ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಬದಲಾಗದ ಪ್ರಾಧಿಕಾರದ ಗ್ಯಾಲರಿ! ವೆಬ್‌ಸೈಟ್‌ನಲ್ಲಿ BSY ಸಿಎಂ?

Published 2 ಮಾರ್ಚ್ 2024, 6:06 IST
Last Updated 2 ಮಾರ್ಚ್ 2024, 6:06 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಯಾವುದೇ ಒಂದು ಸರ್ಕಾರ ಬದಲಾವಣೆಯಾದರೆ ಸರ್ಕಾರಿ ಫಲಕಗಳು, ಸರ್ಕಾರಿ ಜಾಲತಾಣಗಳಲ್ಲಿಯೂ ಮುಖ್ಯಮಂತ್ರಿ, ಸಚಿವರ ಚಿತ್ರಗಳು ಬದಲಾಗುತ್ತವೆ. ಹೊಸ ಸರ್ಕಾರದ ಮುಖ್ಯಮಂತ್ರಿ, ಸಚಿವರ ಚಿತ್ರಗಳು ರಾರಾಜಿಸುತ್ತವೆ. 

ಆದರೆ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮಾತ್ರ ಇಂದಿಗೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ. ಬೈರತಿ ಬಸವರಾಜು ಅವರೇ ನಗರಾಭಿವೃದ್ಧಿ ಸಚಿವ! ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ವೆಬ್‌ಸೈಟ್ ಅಪ್‌ಡೇಟ್ ಆಗಿಯೇ ಇಲ್ಲ. 

ವೆಬ್‌ಸೈಟ್‌ನ ಮುಖಪುಟದಲ್ಲಿ ‘ಇತ್ತೀಚಿನ ಫೋಟೊ ಗ್ಯಾಲರಿ’ ಎನ್ನುವ ಶೀರ್ಷಿಕೆ ಇದೆ. ಆ ಶೀರ್ಷಿಕೆಯ ಕೆಳಭಾಗದಲ್ಲಿ ನೋಡಿದರೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಇಲಾಖೆಯ ಯೋಜನೆಯನ್ನು ಅಥವಾ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವ ಚಿತ್ರವಿದೆ. ಇದು ಗ್ಯಾಲರಿ 1ರ ಚಿತ್ರವಾದರೆ ಗ್ಯಾಲರಿ 3ರ ಚಿತ್ರದಲ್ಲಿ ಈ ಹಿಂದಿನ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರು ಕಾರ್ಯಕ್ರಮ ಉದ್ಘಾಟಿಸುವ ಚಿತ್ರವಿದೆ. ಗ್ಯಾಲರಿ2ರಲ್ಲಿ ಈ ಹಿಂದಿನ ಅಧಿಕಾರಿಗಳ ಚಿತ್ರವಿದೆ. 

ತುಮಕೂರು ಸೇರಿದಂತೆ ರಾಜ್ಯದ ಕೆಲವು ನಗರಾಭಿವೃದ್ಧಿ ಪ್ರಾಧಿಕಾರದ ವೆಬ್‌ಸೈಟ್‌ಗಳಲ್ಲಿ ‘ಇತ್ತೀಚಿನ ಫೋಟೊ ಗ್ಯಾಲರಿ’ಯಲ್ಲಿನ ಚಿತ್ರಗಳನ್ನು ತೆರವುಗೊಳಿಸಲಾಗಿದೆ. ಹೊಸ ಚಿತ್ರಗಳೂ ಇಲ್ಲ. ಕೆಲವು ನಗರಾಭಿವೃದ್ಧಿ ಪ್ರಾಧಿಕಾರಗಳ ವೆಬ್‌ಸೈಟ್ ಮುಖಪುಟದಲ್ಲಿ ಹಳೇ ಚಿತ್ರಗಳೇ ಇವೆ. ಚಿಕ್ಕಬಳ್ಳಾಪುರ ಪ್ರಾಧಿಕಾರದ ವೆಬ್‌ಸೈಟ್ ಮುಖಪುಟದಲ್ಲಿಯೂ ಹಳೇ ಚಿತ್ರಗಳೇ ರಾರಾಜಿಸುತ್ತಿವೆ.

ಬೆಂಗಳೂರಿಗೆ ಸಮೀಪದ ಚಿಕ್ಕಬಳ್ಳಾಪುರವು ಇತ್ತೀಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ಹಬ್ ಎನ್ನುವಂತೆ ಬೆಳೆಯುತ್ತಿದೆ. ನಗರದ ಹೊರವಲಯದಲ್ಲಿಯೂ ಬಡಾವಣೆಗಳು ದೊಡ್ಡ ಪ್ರಮಾಣದಲ್ಲಿ ತಲೆ ಎತ್ತುತ್ತಿವೆ. ನಂದಿ ಗಿರಿಧಾಮ, ಈಶಾ ಯೋಗ ಕೇಂದ್ರ, ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲಿ ಇರುವ ಕಾರಣ ಚಿಕ್ಕಬಳ್ಳಾಪುರದಲ್ಲಿ ಬಡಾವಣೆಗಳ ನಿರ್ಮಾಣ ವೇಗ ಪಡೆಯುತ್ತಿದೆ. 

ಈ ಕಾರಣದಿಂದ ಬಹಳಷ್ಟು ಮಂದಿ ಸಾಮಾನ್ಯವಾಗಿ ನಗರಾಭಿವೃದ್ಧಿ ಪ್ರಾಧಿಕಾರದ ವೆಬ್‌ಸೈಟ್‌ಗೆ ಭೇಟಿ ನೀಡುವರು. ಆದರೆ ಚಿಕ್ಕಬಳ್ಳಾಪುರ ಪ್ರಾಧಿಕಾರದ ವೆಬ್‌ಸೈಟ್ ಮಾತ್ರ ಕಾಲಕಾಲಕ್ಕೆ ಅಪ್‌ಡೇಟ್ ಆಗುತ್ತಿಲ್ಲ. ವೆಬ್‌ಸೈಟ್ ನೋಡಿದರೆ ಇದು ತಿಳಿಯಲಿದೆ.

ಹೆಚ್ಚು ವಿವರಗಳನ್ನೂ ವೆಬ್‌ಸೈಟ್ ಒಳಗೊಂಡಿಲ್ಲ. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಕೆಲವು ವೆಬ್‌ಸೈಟ್‌ಗಳನ್ನು ಗ್ರಾಹಕ ಸ್ನೇಹಿ ಎನ್ನುವಂತೆ ರೂಪಿಸಲಾಗಿದೆ. ರಾಜ್ಯದ ಕೆಲವು ನಗರಾಭಿವೃದ್ಧಿ ಪ್ರಾಧಿಕಾರಗಳ ವೆಬ್‌ಸೈಟ್‌ಗಳಲ್ಲಿ ಆಯಾ ಕಾಲದಲ್ಲಿ ಪ್ರಾಧಿಕಾರದಿಂದ ಅನುಮೋದನೆ ಪಡೆದ ಬಡಾವಣೆಗಳು, ಅವುಗಳಲ್ಲಿ ಎಷ್ಟು ನಿವೇಶನಗಳು ಇವೆ, ಸರ್ಕಾರದ ಆದೇಶಗಳು, ಆಯಾ ನಗರಾಭಿವೃದ್ಧಿ ಪ್ರಾಧಿಕಾರದ ನಿಯಮಗಳು ಮತ್ತಿತರ ಹೆಚ್ಚು ವಿವರಗಳು ಇವೆ. ಆದರೆ ಚಿಕ್ಕಬಳ್ಳಾಪುರ ಪುಟದಲ್ಲಿ ಮಾತ್ರ ಖಾಲಿ ಖಾಲಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT