ಎರಡೇ ತಿಂಗಳಲ್ಲಿ 47 ಬಾಲ್ಯ ವಿವಾಹ ತಡೆ!

ಗುರುವಾರ , ಜೂಲೈ 18, 2019
29 °C

ಎರಡೇ ತಿಂಗಳಲ್ಲಿ 47 ಬಾಲ್ಯ ವಿವಾಹ ತಡೆ!

Published:
Updated:
Prajavani

ಚಿಕ್ಕಬಳ್ಳಾಪುರ: ‘ಜಿಲ್ಲೆಯಲ್ಲಿ ಬಾಲ್ಯವಿವಾಹವನ್ನು ತಡೆಗಟ್ಟಲು ಜಿಲ್ಲಾಡಳಿತ ಸೂಕ್ತಕ್ರಮ ಕೈಗೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ಏಪ್ರಿಲ್–ಮೇ ತಿಂಗಳಲ್ಲಿ 47 ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿದೆ’ ಎಂದು ಜಿಲ್ಲಾಧಿಕಾರಿ ಅನಿರುದ್ ಶ್ರವಣ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಸಕ್ತ ಸಾಲಿನ ಮೇ ಅಂತ್ಯದವರೆಗೆ 51 ಬಾಲ್ಯ ವಿವಾಹಗಳ ಬಗ್ಗೆ ದೂರುಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 45 ಬಾಲಕಿಯರು ಮತ್ತು 2 ಬಾಲಕರ ಬಾಲ್ಯ ವಿವಾಹವನ್ನು ತಡೆ ಹಿಡಿಯಲಾಗಿದೆ. ನಾಲ್ಕು ಬಾಲಕಿಯರ ಬಾಲ್ಯ ವಿವಾಹಗಳು ನಡೆದಿವೆ ಎಂದು ವರದಿಯಾಗಿದೆ’ ಎಂದು ತಿಳಿಸಿದರು.

‘ಬಾಗೇಪಲ್ಲಿಯಲ್ಲಿ ವರದಿಯಾದ 16 ಪ್ರಕರಣಗಳಲ್ಲಿ ಒಬ್ಬ ಬಾಲಕಿಗೆ ವಿವಾಹವಾಗಿದೆ. 15 ಬಾಲಕಿಯರನ್ನು ರಕ್ಷಣೆ ಮಾಡಲಾಗಿದೆ. ಗೌರಿಬಿದನೂರಿನಲ್ಲಿ 18, ಚಿಕ್ಕಬಳ್ಳಾಪುರದಲ್ಲಿ 3, ಶಿಡ್ಲಘಟ್ಟದಲ್ಲಿ 11, ಚಿಂತಾಮಣಿಯಲ್ಲಿ 3 ಪ್ರಕರಣಗಳ ಬಗ್ಗೆ ದೂರುಗಳನ್ನು ಸ್ವೀಕರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿ 4 ಪ್ರಕರಣಗಳನ್ನು ದಾಖಲು ಮಾಡಲಾಗಿದೆ’ ಎಂದರು.

‘2018-–19ನೇ ಸಾಲಿನಲ್ಲಿ 58 ದೂರಗಳನ್ನು ಸ್ವೀಕರಿಸಲಾಗಿತ್ತು. ಆ ಪೈಕಿ ಒಬ್ಬ ಬಾಲಕ ಹಾಗೂ 53 ಬಾಲಕಿಯರ ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿದೆ. 4 ಬಾಲ್ಯ ವಿವಾಹಗಳು ನಡೆದಿವೆ. ಅವುಗಳಲ್ಲಿ ಪೊಲೀಸ್ ಠಾಣೆಯಲ್ಲಿ 3 ಪ್ರಕರಣಗಳನ್ನು ದಾಖಲಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲೇ ಹೆಚ್ಚಾಗಿ ಬಾಲ್ಯ ವಿವಾಹಗಳು ನಡೆಯುತ್ತಿರುವುದು ಕಂಡುಬಂದಿದೆ’ ಎಂದು ಹೇಳಿದರು.

‘ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಹಾಗೂ ಪೊಲೀಸ್ ಸಿಬ್ಬಂದಿಗೆ ಬಾಲ್ಯ ವಿವಾಹ ತಡೆಗಟ್ಟಲು ವಿಶೇಷ ಸೂಚನೆ ನೀಡಲಾಗಿದೆ. ಇದು ಕೇವಲ ಒಂದು ಇಲಾಖೆಯ ಜವಾಬ್ದಾರಿಯಲ್ಲ. ಇದಕ್ಕೆ ಎಲ್ಲಾ ಇಲಾಖೆಗಳ ಹಾಗೂ ಸಾರ್ವಜನಿಕರ ಸಹಕಾರದ ಅಗತ್ಯವಿದೆ. ಎಲ್ಲಿಯಾದರೂ ಬಾಲ್ಯ ವಿವಾಹ ನಡೆಯುತ್ತಿರುವುದು ತಿಳಿದು ಬಂದಲ್ಲಿ ಸಾರ್ವಜನಿಕರು ಸಹಾಯವಾಣಿ 1098 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಸಂಗಪ್ಪ ಉಪಾಸೆ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !