ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂತಾಮಣಿ: ಕೈವಾರ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಯಾವಾಗ

ಸಮುದಾಯ ಆರೋಗ್ಯ ಕೇಂದ್ರದ ನಿರೀಕ್ಷೆ
Published 2 ಸೆಪ್ಟೆಂಬರ್ 2024, 6:14 IST
Last Updated 2 ಸೆಪ್ಟೆಂಬರ್ 2024, 6:14 IST
ಅಕ್ಷರ ಗಾತ್ರ

ಚಿಂತಾಮಣಿ: ಕೇಂದ್ರ ಮತ್ತು ರಾಜ್ಯ ಬಡವರ ಹಾಗೂ ಜನಸಾಮಾನ್ಯರ ಆರೋಗ್ಯ ರಕ್ಷಣೆಗಾಗಿ ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತವೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಸರ್ಕಾರಿ ಆಸ್ಪತ್ರೆ ಸುಧಾರಣೆಯಾಗಿಲ್ಲ. ಸ್ವಚ್ಛತೆ, ಸೌಲಭ್ಯಗಳ ಕೊರತೆ, ವೈದ್ಯರ ಮತ್ತು ಸಿಬ್ಬಂದಿಯ ಬದ್ಧತೆ ಕೊರತೆಯಿಂದ ಸರ್ಕಾರಿ ಆಸ್ಪತ್ರೆಗಳು ಸುಧಾರಣೆ ಆಗಿಲ್ಲ.

ಚಿಂತಾಮಣಿ ನಗರದಲ್ಲಿ ಒಂದು ಸಾರ್ವಜನಿಕ ಆಸ್ಪತ್ರೆ, ಒಂದು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಒಂದು ನಗರ ಆರೋಗ್ಯ ಕೇಂದ್ರ ಹಾಗೂ ಒಂದು ನಮ್ಮ ಕ್ಲಿನಿಕ್ ಕಾರ್ಯನಿರ್ವಹಿಸುತ್ತಿವೆ. ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಒಂದು ಸಮುದಾಯ ಆರೋಗ್ಯ ಕೇಂದ್ರ, 10 ಪ್ರಾಥಮಿಕ ಆರೋಗ್ಯ ಕೇಂದ್ರ, 2 ಹೊರವಲಯ ಚಿಕಿತ್ಸಾ ಕೇಂದ್ರಗಳಿವೆ. ನಗರದ ಆಸ್ಪತ್ರೆಗಳಲ್ಲಿ ಸ್ವಲ್ಪ ಮಟ್ಟಿಗೆ ಸೌಲಭ್ಯಗಳಿದ್ದರೂ ವೈದ್ಯರ ಮತ್ತು ಸಿಬ್ಬಂದಿ ನಿರಾಸಕ್ತಿ, ಗೈರುಹಾಜರಿ ಮತ್ತಿತರ ಕಾರಣಗಳಿಂದ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.

ಅಪಘಾತ ಸಂದರ್ಭದಲ್ಲಿ ಗಾಯಾಳುಗಳು, ತುರ್ತು ಪ್ರಕರಣಗಳಲ್ಲಿ ರೋಗಿಗಳನ್ನು ಕರೆದೊಯ್ದರೆ ಪ್ರಥಮ ಚಿಕಿತ್ಸೆ ನೀಡಿ ದೂರದ ಬೆಂಗಳೂರು ಆಸ್ಪತ್ರೆಗಳು ಅಥವಾ ವೈದ್ಯಕೀಯ ಕಾಲೇಜುಗಳಿಗೆ ಕಳುಹಿಸುತ್ತಾರೆ. ಸುಮಾರು ಜನ ವೈದ್ಯರು, ತಜ್ಞರು ಇದ್ದಾರೆ. ಜವಾಬ್ದಾರಿ ವಹಿಸಿಕೊಂಡು ಚಿಕಿತ್ಸೆ ನೀಡುವುದರಲ್ಲಿ ಆಸಕ್ತಿ ವಹಿಸುವುದಿಲ್ಲ. ದಾಖಲು ಮಾಡಿಕೊಂಡು ಪ್ರಥಮ ಚಿಕಿತ್ಸೆ ನೀಡುವುದು, ಹೊರಗಡೆ ಕಳುಹಿಸುವುದು ಸಾಮಾನ್ಯ ಎಂಬಂತಾಗಿದೆ.

ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೇಳುವಂತೆಯೇ ಇಲ್ಲ. ಒಬ್ಬ ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಾರೆ. ಅವರು ರಜೆ ಮೇಲೆ ತೆರಳಿದರೆ ಅಥವಾ ಇಲಾಖೆಯ ಸಭೆ ಸಮಾರಂಭಗಳಿಗೆ ತೆರಳಿದರೆ ರೋಗಿಗಳು ಕಾದು-ಕಾದು ವಾಪಸ್ ಹೋಗಬೇಕಾಗುತ್ತದೆ. ವೈದ್ಯರು ಸಿಗುತ್ತಾರೆ ಎಂಬ ನಂಬಿಕೆಯೇ ಇರುವುದಿಲ್ಲ. ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆ ಅಗತ್ಯವಿದೆ ಎನ್ನುತ್ತಾರೆ ಗ್ರಾಮೀಣ ಭಾಗದ ವೈದ್ಯ ಡಾ.ವೆಂಕಟೇಶ್.

ದಶಕಗಳ ಹಿಂದೆ ಪ್ರಾರಂಭವಾಗಿರುವ ಆಸ್ಪತ್ರೆಗಳು ಇಂದೂ ಅದೇ ರೀತಿಯಲ್ಲಿವೆ. ಸೂಕ್ತ ಸೌಲಭ್ಯಗಳನ್ನು ಒದಗಿಸಿ ಮೇಲ್ದರ್ಜೆಗೆ ಏರಿಸಿಲ್ಲ. ಜಿಲ್ಲೆಯಲ್ಲಿ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಮತ್ತು ಬಾಗೇಪಲ್ಲಿ ತಾಲ್ಲೂಕಿನ ಗೂಳೂರಿನಲ್ಲಿ ಮಾತ್ರ ಸಮುದಾಯ ಆರೋಗ್ಯ ಕೇಂದ್ರಗಳಿವೆ. ಸಾಕಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೆ ಏರಲು ಎಲ್ಲ ಅರ್ಹತೆಗಳನ್ನು ಹೊಂದಿದ್ದರೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಮೇಲ್ದರ್ಜೆಗೆ ಏರಿಲ್ಲ.

ತಾಲ್ಲೂಕಿನ ಕೈವಾರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವ ಕಳೆದ 10-12 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಬೇಕಾದರೆ ಸೂಕ್ತ ಕಟ್ಟಡವಿರಬೇಕು. ಹೊರರೋಗಿಗಳ ಸಂಖ್ಯೆ ಮತ್ತು ಹೆರಿಗೆ ಸಂಖ್ಯೆ ಗಮನಿಸಲಾಗುತ್ತದೆ. ವೈದ್ಯರ ಮತ್ತು ಸಿಬ್ಬಂದಿಗೆ ವಸತಿ ಗೃಹಗಳಿರಬೇಕು. ಎಲ್ಲ ಅರ್ಹತೆಗಳು ಹೊಂದಿರುವುದರಿಂದ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲು ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಮಚಂದ್ರಾರೆಡ್ಡಿ ತಿಳಿಸಿದರು.

ತಾಲ್ಲೂಕಿನಲ್ಲಿ ಕೈವಾರವು ರಾಜ್ಯದಲ್ಲಿ ಪ್ರಸಿದ್ಧ ಧಾರ್ಮಿಕ ಕೇಂದ್ರ ಹಾಗೂ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಕೈವಾರ ಹೋಬಳಿ ಕೇಂದ್ರವಾಗಿದ್ದು ತಾಲ್ಲೂಕಿನಲ್ಲಿ ದೊಡ್ಡ ಗ್ರಾಮ ಪಂಚಾಯಿತಿ ಆಗಿದೆ. ಹೆಚ್ಚಿನ ಜನಸಂಖ್ಯೆ, ವ್ಯಾಪಾರ ವಹಿವಾಟು ಹಾಗೂ ಪ್ರವಾಸಿ ಕೇಂದ್ರವಾಗಿರುವ ಕೈವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕೈವಾರ, ಮಸ್ತೇನಹಳ್ಳಿ, ಪೆರಮಾಚನಹಳ್ಳಿ ಗ್ರಾಮ ಪಂಚಾಯಿತಿಗಳ 32 ಗ್ರಾಮಗಳಿವೆ. 2011 ಜನಗಣತಿ ಆಧಾರದ ಮೇಲೆ ಸುಮಾರು 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಇಷ್ಟೊಂದು ಗ್ರಾಮಗಳು ಮತ್ತು ಜನಸಂಖ್ಯೆಗೆ ಕೇವಲ ಒಬ್ಬ ವೈದ್ಯರು ಮಾತ್ರ ಆರೋಗ್ಯ ರಕ್ಷಣೆ ಹೇಗೆ ಮಾಡಲು ಸಾಧ್ಯ?

2012ರಲ್ಲಿ ಅಂದಿನ ಶಾಸಕ ಡಾ.ಎಂ.ಸಿ.ಸುಧಾಕರ್ ಕೈವಾರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲು ಪ್ರಸ್ತಾವ ಸಲ್ಲಿಸಿದ್ದರು. ಅಗತ್ಯವಾದ ಎಲ್ಲ ದಾಖಲೆ ಪುರಾವೆಗಳೊಂದಿಗೆ ಆರೋಗ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ನಂತರ 2013, 2018ರ ಚುನಾವಣೆಯಲ್ಲಿ ಅವರು ಸೋತಿದ್ದರಿಂದ ಪ್ರಸ್ತಾವನೆ ನನೆಗುದಿಗೆ ಬಿದ್ದಿತ್ತು. ಈಗ ಅವರು ಶಾಸಕರಾಗಿ, ಸಚಿವರಾಗಿದ್ದಾರೆ. ಈಗಲಾದರೂ ಸಮುದಾಯ ಆರೋಗ್ಯ ಕೇಂದ್ರವಾಗಿ ಬದಲಾಗುವುದೇ ಎಂದು ಜನಸಾಮಾನ್ಯರು ಕಾಯುತ್ತಿದ್ದಾರೆ.

ತಾಲ್ಲೂಕು ಕೇಂದ್ರ ಚಿಂತಾಮಣಿಯ ನಂತರ ಹೆಚ್ಚು ಜನಸಂಖ್ಯೆ ಮತ್ತು ವಸತಿ ಪ್ರದೇಶವನ್ನು ಹೊಂದಿರುವ ಕೈವಾರ ಪ್ರಾಥಮಿಕ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಅಗತ್ಯವಾದ ಎಲ್ಲ ಸೌಲಭ್ಯ ಮತ್ತು ಅವಕಾಶಗಳಿವೆ. ತಾಲ್ಲೂಕು ಕೇಂದ್ರ ಚಿಂತಾಮಣಿ ಸಹ ವೇಗವಾಗಿ ಬೆಳೆಯುತ್ತಿದ್ದು 15 ಕಿ.ಮೀ ದೂರದಲ್ಲಿದೆ.

ಕೈವಾರದಲ್ಲಿ ಯೋಗಿನಾರೇಯಣ ಮಠ, ಅಮರನಾರೇಯಣ ದೇವಸ್ಥಾನ, ಭೀಮಲಿಂಗೇಶ್ವರ ದೇವಸ್ಥಾನ, ನರಸಿಂಹಸ್ವಾಮಿ ಗುಹೆ, ವೈಕುಂಠ ಧಾರ್ಮಿಕ ಕೇಂದ್ರಗಳು ತಪೋವನ, ಕೈವಾರ ಬೆಟ್ಟ ಪ್ರವಾಸಿ ತಾಣಗಳಿವೆ. ಪ್ರತಿನಿತ್ಯ ನೂರಾರು ಸಂಖ್ಯೆಯ ಪ್ರವಾಸಿಗಳು ಮತ್ತು ಭಕ್ತರು ಆಗಮಿಸುತ್ತಾರೆ. ಶನಿವಾರ ಭಾನುವಾರ, ಹಬ್ಬ ಹರಿದಿನಗಳಲ್ಲಿ ಸಾವಿರಾರು ಜನರು ಭೇಟಿ ನೀಡುತ್ತಾರೆ.

ಜನಭರಿತ ಸ್ಥಳಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆರೋಗ್ಯ ರಕ್ಷಣೆ ನೀಡಲು ಸಾಧ್ಯವೇ? ಒಬ್ಬ ವೈದ್ಯರು ಹಗಲು ಪಾಳಿಯಲ್ಲಿ ಮಾತ್ರ ಕೆಲಸ ಮಾಡುತ್ತಾರೆ. ರಾತ್ರಿ ವೇಳೆಯಲ್ಲಿ ವೈದ್ಯರೇ ಇರುವುದಿಲ್ಲ. ರಾತ್ರಿ ಹಾಗೂ ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಸೇವೆ ದೊರೆಯುವುದಿಲ್ಲ. ಹೀಗಾಗಿ ಕೈವಾರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ಜನರು ಒತ್ತಾಯಿಸುತ್ತಾರೆ.

ಕೈವಾರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೊರರೋಗಿಗಳು ಮತ್ತು ಹೆರಿಗೆಗೆ ಗರ್ಭಿಣಿಯರು ಆಗಮಿಸುತ್ತಾರೆ. ಒಬ್ಬ ವೈದ್ಯರಿಂದ ಆರೋಗ್ಯ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ

-ವೆಂಕಟರೆಡ್ಡಿ ಮಸ್ತೇನಹಳ್ಳಿ

ಕೈವಾರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವ ದಶಕದಿಂದ ನನೆಗುದಿಗೆ ಬಿದ್ದಿದೆ. ವೈದ್ಯಕೀಯ ಸೌಲಭ್ಯ ಒದಗಿಸಲು ಸಮುದಾಯ ಆರೋಗ್ಯ ಕೇಂದ್ರ ಬೇಕು

-ಮಂಜುನಾಥರೆಡ್ಡಿ ಗ್ರಾ.ಪಂ ಸದಸ್ಯ

ಕೈವಾರ ಹೋಬಳಿ ಕೇಂದ್ರವಾಗಿದ್ದು ಜನಸಂದಣಿ ಹೆಚ್ಚಾಗಿರುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸಾರ್ವಜನಿಕರಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ದೊರೆಯುತ್ತಿಲ್ಲ. ಕೂಡಲೇ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು

- ಅಮರನಾಥ್ ಹಿರಿಯ ನಾಗರಿಕ ಕೈವಾರ

ಕೈವಾರ ಪ್ರಾಥಮಿಕ ಆರೋಗ್ಯ ಕೇಂದ್ರವು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಲು ಎಲ್ಲ ಅರ್ಹತೆ ಅಗತ್ಯ ಸೌಲಭ್ಯಗಳನ್ನು ಹೊಂದಿದೆ. ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ

-ಡಾ.ರಾಮಚಂದ್ರಾರೆಡ್ಡಿ ತಾ.ಆರೋಗ್ಯಾಧಿಕಾರಿ ಚಿಂತಾಮಣಿ

ಏನೇನು ಸೌಲಭ್ಯ ?

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬ ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಾರೆ. ಸಮುದಾಯ ಆರೋಗ್ಯ ಕೇಂದ್ರವಾದರೆ ಪ್ರಾಥಮಿಕ ಮೂರು ತಜ್ಞ ವೈದ್ಯರ ಹುದ್ದೆಗಳು ಸೃಷ್ಠಿಯಾಗುತ್ತವೆ. ಮಕ್ಕಳ ತಜ್ಞ ಸ್ತ್ರೀರೋಗ ತಜ್ಞ ಅರಿವಳಿಕೆ ತಜ್ಞರು ಜತೆಗೆ ಒಬ್ಬ ಮೆಡಿಕಲ್ ಆಫೀಸರ್ ಒಬ್ಬ ಡೆಂಟಿಸ್ಟ್ ಇರುತ್ತಾರೆ. ನರ್ಸ್ ಮತ್ತು ಸಿಬ್ಬಂದಿಯ ಸಂಖ್ಯೆಯು ಹೆಚ್ಚಾಗುತ್ತದೆ. ದಿನದ 24 ಗಂಟೆಯೂ ಆರೋಗ್ಯ ಸೇವೆ ಸಿಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT