ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: ಪಡಿತರ ಚೀಟಿಗಾಗಿ ಜನರ ಪರದಾಟ!

ಚುನಾವಣಾ ನೀತಿ ಸಂಹಿತೆ ಜಾರಿಯಿಂದಾಗಿ ಲಾಗಿನ್ ಬಂದ್ | ಆರಂಭಕ್ಕೆ ಒತ್ತಾಯ
Published 12 ಜೂನ್ 2023, 23:30 IST
Last Updated 12 ಜೂನ್ 2023, 23:30 IST
ಅಕ್ಷರ ಗಾತ್ರ

ಪಿ.ಎಸ್.ರಾಜೇಶ್

ಬಾಗೇಪಲ್ಲಿ: ಜನವರಿ ತಿಂಗಳಿನಿಂದ ಇದುವರಿಗೂ ಸರ್ಕಾರ ಲಾಗಿನ್ ಬಂದ್ ಮಾಡಿರುವುದರಿಂದ, ನೂತನ ಪಡಿತರ ಚೀಟಿಗಳು ಸಿಗದ ಅರ್ಹ ಫಲಾನುಭವಿಗಳು ಪಡಿತರ ವಸ್ತುಗಳಿಗಾಗಿ ಸಿಗದೆ ಪರದಾಡುವಂತಾಗಿದೆ. 

ತಾಲ್ಲೂಕಿನಲ್ಲಿ ಜನವರಿ ತಿಂಗಳ 16ರ ಅಂತ್ಯಕ್ಕೆ ಆನ್‌ಲೈನ್ ಆದ್ಯತಾ ಅರ್ಜಿಗಳ ಸ್ಥಳ ಪರಿಶೀಲನಾ ವರದಿಯಲ್ಲಿ ಸ್ವೀಕರಿಸುವ ಅರ್ಜಿಗಳು 751 ಇತ್ತು. ಅರ್ಹ ಫಲಾನುಭವಿಗಳು 534 ಮಂದಿ ಇದ್ದರು. ಸ್ಥಳ ಪರಿಶೀಲನೆ ಮಾಡಿರುವ ಅರ್ಜಿಗಳು 606 ಇತ್ತು. ಅಂದಿನಿಂದ ಇಂದಿನವರಿಗೆ ಪಡಿತರ ಚೀಟಿಗಳು ಪಡೆಯಲು ಆಯಾಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸೈಬರ್ ಕೇಂದ್ರಗಳಲ್ಲಿ ಹೊಸ ಪಡಿತರ ಚೀಟಿ, ತಿದ್ದುಪಡಿ, ವರ್ಗಾವಣೆ ಹಾಗೂ ಮೃತಪಟ್ಟಿರುವ ಹೆಸರು ತೆಗೆಯಲು ಆನ್‌ಲೈನ್‌ನಲ್ಲಿ ಅರ್ಜಿಗಳು ಹಾಕಿದ್ದಾರೆ.

ಜೂನ್ 12ರ ಅಂತ್ಯಕ್ಕೆ ತಾಲ್ಲೂಕಿನಲ್ಲಿ ಅಂತ್ಯೋದಯದ 25,944 ಮಂದಿ ಅರ್ಹ ಫಲಾನುಭವಿಗಳ ಪೈಕಿ, 6,036 ಚೀಟಿದಾರರು ಇದ್ದಾರೆ. ಬಿಪಿಎಲ್‌ನ 1,28,563 ಅರ್ಹ ಫಲಾನುಭವಿಗಳ ಪೈಕಿ, 41,720 ಮಂದಿ ಚೀಟಿದಾರರು ಇದ್ದಾರೆ. ಉಳಿದಂತೆ ಎಪಿಎಲ್‌ನ 7,013 ಮಂದಿ ಅರ್ಹ ಫಲಾನುಭವಿಗಳ ಪೈಕಿ, 2,204 ಚೀಟಿದಾರರು ಇದ್ದಾರೆ. ಒಟ್ಟಾರೆ ತಾಲ್ಲೂಕಿನಲ್ಲಿ 1,61,520 ಮಂದಿ ಅರ್ಹ ಪಡಿತರ ಫಲಾನುಭವಿಗಳ ಪೈಕಿ, 49,960 ಮಂದಿ ಪಡಿತರ ಚೀಟಿ ಹೊಂದಿದ್ದಾರೆ. 

ತಾಲ್ಲೂಕಿನಲ್ಲಿ ಒಟ್ಟು 2,749 ಅರ್ಜಿಗಳ ಪೈಕಿ 862 ಪಡಿತರ ಚೀಟಿಗಳನ್ನು ವಿತರಿಸಲಾಗಿದ್ದು, ಸೂಕ್ತ ದಾಖಲೆಗಳು ಇಲ್ಲದಿರುವುದರಿಂದ 960 ಅರ್ಜಿಗಳು ತಿರಸ್ಕೃತಗೊಂಡಿದೆ. ಈವರೆಗೆ 929 ಮಂದಿ ಅರ್ಹ ಫಲಾನುಭವಿಗಳು ನೂತನ ಪಡಿತರ ಚೀಟಿದಾರರು ಇದ್ದಾರೆ.

ಆದರೆ, ಜನವರಿ ತಿಂಗಳಿನಿಂದ ಜೂನ್ 12ರವರೆಗೆ ನೂತನ ಪಡಿತರ ಚೀಟಿಗಳನ್ನು ವಿತರಿಸಿಲ್ಲ. ಹೊಸ ಪಡಿತರ ಚೀಟಿಗಳು ಪಡೆಯಲು ತಾಲ್ಲೂಕಿನ ವಿವಿಧ ಕಡೆಗಳಿಂದ ಪ್ರತಿನಿತ್ಯ ಆಹಾರ ಶಾಖೆಗೆ ಆಗಮಿಸುತ್ತಿದ್ದಾರೆ. ಸರ್ಕಾರ ಲಾಗಿನ್ ತೆರೆಯಲು ಅವಕಾಶ ನೀಡದೆ ಇರುವುದರಿಂದ, ಪಡಿತರ ಚೀಟಿ ಪಡೆಯದ ಜನರು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸ್ ಆಗುತ್ತಿದ್ದಾರೆ. 

ಕಳೆದ ನಾಲ್ಕು ತಿಂಗಳ ಹಿಂದೆ ನೂತನ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದೆ. ಆದರೆ, ಹೊಸ ಪಡಿತರ ಚೀಟಿ ಸಿಕ್ಕಿಲ್ಲ. ಇದರಿಂದಾಗಿ ಪಡಿತರ ವಸ್ತುಗಳು ಸಿಗುತ್ತಿಲ್ಲ. ನಮ್ಮಂತಹ ಬಡತನ ರೇಖೆಗಿಂತ ಕಡಿಮೆ ಇರುವ ಜನರಿಗೆ ಸರ್ಕಾರ ಅನುಕೂಲ ಮಾಡಬೇಕು. ಕೂಡಲೇ ಲಾಗಿನ್ ವ್ಯವಸ್ಥೆ ಆರಂಭಿಸಬೇಕು ಎಂದು ಅರ್ಹ ಫಲಾನುಭವಿಗಳು ಒತ್ತಾಯಿಸುತ್ತಿದ್ದಾರೆ. 

‘ಚುನಾವಣಾ ಪೂರ್ವದಲ್ಲಿ ಐದು ಗ್ಯಾರಂಟಿಗಳನ್ನು ಘೋಷಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಪಡಿತರ ಚೀಟಿಗೆ ಅರ್ಜಿ ಹಾಕಿರುವವರಿಗೆ ಕೂಡಲೇ ಪಡಿತರ ಚೀಟಿ ಹಾಗೂ ಪಡಿತರ ವಸ್ತುಗಳನ್ನು ಸಬ್ಸಿಡಿ ರೂಪದಲ್ಲಿ ವಿತರಿಸಬೇಕು. ಕೇರಳ ಮಾದರಿಯಲ್ಲಿ ಪ್ರತಿಯೊಬ್ಬರಿಗೂ 15 ತರಹದ ಪಡಿತರ ವಸ್ತುಗಳ ವಿತರಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು  ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ತಾಲ್ಲೂಕಿನ ಗ್ರಾಮವಾರು ಅರ್ಹ ನೂತನ ಪಡಿತರ ಚೀಟಿದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಸರ್ಕಾರ ಲಾಗಿನ್ ಆರಂಭಿಸಿದರೆ ನೂತನ ಪಡಿತರ ಚೀಟಿಗಳನ್ನು ವಿತರಿಸುತ್ತೇವೆ. ತಿದ್ದುಪಡಿ ಸೇರ್ಪಡೆ ಮೃತಪಟ್ಟವರ ಹೆಸರುಗಳನ್ನು ಸರಿಪಡಿಸಲಾಗುವುದು ಕೆ.ಎನ್.ಪ್ರಭಾಕರ್ ತಾಲ್ಲೂಕು ಆಹಾರ ನಿರೀಕ್ಷಕ ಬಾಗೇಪಲ್ಲಿ

ಲಾಗಿನ್ ಆರಂಭಕ್ಕೆ ಒತ್ತಾಯ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಇದ್ದಿದ್ದರಿಂದಾಗಿ ನೂತನ ಪಡಿತರ ಚೀಟಿ ಪಡೆಯಲು ಲಾಗಿನ್ ಮುಚ್ಚಲಾಗಿತ್ತು. ಚುನಾವಣೆ ಹಾಗೂ ನೀತಿ ಸಂಹಿತೆ ಮುಗಿದು ಹೊಸ ಸರ್ಕಾರ ಬಂದು ಒಂದು ತಿಂಗಳಾಗುತ್ತಿದೆ. ಆದರೆ ಸರ್ಕಾರ ನೂತನ ಪಡಿತರ ಚೀಟಿ ಪಡೆಯಲು ಲಾಗಿನ್ ಆರಂಭಿಸಿಲ್ಲ. ಇದರಿಂದ ತಾಲ್ಲೂಕಿನಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ  ನೂತನ ಪಡಿತರ ಚೀಟಿ ಸಿಗುತ್ತಿಲ್ಲ. ತಾಲ್ಲೂಕು ಕಚೇರಿಯ ಆಹಾರ ಶಾಖೆಗೆ ಅರ್ಜಿದಾರರು ನೂತನ ಪಡಿತರ ಚೀಟಿ ಪಡೆಯಲು ಚೀಟಿಯಲ್ಲಿನ ತಿದ್ದುಪಡಿ ಮೃತಪಟ್ಟವರ ಹೆಸರು ತೆಗೆಯಲು ಹಾಗೂ ಸೇರ್ಪಡೆ ಮಾಡಲು ಅಲೆದಾಡುವ ದುಃಸ್ಥಿತಿ ನಿರ್ಮಾಣವಾಗಿದೆ. ಲಾಗಿನ್ ಆರಂಭಿಸದ ಸರ್ಕಾರದ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಕೂಡಲೇ ಪಡಿತರ ಚೀಟಿಗಳನ್ನು ಪಡೆಯಲು ಸರ್ಕಾರ ಲಾಗಿನ್ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT