ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯಿಂದ ಹದಗೆಟ್ಟ ಚಿಂತಾಮಣಿ ರಸ್ತೆಗಳು

ತಾಲ್ಲೂಕಿನಲ್ಲಿ ವಾಹನ ಸವಾರರ ಹರ ಸಾಹಸ
Last Updated 3 ಸೆಪ್ಟೆಂಬರ್ 2022, 3:54 IST
ಅಕ್ಷರ ಗಾತ್ರ

ಚಿಂತಾಮಣಿ: ಕಳೆದ ನಾಲೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಗರ ಹಾಗೂ ತಾಲ್ಲೂಕಿನ ಹಲವೆಡೆ ರಸ್ತೆಗಳು ಜಲಾವೃತ್ತಗೊಂಡಿದ್ದು, ವಾಹನ ಸವಾರರು ಸಂಚರಿಸಲು ಹರ ಸಾಹಸ ಪಡಬೇಕಿದೆ.

ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ನಗರದ ರಸ್ತೆಗಳು, ಹಾಗೂ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ರಸ್ತೆಗಳು ಕೆರೆಗಳಂತೆ ಆಗಿರುವುದರಿಂದ ವಾಹನ ಸವಾರರು ಮತ್ತು ಪಾದಾಚಾರಿಗಳು ಸಂಚಾರಕ್ಕೆ ಪರದಾಡುವಂತಾಗಿದೆ. ರಸ್ತೆಯ ಇಕ್ಕೆಲಗಳ ಬೀದಿ ವ್ಯಾಪಾರಿಕ್ಕೂ ಅಡ್ಡಿಯಾಗಿದೆ.

ನಗರದಲ್ಲಿ ನಾಲ್ಕೈದು ದಿನಗಳಿಂದ ಪ್ರತಿನಿತ್ಯ ಸುರಿಯುತ್ತಿರುವ ಮಳೆ ವಾಹನ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ನಗರದಲ್ಲಿ ಮಳೆಯ ನೀರು ಸರಾಗವಾಗಿ ಹರಿದುಹೋಗಲು ಸಮರ್ಪಕ ಕಾಲುವೆಗಳ ವ್ಯವಸ್ಥೆ ಇಲ್ಲ. ಇರುವ ಕಾಲುವೆಗಳು ಕಸಕಡ್ಡಿಗಳಿಂದ ತುಂಬಿ ನೀರು ಮುಂದಕ್ಕೆ ಹರಿಯುತ್ತಿಲ್ಲ. ಹೀಗಾಗಿ ಮಳೆಯ ನೀರು ರಸ್ತೆಗಳ ಮೇಲೆ ಹೊಳೆಯಂತೆ ಹರಿಯುತ್ತಿದೆ. ಗುಂಡಿ ಬಿದ್ದ ರಸ್ತೆಗಳಲ್ಲಿ ಕೆರೆಯಂತೆ ನೀರು ನಿಂತಿದೆ.

ತಾಲ್ಲೂಕಿನ ಕೆರೆಗಳು ಕೋಡಿ ಬೀಳತೊಡಗಿವೆ. ಗ್ರಾಮೀಣ ಭಾಗದ ಸಂಪರ್ಕ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ. ರಸ್ತೆಗಳೆಲ್ಲ ಕಿತ್ತುಹೋಗಿವೆ. ಮಳೆ ಬಂದಾಗ ಗುಂಡಿಗಳಲ್ಲಿ ನೀರು ತುಂಬಿಕೊಂಡು ಜನರು, ವಾಹನಗ ಸವಾರರು ಸಂಚಾರಕ್ಕೆ ಹರಸಾಹಸ ಪಡಬೇಕಾಗಿದೆ. ದ್ವಿಚಕ್ರವಾಹನ ಸವಾರರು ಅಪಘಾತಕ್ಕೆ ಈಡಾಗಿರುವ ಪ್ರಕರಣಗಳು ನಡೆದಿವೆ.

ಅಧಿಕಾರಿಗಳ ವಿರುದ್ಧ ಅಸಮಾಧಾನ

ನಗರದ ಎಂ.ಜಿ ರಸ್ತೆಯಲ್ಲಿ ನೀರು ಸರಾಗವಾಗಿ ಹರಿಯದ ಕಾರಣ ರಸ್ತೆಯ ಮೇಲೆ ನೀರು ನಿಂತು ವಾಹನ ಸವಾರರು ಹಾಗೂ ಅಂಗಡಿ ವ್ಯಾಪಾರಸ್ಥರು ಸಂಚಾರಕ್ಕೆ ಪರದಾಡುತ್ತಿದ್ದಾರೆ. ಎಂ.ಜಿ ರಸ್ತೆಯ ಬಂಬೂಬಜಾರ್ ಮುಂಭಾಗದ ಜೋಡಿ ರಸ್ತೆಯಲ್ಲಿ, ಕಾರುಪಾಕುಲ ಕಲ್ಯಾಣ ಮಂಟಪದ ಬಳಿ, ಮಳೆಯ ನೀರು ಸರಾಗವಾಗಿ ಹರಿಯದೆ ರಸ್ತೆಯ ಮೇಲೆ ನೀರು ಹರಿದು, ಕೆರೆ ಕುಂಟೆಗಳಂತಾಗಿ ಕೆಲವು ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ. ಚರಂಡಿಗಳನ್ನು ಸ್ವಚ್ಛ ಮಾಡಿ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕೆಂದು ಒತ್ತಾಯಿಸಿ ಹಲವು ಬಾರಿ ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಗರಸಭೆ ವಿರುದ್ಧ ಅಂಗಡಿ ಮಾಲಿಕರು ಅಸಮಾಧಾನ ವ್ಯಕ್ತಪಡಿಸಿದರು.

ಕೆಸರುಗದ್ದೆಗಳಾದ ರಸ್ತೆ

ಗ್ರಾಮಗಳಲ್ಲಿಯೂ ಸಹ ರಸ್ತೆಗಳು ಕೆಸರುಗದ್ದೆಗಳಾಗಿವೆ. ಜನರು ಜಾನುವಾರುಗಳು ಹೆಜ್ಜೆ ಇಡಲು ಸಹ ಭಯಪಡುವಂತಾಗಿದೆ. ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಸರಿಯಾದ ರಸ್ತೆಗಳಿಲ್ಲ. ಉತ್ತಮ ಚರಂಡಿ ವ್ಯವಸ್ಥೆ ಇಲ್ಲದೆ ನೀರು ಬೀದಿಗಳಲ್ಲಿ ನಿಂತಿದೆ. ಗ್ರಾಮೀಣ ಜನರ ದಿನನಿತ್ಯದ ಕೆಲಸಗಳು ಹಾಗೂ ಚಟುವಟಿಕೆಗಳಿಗೂ ತೊಂದರೆಯಾಗಿದೆ. ಪ್ರತಿನಿತ್ಯ ಮಳೆ ಆಗುತ್ತಿರುವುದರಿಂದ ತೇವಾಂಶ ಹೆಚ್ಚಾಗಿದ್ದು, ಕೃಷಿ ಚಟುವಟಿಕೆಗೂ ಅಡ್ಡಿಯಾಗಿದೆ. ರೇಷ್ಮೆ ಹುಳುಗಳ ಸಾಕಾಣಿಕೆದಾರರಿಗೆ ಸೊಪ್ಪು ತರವುದಕ್ಕೆ ಹಾಗೂ ಹುಳು ಹಣ್ಣಾಗಿರುವವರಿಗೆ ಸಂಕಷ್ಟ ಎದುರಿಸುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT