ಮಂಗಳವಾರ, ನವೆಂಬರ್ 30, 2021
21 °C
ಬೆಳೆ ಸಮೀಕ್ಷೆ ಅವಧಿ ಸೆ.24ರವರೆಗೂ ವಿಸ್ತರಣೆ

ಚಿಂತಾಮಣಿ: ಚುರುಕಾಗುತ್ತಿದೆ ಬೆಳೆ ಸಮೀಕ್ಷೆ; ಶೇ 23ರಷ್ಟು ಸಾಧನೆ

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಕೃಷಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಮುಂಗಾರು ಬೆಳೆಯ ‘ಸ್ವಯಂ ಬೆಳೆ ಸಮೀಕ್ಷೆ’ಯಲ್ಲಿ ಚಿಂತಾಮಣಿ ತಾಲ್ಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯ ರೈತರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ತಾಲ್ಲೂಕಿನಲ್ಲಿ ಈ ಕಾರ್ಯ ಚುರುಕುಗೊಂಡಿದೆ.

ಕೃಷಿ ಇಲಾಖೆಯು ತಾಲ್ಲೂಕಿನಲ್ಲಿ 1,47,918 ತಾಕುಗಳನ್ನು ಗುರುತಿಸಿದೆ. ಈವರೆಗೆ 35,016 ತಾಕುಗಳ ಸಮೀಕ್ಷೆ ಮುಗಿದಿದ್ದು, ಶೇ 23.67ರಷ್ಟು ಸಾಧನೆಯಾಗಿದೆ. ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲಿ ಶೇ 14ರಿಂದ 15ರಷ್ಟು ಮಾತ್ರ ಸಾಧನೆಯಾಗಿದೆ. ಸ್ವಯಂ ಬೆಳೆ ಸಮೀಕ್ಷೆಗೆ ರೈತರಿಗೆ ಸಹಕಾರ ನೀಡಲು ತಾಲ್ಲೂಕಿನಲ್ಲಿ 170 ತರಬೇತಿ ಪಡೆದ ವ್ಯಕ್ತಿಗಳನ್ನು ನೇಮಕ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೆಶಕ ಶ್ರೀನಿವಾಸ್ ತಿಳಿಸಿದರು.

ಪಹಣಿಯಲ್ಲಿ ಬೆಳೆ ಮಾಹಿತಿ ಸರಿಯಾಗಿ ನಮೂದಾಗದ ಕಾರಣ ಬರಗಾಲದ ಸಂದರ್ಭದಲ್ಲಿ ಪರಿಹಾರ, ಬೆಳೆ ವಿಮೆ, ಸರ್ಕಾರಿ ಸೌಲಭ್ಯಗಳು, ಕನಿಷ್ಠ ಬೆಂಬಲ ಬೆಲೆ ಯೋಜನೆಗಳಿಂದ ರೈತರು ವಂಚಿತರಾಗುತ್ತಿದ್ದರು. ಇದನ್ನು ತಪ್ಪಿಸಿ ಪಹಣಿಯಲ್ಲಿ ನಿಖರವಾದ ಬೆಳೆ ಮಾಹಿತಿಯ ವಿವರಗಳನ್ನು ನಮೂದಿಸುವ ಕಾರಣದಿಂದ ರಾಜ್ಯ ಸರ್ಕಾರ ‘ಬೆಳೆ ಸಮೀಕ್ಷೆ 2020-21’ ಎಂಬ ಮೊಬೈಲ್ ಆ್ಯಪ್ ಜಾರಿಗೆ ತಂದಿದೆ. ಆ. 24ರ ಒಳಗೆ ರೈತರೇ ತಮ್ಮ ಜಮೀನುಗಳಲ್ಲಿನ ಬೆಳೆಯ ಮಾಹಿತಿಯನ್ನು ದಾಖಲಿಸಲು ತಿಳಿಸಿತ್ತು. ನಂತರ ಗಡುವನ್ನು ಸೆ. 24ರವರೆಗೂ ವಿಸ್ತರಿಸಿದೆ.

ರೈತರಿಗೆ ಸಹಾಯ ಮಾಡಲು ಎರಡು ಗ್ರಾಮಗಳಿಗೆ ಒಬ್ಬರಂತೆ ಖಾಸಗಿ ಸಮೀಕ್ಷೆದಾರರನ್ನು ನೇಮಕ ಮಾಡಲಾಗಿದೆ. ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಮತ್ತು ಕಂದಾಯ ನಿರೀಕ್ಷಕರನ್ನು ಮೇಲ್ವಿಚಾರಕರನ್ನಾಗಿ ನೇಮಕ ಮಾಡಲಾಗಿದೆ. ತಾಂತ್ರಿಕ ಸಹಕಾರವನ್ನು ಕೃಷಿ ಇಲಾಖೆ ನೀಡುತ್ತಿದೆ. ರೈತರು ಮುಂದೆ ಬಂದು ಸಮೀಕ್ಷೆ ಅಪ್ಲೋಡ್ ಮಾಡಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

***

ಸ್ವಯಂ ಬೆಳೆ ಸಮೀಕ್ಷೆ ಇದೇ ಮೊದಲ ಬಾರಿ ಆಗಿರುವುದರಿಂದ ಸ್ವಲ್ಪ ಮಂದ ಗತಿಯಲ್ಲಿ ಸಾಗುತ್ತಿದೆ. ಸೆ. 24ರ ಒಳಗಾಗಿ ಸಮೀಕ್ಷೆ ಪೂರ್ಣಗೊಳಿಸಲಾಗುವುದು. ರೈತರು ಕಡ್ಡಾಯವಾಗಿ ಸಮೀಕ್ಷೆ ಅಪ್‌ಲೋಡ್ ಮಾಡಬೇಕು.

- ಶ್ರೀನಿವಾಸ್, ಸಹಾಯಕ ಕೃಷಿ ನಿರ್ದೇಶಕ

***

ಸ್ವಯಂ ಬೆಳೆ ಸಮೀಕ್ಷೆ ಪದ್ಧತಿ ಒಳ್ಳೆಯದು. ಆದರೆ, ಬಹುತೇಕ ರೈತರಿಗೆ ಮಾಹಿತಿ ಕೊರತೆ ಇದೆ. ಅಧಿಕಾರಿಗಳು ಈ ಕುರಿತು ಹೆಚ್ಚಿನ ಪ್ರಚಾರ ಮಾಡಬೇಕು

- ಸೀಕಲ್ ರಮಣಾರೆಡ್ಡಿ, ರೈತ ಮುಖಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು