಿನ ಗುದ್ದಾಟ ಸಹ ನಡೆದಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೆಲವು ನಗರಸಭೆ ಸದಸ್ಯರು ಹಾಗೂ ಶಾಸಕ ಪ್ರದೀಪ್ ಈಶ್ವರ್ ನಡುವೆ ವಾಗ್ವಾದಗಳು ನಡೆದಿದ್ದವು. ಶಾಸಕರು ಸಭೆಯಿಂದ ಹೊರ ನಡೆದಿದ್ದರು. ಸಚಿವ ಡಾ.ಎಂ.ಸಿ.ಸುಧಾಕರ್ ಸಮಾಧಾನಿಸಿ ಮತ್ತೆ ಸಭೆಗೆ ಕರೆ ತಂದಿದ್ದರು.

ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದವರಿಗೆ ಅಧಿಕಾರ ಬೇಡ ಎನ್ನುವ ನಿಲುವು ಶಾಸಕರದ್ದಾಗಿದೆ. ‘ಇವರು ಈಗ ಶಾಸಕರು. ನಾವು ಅವರಿಗಿಂತ ಮುನ್ನವೇ ಪಕ್ಷದ ಚಿಹ್ನೆಯಡಿ ಗೆಲುವು ಸಾಧಿಸಿದ್ದೇವೆ’ ಎಂದು ಪಕ್ಷ ವಿರೋಧಿ ಚಟುವಟಿಕೆ ಆರೋಪ ಹೊತ್ತ ಕಾಂಗ್ರೆಸ್ ಸದಸ್ಯರು ನುಡಿಯುವರು.

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಮುಖಂಡ ನಂದಿ ಆಂಜನಪ್ಪ ನಗರಸಭೆ ಸದಸ್ಯರ ಸಭೆ ನಡೆಸಿದ್ದಾರೆ. ಶಾಸಕ ಪ್ರದೀಪ್ ಈಶ್ವರ್ ಅವರು ಈ ಸಭೆಯಲ್ಲಿ ಪಾಲ್ಗೊಂಡಿಲ್ಲ.

‘ಅಭಿವೃದ್ಧಿಗಾಗಿ ಸೂಕ್ತ ತೀರ್ಮಾನ’

ನಮ್ಮ ವಾರ್ಡ್ ಅಭಿವೃದ್ಧಿ ಆಗಬೇಕಾಗಿದೆ. ಜನರಿಗೆ ನಾವು ನೀಡಿರುವ ಭರವಸೆ ಮತ್ತು ಆಶ್ವಾಸನೆಗಳನ್ನು ಈಡೇರಿಸಬೇಕಾಗಿದೆ. ಇನ್ನು ಎರಡೂ ಕಾಲು ವರ್ಷಗಳು ಮಾತ್ರ ಅಧಿಕಾರವಿದೆ. ಮತ್ತೆ ನಾವು ಜನರ ಬಳಿಗೆ ಹೋಗಬೇಕು ಎಂದರೆ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡೇ ಹೋಗಬೇಕು. ಆದ್ದರಿಂದ ಮುಂದಿನ ದಿನಗಳಲ್ಲಿ ಅಭಿವೃದ್ಧಿಗಾಗಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಬಿಜೆಪಿ ಸದಸ್ಯರೊಬ್ಬರು  ತಿಳಿಸಿದರು.

‘ಊಟಕ್ಕೆ ಸೇರಿದ್ದೆವು’

ಊಟಕ್ಕೆ ಕರೆದಿದ್ದರು. ನಗರಸಭೆಯ ಬಹಳಷ್ಟು ಸದಸ್ಯರು ಸೇರಿದ್ದೆವು. ರಾಜಕಾರಣದ ವಿಚಾರ ಹೆಚ್ಚು ಚರ್ಚೆ ಆಗಲಿಲ್ಲ. ಊಟ ಪೂರ್ಣಗೊಳಿಸಿದ ತಕ್ಷಣ ನಾನು ಬಂದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರೊಬ್ಬರು ತಿಳಿಸಿದರು. 

ಬಿಜೆಪಿ ಸದಸ್ಯರಲ್ಲಿ ಒಗ್ಗಟ್ಟಿಲ್ಲವೆ?

ನಗರಸಭೆಯಲ್ಲಿ ಬಿಜೆಪಿ ಚಿಹ್ನೆಯಡಿ 9 ಸದಸ್ಯರು ಆಯ್ಕೆ ಆಗಿದ್ದಾರೆ. ಆದರೆ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯ ಬಲ್ಲ ಸಮರ್ಥ ನಾಯಕತ್ವ ಮತ್ತು ಒಗ್ಗಟ್ಟು ಸದಸ್ಯರಲ್ಲಿ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಚಿಕ್ಕಬಳ್ಳಾಪುರಲ್ಲಿಯೂ ಕಾಂಗ್ರೆಸ್ ಶಾಸಕರು ಇದ್ದಾರೆ. ಅಭಿವೃದ್ಧಿ ದೃಷ್ಟಿಯಿಂದ ಆಡಳಿತ ಪಕ್ಷ ಸೇರಿದರೆ ಅನುಕೂಲ ಎನ್ನುವ ಮಾತುಗಳು ಬಿಜೆಪಿಯ ಕೆಲವು ಸದಸ್ಯರಲ್ಲಿ ಇದೆ.  ಶಾಸಕ ಪ್ರದೀಪ್ ಈಶ್ವರ್ ಹಾಗೂ ಕಾಂಗ್ರೆಸ್ ಮುಖಂಡರು ಮಾಜಿ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಟೀಕೆ ಮಾಡಿದರೂ ಬಿಜೆಪಿ ಸದಸ್ಯರು ಸಾಮೂಹಿಕವಾಗಿ ಪ್ರತಿರೋಧ ತೋರುತ್ತಿಲ್ಲ. ಪಕ್ಷೇತರ ಸದಸ್ಯ ಆನಂದರೆಡ್ಡಿ ಹಾಗೂ ಕೆಲವು ಬಿಜೆಪಿ ಸದಸ್ಯರು ಮಾತ್ರ ಪ್ರತಿರೋಧದ ಹೇಳಿಕೆ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT