ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ಯಾರೆಂಟಿ’ಗಾಗಿ ‌ಬಿಪಿಎಲ್ ಕಾರ್ಡ್ ಮೊರೆ?

ಜಿಲ್ಲೆಯಲ್ಲಿ ಬಾಕಿ ಇವೆ 5,691 ಅರ್ಜಿಗಳು; ಬಿಪಿಎಲ್ ಪಡಿತರ ಚೀಟಿಗೆ ಬೇಡಿಕೆ
Published 26 ಮೇ 2023, 20:00 IST
Last Updated 26 ಮೇ 2023, 20:00 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಐದು ಗ್ಯಾರೆಂಟಿಗಳಿಗೆ ಮಾನದಂಡಗಳು ಅನ್ವಯವಾಗುವ ಸಾಧ್ಯತೆ ಹೆಚ್ಚಿದೆ. ಬಡತನ ರೇಖೆಗಿಂತ ಕೆಳಗಿರುವವರ ಮಾನದಂಡವನ್ನು ಅನುಸರಿಸುವುದೇ ಎನ್ನುವ ಚರ್ಚೆಗಳು ನಡೆದಿವೆ. ಬಿಪಿಎಲ್ ಪಡಿತ ಚೀಟಿ ಹೊಂದಿರುವವರಿಗೆ ಮಾತ್ರ ಈ ಗ್ಯಾರೆಂಟಿ ಸೌಲಭ್ಯಗಳು ದೊರೆಯುವ ಸಾಧ್ಯತೆ ಇದೆ. 

ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಹ ಬಿ‍ಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ನಾಗರಿಕರು ಮುಂದಾಗುತ್ತಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಪಡಿತರ ಚೀಟಿಗಳನ್ನು ಸ್ವೀಕರಿಸುತ್ತಿರಲಿಲ್ಲ. ಮೇ 13ರ ಫಲಿತಾಂಶದ ನಂತರ ಇಲಾಖೆಯು ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸ್ವೀಕರಿಸುತ್ತಿದೆ. 

ಜಿಲ್ಲೆಯಲ್ಲಿ ಮೇ 23ರವರೆಗೆ 16,952 ಮಂದಿ ಹೊಸ ಪಡಿತರ ಚೀಟಿಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇವುಗಳಲ್ಲಿ 7,097 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 4,164 ಅರ್ಜಿಗಳು ತಿರಸ್ಕೃತವಾಗಿವೆ. 5,691 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಈಗ ಜಿಲ್ಲೆಯಲ್ಲಿ ಆಹಾರ ಇಲಾಖೆ ಹೊಸ ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಆದರೆ ಅವುಗಳ ವಿಲೇವಾರಿ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ ಎಂದು ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಮೂಲಗಳು ತಿಳಿಸುತ್ತವೆ.

ಕಳೆದ ವರ್ಷದಿಂದಲೂ ಸ್ವೀಕರಿಸಿರುವ ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಈಗ ಮತ್ತಷ್ಟು ಅರ್ಜಿಗಳು ಸೇರುತ್ತಿವೆ. ಜಿಲ್ಲೆಯಲ್ಲಿ ಕಳೆದ ವರ್ಷದಿಂದ ಇಲ್ಲಿಯವರೆಗೂ ಸಲ್ಲಿಯಾಗಿರುವ ಒಟ್ಟು ಅರ್ಜಿಗಳಲ್ಲಿ ಶೇ 66.43ರಷ್ಟು ಅರ್ಜಿಗಳನ್ನು ಇಲಾಖೆ ವಿಲೇವಾರಿ ಮಾಡಿದೆ. 

ಬಾಗೇಪಲ್ಲಿ ತಾಲ್ಲೂಕಿನಲ್ಲಿ ಶೇ 66.23, ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಶೇ 67, ಚಿಂತಾಮಣಿ ಶೇ 65.49,
ಗೌರಿಬಿದನೂರು ಶೇ 65.69, ಗುಡಿಬಂಡೆ ಶೇ 68.80 ಮತ್ತು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶೇ 67.33ರಷ್ಟು ಅರ್ಜಿಗಳು ವಿಲೇವಾರಿ ಆಗಿವೆ. 

ಪ್ರತಿ ಮನೆಯ ಯಜಮಾನಿಗೆ ಮಾಸಿಕ ₹ 2 ಸಾವಿರ, ಮಹಿಳೆಯರಿಗೆ ಬಸ್ ಪಾಸ್ ಉಚಿತ, 10 ಕೆ.ಜಿ ಅಕ್ಕಿ, ಡಿಪ್ಲೊಮಾ ಪದವೀಧರರಿಗೆ ಮಾಸಿಕ ₹ 3 ಸಾವಿರ ನಿರುದ್ಯೋಗ ಭತ್ಯೆ, ಪದವೀಧರರಿಗೆ ₹ 1.500 ನಿರುದ್ಯೋಗ ಭತ್ಯೆ, ಪ್ರತಿ ಕುಟುಂಬಕ್ಕೆ 200 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಈ ಗ್ಯಾರೆಂಟಿಗಳನ್ನು ಜಾರಿಗೊಳಿಸುವಂತೆ ನಾಗರಿಕರು ಮತ್ತು ವಿರೋಧ ಪಕ್ಷಗಳು ಒತ್ತಾಯಿಸುತ್ತಿದ್ದಾರೆ. 

ಈ ಗ್ಯಾರೆಂಟಿಗಳ ಜಾರಿಗೆ ಬಿಪಿಎಲ್ ಕಾರ್ಡ್ ಮಾನದಂಡವಾಗುವ ಸಾಧ್ಯತೆ ಹೆಚ್ಚಿದೆ. ಈ ಕಾರಣದಿಂದ ಈ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಸಹ ಹೆಚ್ಚಾಗುವ ಸಾಧ್ಯತೆ ಇದೆ.

ಸವಿತಾ
ಸವಿತಾ

ಅರ್ಜಿ ಸ್ವೀಕಾರ ಕಳೆದ ವರ್ಷದಿಂದ ಈ ವರ್ಷದ ಮೇ 23ರವರೆಗೆ ಜಿಲ್ಲೆಯಲ್ಲಿ 16952 ಅರ್ಜಿಗಳನ್ನು ಹೊಸ ಪಡಿತರ ಚೀಟಿ ನೀಡಲು ಸ್ವೀಕರಿಸಲಾಗಿದೆ. ಚುನಾವಣೆ ಕಾರಣದಿಂದ ಹೊಸ ಅರ್ಜಿಗಳನ್ನು ಸ್ವೀಕರಿಸುತ್ತಿರಲಿಲ್ಲ. ಈಗ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಆದರೆ  ವಿಲೇವಾರಿ ತಿರಸ್ಕಾರ ಸೇರಿದಂತೆ ಯಾವುದೇ ಪ್ರಕ್ರಿಯೆಗಳು ಇನ್ನು ನಡೆಯುತ್ತಿಲ್ಲ  ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕಿ ಪಿ.ಸವಿತಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT