ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇಳೂರು: ಲಾಕ್‌ಡೌನ್‌ ಪರಿಣಾಮ ಜೀವನಕ್ಕಾಗಿ ಹಕ್ಕಿಪಿಕ್ಕಿ ಜನಾಂಗ ಪರದಾಟ

ಪೆಮ್ಮಯ್ಯಗಾರಿಪಲ್ಲಿ ಗ್ರಾಮದಲ್ಲಿ ಜೀವನ, ಲಾಕ್‌ಡೌನ್‌ನಿಂದಾಗಿ ವ್ಯಾಪಾರ ಬಂದ್
Last Updated 10 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಚೇಳೂರು: ಕೈಯಿಂದ ತಯಾರಿಸಿದ ಅಲಂಕಾರಿಕ ವಸ್ತುಗಳನ್ನು ಮಾರಿ ಜೀವನ ನಡೆಸುತ್ತಿದ್ದ ಹಕ್ಕಿಪಿಕ್ಕಿ ಸಮುದಾಯ ಇದೀಗ ವ್ಯಾಪಾರವಿಲ್ಲದೇ ಜೀವನ ನಡೆಸಲು ಪರದಾಡುತ್ತಿದೆ.

ಚೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಮ್ಮಯ್ಯಗಾರಿಪಲ್ಲಿ ಗ್ರಾಮದಲ್ಲಿ 150 ಹಕ್ಕಿ- ಪಿಕ್ಕಿ ಜನಾಂಗದವರು 30 ವರ್ಷಗಳಿಂದ ವಾಸವಾಗಿದ್ದು, ಲಾಕ್ ಡೌನ್ ಹಿನ್ನಲೆಯಲ್ಲಿ ನಾನಾ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಕೈಯಲ್ಲಿದ್ದ ಅಲ್ಪಸ್ವಲ್ಪ ಹಣವೂ ಖಾಲಿಯಾಗಿದ್ದು, ದಿನಗಳನ್ನು ದೂಡುವುದು ಕಷ್ಷವಾಗಿದೆ.

ಈ ಕುಟುಂಬಗಳಿಗೆ ವ್ಯಾಪಾರವೇ ಜೀವನಾಧಾರವಾಗಿದ್ದು, ವ್ಯಾಪಾರದಿಂದ ಬಂದ ಹಣದಿಂದಲೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ವ್ಯಾಪಾರಕ್ಕೆ ಅವಕಾಶ ಇಲ್ಲದ ಕಾರಣ ಈ ಕುಟುಂಬಗಳು ಇದೀಗ ದಿಕ್ಕು ದೋಚಿದಂತಾಗಿದ್ದಾರೆ. ಕಳೆದ 15 ದಿನಗಳಿಂದ ಮನೆಗಳಲ್ಲಿಯೇ ಇದ್ದು, ಹೊರಗೆ ಹೊಗಲು ಸಾಧ್ಯವಾಗದೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಅಲಂಕೃತ ವಸ್ತುಗಳು ಮಾರಾಟ: ಹಕ್ಕಿಪಿಕ್ಕಿ ಕುಟುಂಬಗಳು ಅಲಂಕೃತ ವಸ್ತುಗಳು ಮಾತ್ರವಲ್ಲದೇ ಪ್ಲಾಸ್ಟಿಕ್‌ನಿಂದ ತಯಾರಿಸಿ ದೇವರ ಚಿತ್ರಕ್ಕೆ ಹಾಕುವ ಹಾರ, ತೋರಣಗಳು, ಹೂ ಕುಂಡದಲ್ಲಿ ಮಾಡಲ್ಟಟ್ಟ ಹೂಗುಚ್ಚ ಮತ್ತಿತರ ವಸ್ತುಗಳು ಮಾರಾಟದಲ್ಲಿ ತೊಡಗಿದ್ದರು. ಆದರೆ ಆಧುನಿಕ ಜಗತ್ತು ಬೆಳೆದಂತೆಲ್ಲಾ ಶಾಪಿಂಗ್ ಮಾಲ್‌ಗಳ ಸಂಖ್ಯೆ ಹೆಚ್ಚುತ್ತಿರುವುದು ಸಮುದಾಯದ ವ್ಯಾಪಾರಕ್ಕೂ ದೊಡ್ಡಮಟ್ಟದ ಪೆಟ್ಟು ನೀಡಿದೆ. ಇದೀಗ ಲಾಕ್‌ಡೌನ್‌ನಿಂದಾಗಿ ಅಲ್ಪ ಸ್ವಲ್ಪ ವ್ಯಾಪಾರಕ್ಕೂ ಕಡಿವಾಣ ಬಿದ್ದಿದೆ ಎಂದು ಹಕ್ಕಿಪಿಕ್ಕಿ ರಾಜಣ್ಣ ನೋವು ತೋಡಿಕೊಂಡರು.

ಗ್ರಾಮಿಣ ಭಾಗದಲ್ಲಿ ಅಗತ್ಯ ಸೌಕರ್ಯ ಕಲ್ಪಿಸಿಕೊಡುವುದು ಗ್ರಾಮ ಪಂಚಾಯಿತಿಯ ಕರ್ತವ್ಯ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಮುಂದೆ ಅನಾಹುತ ಸಂಭವಿಸಿದಾಗ ಎಚ್ಚೆತ್ತುಕೊಳ್ಳುವ ಬದಲು, ಮುಂಚಿತವಾಗಿ ಕಾರ್ಯಪ್ರವೃತ್ತರಾದರೆ ಒಳಿತು ಎಂಬುದು ಇಲ್ಲಿನ ಜನರು ಒತ್ತಾಯಿಸಿದರು.

ಜನಪ್ರತಿನಿಧಿಗಳು, ತಾಲ್ಲೂಕು ಅಧಿಕಾರಿಗಳು, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಮ್ಮ ಕಷ್ಟ ಅರಿತು ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ಸಮುದಾಯದ ಜನರು ಮನವಿ ಮಾಡಿದರು.

ನೀರು ಕೊಡದಿದ್ದರೆ ಧರಣಿ
ಹಕ್ಕಿಪಿಕ್ಕಿ ಸಮುದಾಯ ವಾಸವಾಗಿರುವ ಸ್ಥಳದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಈ ಗ್ರಾಮದಲ್ಲಿ ಎರಡು ತಿಂಗಳಿಂದ ಕುಡಿಯಲು ನೀರಿಲ್ಲ. ಕೊಳವೆ ಬಾವಿಗಳು ಬತ್ತಿವೆ. ಅಲ್ಲದೆ ಗ್ರಾಮದಲ್ಲಿ ಚರಂಡಿಗಳಲ್ಲಿ ಹುಳು ತುಂಬಿದೆ. ಹಲವು ಗ್ರಾಮಗಳಲ್ಲಿ ಟ್ರಾಕ್ಟರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದು, ಪ್ರತಿ ಮನೆಗೆ 20 ಬಿಂದಿಗೆ ನೀರು ನೀಡುತ್ತಿದ್ದಾರೆ. ನಮ್ಮ ಗ್ರಾಮಕ್ಕೂ ನೀರು ಕೊಡಬೇಕು. ಇಲ್ಲವಾದಲ್ಲಿ ಗ್ರಾಮ ಪಂಚಾಯಿತಿ ಎದುರು ಧರಣಿ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದರು.

ಕಷ್ಟದ ಸ್ಥಿತಿಯಲ್ಲಿ ಮಕ್ಕಳ ಪಾಲನೆ
ನಮಗೆ ದಿನಸಿ ವಸ್ತುಗಳನ್ನು ಕೊಂಡುಕೊಳ್ಳಲು ಹಣವಿಲ್ಲ. ಮೂರು ದಿನಗಳಿಂದ ತಿನ್ನಲು ಊಟವಿಲ್ಲ, ಕುಡಿಯಲು ನೀರು ಸಿಗುತ್ತಿಲ್ಲ, ಮಕ್ಕಳ ಪಾಲನೆಗೆ ಬದುಕು ದುಸ್ಥರವಾಗಿದೆ. ನಮ್ಮ ಗೋಳು ಕೇಳುವವರಿಲ್ಲದೆ ದಿಕ್ಕುತೋಚದಂತಾಗಿದೆ ಎಂದು ಸಮುದಾಯದ ಗೋಪಿಲಾಲ್ ತಮ್ಮ ಕಷ್ಟವನ್ನು ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT