ಮಕ್ಕಳಲ್ಲಿ ಲಿಂಗ ತಾರತಮ್ಯ ಸಲ್ಲದು: ಟಿ.ಸಿ.ಪೂರ್ಣಿಮಾ

7
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ವತಿಯಿಂದ ‘ಹೆಣ್ಣು ಮಕ್ಕಳಿಗೆ ರಕ್ಷಣೆ: ಶಿಕ್ಷಣ’ ಕಾರ್ಯಕ್ರಮ

ಮಕ್ಕಳಲ್ಲಿ ಲಿಂಗ ತಾರತಮ್ಯ ಸಲ್ಲದು: ಟಿ.ಸಿ.ಪೂರ್ಣಿಮಾ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಆಧುನಿಕ ಸಮಾಜದಲ್ಲಿಯೂ ಗಂಡು ಹೆಣ್ಣಿನ ನಡುವೆ ತಾರತಮ್ಯ ಸಲ್ಲದು. ಸರ್ಕಾರಗಳು ಹೆಣ್ಣು ಮಕ್ಕಳಿಗಾಗಿ ಜಾರಿ ಮಾಡಿರುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸ್ತ್ರೀ ಸಮುದಾಯ ಸಬಲವಾಗಬೇಕು’ ಎಂದು ಕೇಂದ್ರ ಸರ್ಕಾರದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಮೈಸೂರು ಕಚೇರಿ ಸಹಾಯಕ ನಿರ್ದೇಶಕಿ ಟಿ.ಸಿ.ಪೂರ್ಣಿಮಾ ಹೇಳಿದರು.

ತಾಲ್ಲೂಕು ಪಂಚಾಯಿತಿ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಮೈಸೂರು, ಮಂಡಿಕಲ್ಲು ಗ್ರಾಮ ಪಂಚಾಯಿತಿ, ಶಿಶು ಅಭಿವೃದ್ಧಿ ಯೋಜನೆ ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ತಾಲ್ಲೂಕಿನ ಮಂಡಿಕಲ್ಲು ಹೋಬಳಿ ಕೇಂದ್ರದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಆಯೋಜಿಸಿದ್ದ ‘ಹೆಣ್ಣು ಮಕ್ಕಳಿಗೆ ರಕ್ಷಣೆ: ಶಿಕ್ಷಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹೆಣ್ಣು ಮಗುವನ್ನು ರಕ್ಷಿಸಿ, ಓದಿಸಿ ಎಂಬ ವಿಶಿಷ್ಟ ಕಾರ್ಯಕ್ರಮ ರೂಪಿಸಿದೆ. ಯಾವ ಸಮಾಜ ಹೆಣ್ಣುಮಕ್ಕಳನ್ನು ಉತ್ತಮ ರೀತಿಯಲ್ಲಿ ಗೌರವದಿಂದ ನಡೆಸಿಕೊಳ್ಳುತ್ತದೆಯೋ ಅಂತಹ ಸಮಾಜ ವಿವೇಕದಿಂದ ಕೂಡಿದ ಸಮಾಜವಾಗಿ ಹೊರಹೊಮ್ಮುತ್ತದೆ. ಯಾವುದೇ ಕಾರಣಕ್ಕೂ ಗಂಡು ಮತ್ತು ಹೆಣ್ಣು ಮಗುವಿನ ನಡುವೆ ಬೇಧಭಾವ ಮಾಡುವುದು ಸಲ್ಲದು’ ಎಂದು ತಿಳಿಸಿದರು.

‘ಮನೆಯಲ್ಲಿರುವ ಹೆಣ್ಣು ಮಕ್ಕಳು ಮಾತ್ರವಲ್ಲದೆ ಸುತ್ತಮುತ್ತಲಿನ ಹೆಣ್ಣು ಮಕ್ಕಳ ಬಗ್ಗೆಯೂ ಗೌರವ ಇರಬೇಕು. ಒಂದು ವೇಳೆ ಹೆಣ್ಣು ಮಕ್ಕಳನ್ನು ನಿರ್ಲಕ್ಷಿಸುವ ಪ್ರವೃತ್ತಿ ಹೀಗೆ ಮುಂದುವರೆದಲ್ಲಿ ಮುಂದೊಂದು ದಿನ ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಮತ್ತಷ್ಟು ಕೊರತೆಯಾಗಿ ತೊಂದರೆಯಾಗಿ ಇಡೀ ಸಮಾಜ ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಹೇಳಿದರು.

ಸ್ಥಳೀಯ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ.ಚೈತನ್ಯ ಮಾತನಾಡಿ, ‘ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದಲ್ಲಿ ಅವರು ತಮ್ಮನ್ನು ತಾವು ಹೇಗೆ ರಕ್ಷಣೆ ಮಾಡಿಕೊಳ್ಳಬಹುದು ಎಂಬುದು ಕಲಿಯುತ್ತಾರೆ. ಹೆಣ್ಣು ಮಕ್ಕಳು ದುರ್ಬಲರಲ್ಲ. ಆದರೆ, ಹೆಣ್ಣುಮಕ್ಕಳು ತರಕಾರಿಗಳು ಸೇರಿದಂತೆ ಉತ್ತಮ ಪೌಷ್ಟಿಕಕ ಆಹಾರವನ್ನು ಸೇವಿಸಬೇಕು. ಆರೋಗ್ಯವಂತ ಮಕ್ಕಳಿಂದ ಆರೋಗ್ಯಕರ ಸಮಾಜಕ್ಕೆ ದಾರಿಯಾಗುತ್ತದೆ’ ಎಂದು ತಿಳಿಸಿದರು.

ಹೆಣ್ಣು ಮಕ್ಕಳ ಆರೋಗ್ಯ ಸಂರಕ್ಷಣೆ ಮತ್ತು ಸ್ವಚ್ಛತೆ ಕುರಿತು ಉಪನ್ಯಾಸ ನೀಡಲಾಯಿತು. ಯಕ್ಷಗಾನದ ಮೂಲಕ ಆರೋಗ್ಯ ಜಾಗೃತಿ ಮತ್ತು ಮಹಿಳಾ ಸಬಲೀಕರಣ ಹಾಗೂ ಹೆಣ್ಣು ಮಕ್ಕಳ ಶಿಕ್ಷಣ, ಹೆಣ್ಣು ಭ್ರೂಣ ಹತ್ಯೆ ನಿಷೇಧದ ಕುರಿತು ಅರಿವು ಮೂಡಿಸಲಾಯಿತು. ಚಿತ್ರಕಲೆ ಮತ್ತು ಪೌಷ್ಟಿಕ ಆಹಾರ ತಯಾರಿಕೆಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಮಂಡಿಕಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ, ಪ್ರೌಢಶಾಲೆ ಮುಖ್ಯಶಿಕ್ಷಕ ಕೃಷ್ಣಮೂರ್ತಿ, ಪಿಡಿಒ ಮುನಿರಾಜು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ್, ಸದಸ್ಯ ರಾಮಕೃಷ್ಣ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !