ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಭಾರ ಮರೆತು, ಸಂತಸದಿ ಬೆರೆತು...

‘ಬ್ಯಾಗ್‌ ರಹಿತ ದಿನ’ಕ್ಕೆ ಪ್ರಾಯೋಗಿಕ ಚಾಲನೆ, ಒತ್ತಡ ಮರೆತು ಶಾಲೆಯಲ್ಲಿ ಖುಷಿಯಿಂದ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿದ ವಿದ್ಯಾರ್ಥಿಗಳು
Last Updated 23 ಜೂನ್ 2018, 10:31 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮಣಭಾರದ ಬ್ಯಾಗ್‌ ಹೊತ್ತು ಏದುಸಿರು ಬಿಡುತ್ತ ಬಸವಳಿದವರಂತೆ ಬರುತ್ತಿದ್ದ ಆ ಪುಟಾಣಿಗಳು ಜಿಂಕೆಯ ಮರಿಯಂತಾಗಿದ್ದರು. ನಿತ್ಯ ದುಗುಡ ತುಂಬಿರುತ್ತಿದ್ದ ಮೊಗಗಳಲ್ಲಿ ಸಂತಸ ಲಾಸ್ಯವಾಡುತ್ತಿತ್ತು. ದಿನವೂ ಪಾಠ, ಪ್ರವಚನಗಳಲ್ಲೇ ಕಳೆದು ಹೋಗುತ್ತಿದ್ದವರೆಲ್ಲ ಶನಿವಾರ ಗರಿಗೆದರಿದ ನವಿಲಿನಂತಾಗಿದ್ದರು. ತರಗತಿಯ ಕಟ್ಟುಪಾಡು ಇಲ್ಲದೆ ಆಡಿ ನಲಿದವರ ಸಂತಸಕ್ಕೆ ಪಾರವೇ ಇರಲಿಲ್ಲ.

ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಒಂದರಿಂದ ಎಂಟನೆ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಜಾರಿಗೆ ತಂದ ತಿಂಗಳಲ್ಲಿ ಎರಡು ಶನಿವಾರ ‘ಬ್ಯಾಗ್‌ ರಹಿತ ದಿನ’ದ ಮೊದಲ ದಿನವಾದ ಶನಿವಾರ ಶಾಲೆಗಳಲ್ಲಿ ವಿಶೇಷ ಕಳೆ ಮನೆ ಮಾಡಿತ್ತು.

ಮಕ್ಕಳು ಬ್ಯಾಗ್‌ ಇಲ್ಲದೆ ಸಂತಸದಿಂದ ಶಾಲೆಗಳತ್ತ ಸಂತಸದಿಂದ ಹೊರಟಿದ್ದು ಎಲ್ಲೆಡೆ ಕಂಡುಬಂತು. ಪಠ್ಯಪುಸ್ತಕಗಳು, ಬರೆಯುವ ಪುಸ್ತಕಗಳು, ಕಂಪಾಸ್‌ ಬಾಕ್ಸ್‌, ಊಟದ ಬುತ್ತಿ, ನೀರಿನ ಬಾಟಲಿ ಇತ್ಯಾದಿ ತುಂಬಿದ ಮಣಭಾರದ ಚೀಲ ಮನೆಯಲ್ಲಿಯೇ ಬಿಟ್ಟ ಬಂದ ಮಕ್ಕಳು ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಸಂತಸದಿಂದ ಕಾಲ ಕಳೆದರು.

ಕೆ.ಜಿಗಟ್ಟಲೇ ತೂಕದ ಬ್ಯಾಗ್‌ ಹೊತ್ತು ನಡೆಯಲು ಕಷ್ಟಪಡುತ್ತಿದ್ದ ಮಕ್ಕಳೆಲ್ಲ ಬೆಳಿಗ್ಗೆ ಅಕ್ಷರಶಃ ಹಕ್ಕಿಯಂತಾಗಿ ಶಾಲೆಗಳಿಗೆ ಬಂದರು. ದಿನವಿಡೀ ಪುಸ್ತಕ, ನೋಟ್‌ ಪುಸ್ತಕಗಳನ್ನು ತಿರುವಿ ಹಾಕುತ್ತ ಕುಳಿತುಕೊಳ್ಳುತ್ತಿದ್ದವರಲ್ಲಿ ಜಾತ್ರೆಯ ರಂಗು ಮನೆ ಮಾಡಿತ್ತು. ಶಿಕ್ಷಕರು ಹೇಳಿ ಕೊಟ್ಟ ಚಟುವಟಿಕೆಗಳನ್ನು, ಆಟಗಳಲ್ಲಿ ಬಲು ಉತ್ಸಾಹದಿಂದ ತೊಡಗಿಸಿಕೊಂಡಿದ್ದರು.

ಏಕರೂಪದ ಬೋಧನೆ, ಕಲಿಕಾ ವಿಧಾನಗಳೇ ಕಂಡುಬರುತ್ತಿದ್ದ ಶಾಲೆಗಳಲ್ಲಿ ಶನಿವಾರ ಭಿನ್ನ ಮತ್ತು ವೈವಿದ್ಯಮಯ ಚಿತ್ರಣಗಳು ಗೋಚರಿಸಿದವು. ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಅಂತರ ಕಡಿಮೆಗೊಳಿಸುವ, ಸೃಜನಶೀಲತೆಗೆ ವೇದಿಕೆ ಒದಗಿಸುವ ಮತ್ತು ದೈಹಿಕ, ಮಾನಸಿಕ ಉಲ್ಲಾಸ ಹೆಚ್ಚಿಸುವ ಚಟವಟಿಕೆಗಳು ಎಲ್ಲೆಡೆ ಗೋಚರಿಸಿದವು.

ಹೊಸ ಬದಲಾವಣೆಗೆ ತಕ್ಕಂತೆ ಸಿದ್ಧರಾಗಿ ಬಂದಿದ್ದ ಶಿಕ್ಷಕ ಸಮೂಹ ಕೂಡ ಏಕತಾನತೆ ತೊಡೆಯುವ ಹೊಸ ಚಟುವಟಿಕೆಗಳಲ್ಲಿ ಉತ್ಸಾಹದಿಂದಲೇ ತೊಡಗಿಸಿಕೊಂಡಿದ್ದರು. ಅನೇಕ ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಮಕ್ಕಳಂತಾಗಿ ದಿನ ಕಳೆದರು.

ಶನಿವಾರ ಶಾಲೆಗಳಲ್ಲಿ ಪಾಠ ಬೋಧನೆಯ ಬದಲು ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಆಶು ಭಾಷಣ, ಪದ್ಯ ರಚನೆ, ಆ ಪದ್ಯಕ್ಕೆ ರಾಗ ಸಂಯೋಜಿಸಿ ಹಾಡುವುದು, ವಿಜ್ಞಾನದ ಮಾದರಿಗಳ ಪ್ರದರ್ಶನ, ಆಟ ಆಡುವುದು ಸೇರಿದಂತೆ ಶೈಕ್ಷಣಿಕವಾಗಿ ಉಪಯುಕ್ತವಾದ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಲಾಗಿತ್ತು.

ನಗರದ ಮಸೀದಿ ರಸ್ತೆಯ ಸರ್ಕಾರಿ ಉರ್ದು ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಶೀಲನೆಗೆ ಬಂದಿದ್ದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಹಿರಿಯ ಉಪನ್ಯಾಸಕಿ ಸಯೀದಾ ಬೇಗಂ, ‘ಇದೊಂದು ಬಹಳ ಉತ್ತಮ ಕಾರ್ಯಕ್ರಮ. ಇದರಿಂದ ಪಠ್ಯೇತರ ಚಟುವಟಿಕೆಗಳಿಗೂ ಸಮಾನ ಆದ್ಯತೆ ಕೊಟ್ಟಂತಾಗುತ್ತದೆ. ಯಾವಾಗಲೂ ಪುಸ್ತಕಗಳು, ಪಾಠಗಳ ಮಧ್ಯ ಏಕತಾನತೆಯಲ್ಲಿ ಕಳೆದು ಹೋಗುವ ಮಕ್ಕಳು ಕೂಡ ಇವತ್ತು ತುಂಬಾ ಖುಷಿಯಾಗಿ, ಉತ್ಸಾಹದಿಂದ ಇರುವುದು ಕಂಡುಬಂತು’ ಎಂದು ಹೇಳಿದರು.

ನಿಜಕ್ಕೂ ಅತ್ಯದ್ಭುತವಾಗಿತ್ತು

ಈ ಹೊಸ ಪ್ರಯೋಗ ಅತ್ಯದ್ಭುತವಾಗಿದೆ. ಈ ದಿನಕ್ಕೆ ಬಹಳ ಕಾಲದಿಂದ ಕಾಯುತ್ತಿದ್ದೆ. ಶನಿವಾರ ಸಾಕಾಗಲಿಲ್ಲ ಎನಿಸಿತು. ನಮ್ಮ ಶಾಲೆಯಲ್ಲಿ ಅಗಸ್ತ್ಯ ಫೌಂಡೇಷನ್ ವತಿಯಿಂದ ಕಣ್ಣಿನ ಮಾದರಿಗಳ ಕುರಿತು ಪ್ರಾತ್ಯಕ್ಷಿಕೆ ಏರ್ಪಡಿಸಿದ್ದೆವು. ಆಶುಭಾಷಣ, ವಿವಿಧ ಆಟಗಳು ಸೇರಿದಂತೆ ಅನೇಕ ಪಠ್ಯೇತರ ಚಟುವಟಿಕೆಗಳನ್ನು ನಡೆಸಿದೆವು. ಮಕ್ಕಳು ಮತ್ತು ನಾವು ತುಂಬಾ ಸಂತಸಪಟ್ಟೆವು. ಇವತ್ತಿನ ಉತ್ಸಾಹ ನೋಡಿದರೆ ನಾಲ್ಕು ವಾರಗಳಿಗೆ ವಿಸ್ತರಿಸಿದರೆ ತುಂಬಾ ಚೆನ್ನಾಗಿರುತ್ತದೆ
-ಚಂದ್ರಕಲಾ, ಕರ್ನಾಟಕ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ

ಇಲಾಖೆಯ ಉತ್ತಮ ನಿರ್ಧಾರ

ಮಕ್ಕಳಲ್ಲಿರುವ ಒತ್ತಡ ನಿವಾರಣೆ ಮಾಡಿ, ಕಲಿಕಾ ವಾತಾವರಣ ಸೃಷ್ಟಿಸುವಲ್ಲಿ ಬ್ಯಾಗ್ ರಹಿತ ದಿನದ ಮಹತ್ವದಾಗಿದೆ. ನಿತ್ಯ ಮಕ್ಕಳು ಬ್ಯಾಗ್‌ನೊಂದಿಗೆ ಬಂದು ಬಂದು ಒತ್ತಡಕ್ಕೆ ಬೇಸರಗೊಂಡಿರುತ್ತಾರೆ. ತಿಂಗಳಲ್ಲಿ ಎರಡು ದಿನಗಳಾದರೂ ಅವರಿಗೆ ಮುಕ್ತವಾಗಿ ಬಂದು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ವಾತಾವರಣ ಕಲ್ಪಿಸಿಕೊಟ್ಟಿದ್ದು ನಿಜಕ್ಕೂ ಉತ್ತಮ ನಿರ್ಧಾರ
-ಕೃಷ್ಣಮೂರ್ತಿ, ಸರ್ಕಾರಿ ಉರ್ದು ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಮಸೀದಿ ರಸ್ತೆ

ತುಂಬಾ ಖುಷಿ ಎನಿಸಿತು

ಬ್ಯಾಗ್‌ ರಹಿತ ದಿನದ ಬಗ್ಗೆ ನನಗೆ ಕೂತಹಲವಿತ್ತು. ಇವತ್ತು ಮೊದಲ ಬಾರಿಗೆ ಬ್ಯಾಗ್‌ ಇಲ್ಲದೆ ಶಾಲೆಗೆ ಬರುವುದು ತುಂಬಾ ಖುಷಿ ಎನಿಸಿತು. ಮೊದಮೊದಲು ಮನೆಯಲ್ಲಿ ಅಪ್ಪ ಅಮ್ಮ ಇದನ್ನು ನಂಬಲಿಲ್ಲ. ಶಾಲೆಯಲ್ಲಿ ಯೋಗಾಭ್ಯಾಸ ಮಾಡಿ, ಆಟ ಆಡಿದೆವು. ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಭಯವಿಲ್ಲದೆ ಶಿಕ್ಷಕರೊಂದಿಗೆ ಸಂತಸದಿಂದ ಕಾಲ ಕಳೆದೆ
-ರೇಷ್ಮಾ, 5 ನೇ ತರಗತಿ ವಿದ್ಯಾರ್ಥಿನಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿ.ಬಿ ರಸ್ತೆ

ಸಮಯ ಸರಿದದ್ದೇ ಗೊತ್ತಾಗಲಿಲ್ಲ

ಬ್ಯಾಗ್ ಇಲ್ಲದೆ ಶಾಲೆಗೆ ಹೊರಟಾಗ ಮನೆಯಲ್ಲಿ ಶಾಲೆಗೆ ಚಕ್ಕರ್ ಹಾಕುತ್ತಿದ್ದೇನೆ ಎಂದು ಭಾವಿಸಿಕೊಂಡಿದ್ದರು. ಬಳಿಕ ಅವರಿಗೆ ಹೊಸ ಕಾರ್ಯಕ್ರಮದ ಬಗ್ಗೆ ಮನವರಿಕೆ ಮಾಡಿಕೊಟ್ಟೆ. ಬ್ಯಾಗ್ ಇಲ್ಲದೆ ಬಂದದ್ದು ನನಗಂತೂ ತುಂಬಾ ಖುಷಿ ಕೊಟ್ಟಿತು. ದಿನವೀಡಿ ವಿವಿಧ ಚಟುವಟಿಕೆಗಳಲ್ಲಿ ಕಳೆದಾಗ ಸಮಯ ಸರಿದದ್ದೇ ಗೊತ್ತಾಗಲಿಲ್ಲ. ಗೆಳೆಯರೊಂದಿಗೆ ಮೊದಲ ಬಾರಿ ಶಾಲೆಯಲ್ಲಿ ತುಂಬಾ ಜಾಲಿಯಾಗಿದ್ದೆ. ಈ ಕಾರ್ಯಕ್ರಮ ಚೆನ್ನಾಗಿದೆ. ನಾಲ್ಕು ಶನಿವಾರ ಇದೇ ರೀತಿಯಾಗಿರಲಿ
-ಗಣೇಶ್‌, 5 ನೇ ತರಗತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿಬಿ ರಸ್ತೆ

ವೈವಿಧ್ಯಮಯ ಕಾರ್ಯ ಚಟುವಟಿಕೆಗಳ ಮೂಲಕ ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ ಗುಣಾತ್ಮಕ ಕಲಿಕೆ ಉಂಟು ಮಾಡುವ ನಿಟ್ಟಿನಲ್ಲಿ ‘ಬ್ಯಾಗ್‌ ರಹಿತ ದಿನ’ ಜಾರಿಗೆ ತರಲಾಗಿದೆ
-ಆರ್.ಶಿವಣ್ಣ ರೆಡ್ಡಿ,ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೆಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT