ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಧಾಕರ್ ಅಣತಿಯಂತೆ ಪೊಲೀಸರು’

ಚಿಕ್ಕಬಳ್ಳಾಪುರ ನಗರ ಠಾಣೆ ಎದುರು ಪ್ರತಿಭಟನೆ; ಕಾಂಗ್ರೆಸ್ ಮುಖಂಡರ ಆರೋಪ
Last Updated 9 ಮೇ 2022, 14:39 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಕಾರ್ಯಕರ್ತ ಸಂತೋಷ್ ರಾಜು ಬಂಧನಕ್ಕೆ ಆಕ್ರೋಶ ವ್ಯಕ್ತಪಡಿಸಿ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮುಂಭಾಗ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸೋಮ‌ವಾರ ಪ್ರತಿಭಟಿಸಿದರು.ಚಿಕ್ಕಬಳ್ಳಾಪುರ–ಗೌರಿಬಿದನೂರು ರಸ್ತೆ ತಡೆ ನಡೆಸಿದರು.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಣತಿಯಂತೆ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಸಚಿವರ ಕೈಗೊಂಬೆ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ನಿಷ್ಪಕ್ಷಪಾತವಾಗಿಲ್ಲ ಎಂದು ಹರಿಹಾಯ್ದರು.

ಏನಿದು ಪ್ರಕರಣ: ನಗರಸಭೆಯ ವಾರ್ಡ್‌ ನಂ 27ರ ಕಾಂಗ್ರೆಸ್ ಸದಸ್ಯೆ ವಿ.ನೇತ್ರಾವತಿ ಅವರ ‍ಪತಿ ರಾಘವೇಂದ್ರ ಅವರ ಸಹೋದರ ಸಂತೋಷ್ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಮೇ 14 ಮತ್ತು‌ 15ರಂದು ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಮೇಳೆ ಹಮ್ಮಿಕೊಳ್ಳಲಾಗಿದೆ.

‘ಈಗ ಮಾಡುತ್ತಿದ್ದಾರಲ್ಲ 14, 15ಕ್ಕೆ ಕ್ಯಾಂಪು, ಕಲುಷಿತ ನೀರಿನಿಂದ ಕ್ಯಾನ್ಸರ್, ಪ್ಲೋರೈಡ್ ಬಂದಿದೆಯಾ ಎಂದು ರಕ್ತ ಪರೀಕ್ಷೆ ಮಾಡುತ್ತಿದ್ದಾರೆ’ ಎಂದು ಸಂತೋಷ್ ವಿಡಿಯೊವೊಂದರಲ್ಲಿ ಹೇಳಿದ್ದಾರೆ. ಈ ವಿಡಿಯೊವನ್ನು ಅನಿಲ್ ಎಂಬಾತ ಮಾಡಿದ್ದಾರೆ ಎನ್ನಲಾಗುತ್ತಿದೆ.

ವಿಡಿಯೊ ಆಧರಿಸಿ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಸಂತೋಷ್ ವಿರುದ್ಧ ಅನಿಲ್ ದೂರು ನೀಡಿದ್ದಾರೆ. ಪೊಲೀಸರು ಸಂತೋಷ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಇದು ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಈ ನಡುವೆ ವೆಂಕಟ್ ಎಂಬುವವರು ಅನಿಲ್ ವಿರುದ್ಧ ಜಾತಿ ನಿಂದನೆಯಡಿ ಪ್ರಕರಣ ದಾಖಲಿಸಿದ್ದಾರೆ. ಸಂತೋಷ್ ಬಂಧಿಸಿದಂತೆಯೇ ಅನಿಲ್‌ನನ್ನೂ ಪೊಲೀಸರು ಬಂಧಿಸಿ ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಪಟ್ಟು ಹಿಡಿದಿದ್ದಾರೆ.

ರಾತ್ರಿಯೇ ಠಾಣೆಗೆ ಬಂದ ಮುಖಂಡರು: ಭಾನುವಾರ ರಾತ್ರಿ ಪೊಲೀಸರು ಸಂತೋಷ್‌ ಅವರನ್ನು ಬಂಧಿಸಿದ್ದಾರೆ. ಕೆಪಿಸಿಸಿ ಸದಸ್ಯ ವಿನಯ್ ಶ್ಯಾಮ್ ನೇತೃತ್ವದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ರಾತ್ರಿಯೇ ಠಾಣೆಯ ಬಳಿ ಬಂದಿದ್ದಾರೆ. ಪೊಲೀಸರು ಮತ್ತು ಮುಖಂಡರ ನಡುವೆ ಜಟಾಪಟಿ ಸಹ ನಡೆದಿದೆ.

ಸೋಮವಾರ ಮತ್ತೆ ಠಾಣೆಗೆ ಬಂದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು, ‘ನಮಗೆ ನ್ಯಾಯ ದೊರೆಯುವವರೆಗೂ ಇಲ್ಲಿಂದ ಕದಲುವುದಿಲ್ಲ. ನಮ್ಮ ಮೇಲೆ ಏನಾದರ ಕ್ರಮಜರುಗಿಸಲಿ’ ಎಂದು ಠಾಣೆ ಆವರಣದಲ್ಲಿ ಮತ್ತು ಮುಂಭಾಗದ ರಸ್ತೆಯಲ್ಲಿ ಕುಳಿತರು. ಸಚಿವ ಸುಧಾಕರ್ ಮತ್ತು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಸಚಿವ ಸುಧಾಕರ್‌ಗೆ ಧಿಕ್ಕಾರ, ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ’ ಎಂದು ಘೋಷಣೆಗಳನ್ನು ಕೂಗಿದರು. ಈ ವೇಳೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಠಾಣೆಗೆ ಬಂದರು. ಕಾಂಗ್ರೆಸ್ ಮುಖಂಡ ಜತೆ ಮಾತುಕತೆ ನಡೆಸಿದರು. ತನಿಖೆ ನಡೆಸಿ ಯಾರದ್ದು ತಪ್ಪು ಇದೆಯೊ ಅವರ ವಿರುದ್ಧ ಕ್ರಮಜರುಗಿಸುವುದಾಗಿ ತಿಳಿಸಿದರು. ನಂತರ ಕಾರ್ಯಕರ್ತರು ಅಲ್ಲಿಂದ ಕದಲಿದರು.

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೇಶವರೆಡ್ಡಿ,ಕಾಂಗ್ರೆಸ್ ಮುಖಂಡರಾದ ಯಲುವಳ್ಳಿ ರಮೇಶ್, ಲಾಯರ್ ನಾರಾಯಣಸ್ವಾಮಿ, ಕೃಷ್ಣಪ್ಪ ಹನುಮಂತಪ್ಪ ಕೆಪಿಸಿಸಿ ಸದಸ್ಯರಾದ ವಿನಯ್ ಶ್ಯಾಮ್, ಮುನೇಗೌಡ, ಕಾರ್ಮಿಕ ವಿಭಾಗದ ಜಿಲ್ಲಾ ಅಧ್ಯಕ್ಷ ಕೋನಪ್ಪಲ್ಲಿ ಕೋದಂಡ, ಯುವ ಘಟಕದ ಅಧ್ಯಕ್ಷ ಮುಬಾಶಿರ್, ಅಡ್ಡಗಲ್ ಶ್ರೀಧರ್, ಮಾಜಿ ಶಾಸಕ ಎಸ್‌.ಎಂ.ಮುನಿಯಪ್ಪ, ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್, ಸಾಮಾಜಿಕ ಹೋರಾಟಗಾರ ನಂದಿ ಪುರುಷೋತ್ತಮ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

******

ಸಚಿವರ ವಿರುದ್ಧ ಅಪಪ್ರಚಾರ

ಸಚಿವ ಡಾ.ಕೆ.ಸುಧಾಕರ್ ಅವರು ತಮ್ಮ ಸಾಯಿ ಕೃಷ್ಣ ಚಾರಿಟಬಲ್ ಟ್ರಸ್ಟ್, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಆರೋಗ್ಯ ಮೇಳ ಹಮ್ಮಿಕೊಂಡಿದ್ದಾರೆ. ಮೇಳದಲ್ಲಿ ಭಾಗವಹಿಸುವ ಎಲ್ಲರೂ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.

ಹೀಗಿರುವಾಗ ಸಂತೋಷ್ ರಾಜು, ಸಚಿವ ಸುಧಾಕರ್ ಅವರ ಮೇಲಿನ ದ್ವೇಷದಿಂದ ಅಥವಾ ಹೊಟ್ಟೆ ಕಿಚ್ಚಿನಿಂದ ಆರೋಗ್ಯ ಮೇಳವನ್ನು ಹಾಳುಗೆಡವುವ ದುರುದ್ದೇಶದಿಂದ ಸಚಿವರ ವಿರುದ್ದ, ಜಿಲ್ಲಾಡಳಿತದ ವಿರುದ್ದ ಹಾಗೂ ರಾಜ್ಯ ಸರ್ಕಾರದ ವಿರುದ್ದ ಅಪಪ್ರಚಾರ ಮಾಡುತ್ತಿರುತ್ತಾರೆ. ಚಿಕ್ಕಬಳ್ಳಾಪುರ ನಗರದಲ್ಲಿ ದಲಿತರು ವಾಸಿಸುವ ಪ್ರದೇಶಗಳಿಗೆ ಹೋಗಿ ಆರೋಗ್ಯ ಮೇಳದ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಹರಿ ಬಿಟ್ಟು ಸಾರ್ವಜನಿಕರ ಮನಸ್ಸಿನಲ್ಲಿ ಭೀತಿಯನ್ನು ಉಂಟು ಮಾಡಿದ್ದಾರೆ ಎಂದು ಅನಿಲ್ ಕುಮಾರ್ ದೂರು ನೀಡಿದ್ದು ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

***

ತನಿಖೆ ಪ್ರಗತಿಯಲ್ಲಿದೆ

ಯಾರು ಈ ವಿಡಿಯೊ ರೆಕಾರ್ಡ್ ಮಾಡಿದ್ದಾರೆ, ಯಾವಾಗ ಮಾಡಿದ್ದಾರೆ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಯಾವ ಉದ್ದೇಶದಿಂದ ವಿಡಿಯೊ ಮಾಡಿದರು ಎನ್ನುವುದು ತನಿಖೆಯಿಂದ ತಿಳಿಯಲಿದೆ. ಪ್ರಕರಣವು ತನಿಖೆಯ ಹಂತದಲ್ಲಿ ಇದೆ.

ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

***

ಸುಧಾಕರ್ ನೇರ ಹೊಣೆ

ಬಿಜೆಪಿ ಕಾರ್ಯಕರ್ತರಿಗೆ ಒಂದು ನ್ಯಾಯ ಕಾಂಗ್ರೆಸ್ ಕಾರ್ಯಕರ್ತರಿಗೆ ಒಂದು ನ್ಯಾಯ ಎನ್ನುವಂತೆ ಇದೆ. ದೂರು ಕೊಟ್ಟ ತಕ್ಷಣ ನಮ್ಮ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ಮಾಡುವರು. ಆದರೆ ನಾವು ದೂರು ಕೊಟ್ಟರೆ ಕ್ರಮ ಜರುಗಿಸುವುದಿಲ್ಲ. ಇದಕ್ಕೆ ನೇರ ಹೊಣೆ ಸಚಿವ ಡಾ.ಕೆ.ಸುಧಾಕರ್ ನೇರ ಹೊಣೆ.

ವಿನಯ್ ಶ್ಯಾಮ್, ಕೆಪಿಸಿಸಿ ಸದಸ್ಯ

***

ಸುಧಾಕರ್ ಕ್ಷಮೆ ಕೇಳಿದರೆ ಮುಕ್ತಿ

ಸುಧಾಕರ್ ಕ್ಷಮೆ ಕೇಳಿದರೆ ನಿಮ್ಮನ್ನು ಪ್ರಕರಣದಿಂದ ಮುಕ್ತಗೊಳಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸಂತೋಷ್‌ಗೆ ಹೇಳಿದ್ದಾರಂತೆ.ಪೊಲೀಸರು ಕಾನೂನು ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ಸುಧಾಕರ್ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ. ಅವರು ಹೇಳಿದವರ ಮೇಲೆ ಪ್ರಕರಣ ದಾಖಲಿಸುತ್ತಿದ್ದಾರೆ.

ಕಾಂಗ್ರೆಸ್‌ನವರು ದೂರು ನೀಡಿದರೆ ಯಾವುದೇ ಕ್ರಮವಹಿಸುವುದಿಲ್ಲ.ಸಂತೋಷ್ ತನ್ನ ಮೊಬೈಲ್‌ನಲ್ಲಿ ದೃಶ್ಯಗಳನ್ನು ಚಿತ್ರೀಕರಿಸಿಲ್ಲ. ಹೀಗೆ ವಿಡಿಯೊ ಮಾಡಿದವರ ಮೇಲೆ ಪೊಲೀಸರು ಕ್ರಮಜರುಗಿಸಬೇಕಾಗಿತ್ತು. ಅನಿಲ್ ವಿರುದ್ಧ ಪ್ರಕರಣ ದಾಖಲಿಸುವುದನ್ನು ಬಿಟ್ಟು ಸಂತೋಷ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಲಾಯರ್ ನಾರಾಯಣಸ್ವಾಮಿ, ಕಾಂಗ್ರೆಸ್ ಮುಖಂಡ

ಮುಂದಿನ ಹೋರಾಟ ಶೀಘ್ರ ನಿರ್ಧಾರ

ಪ್ರಕರಣದ ಬಗ್ಗೆ ಎಸ್‌ಪಿ ಜತೆ ಮುಖಂಡರು ಮಾತನಾಡಿದ್ದೇವೆ.ಸಂತೋಷ್ ಮೇಲೆ ಪ್ರಕರಣ ದಾಖಲಿಸಿರುವುದು ಸರಿ ಇಲ್ಲ ಎಂದಿದ್ದೆವೆ. ಅನಿಲ್ ಎಂಬುವವರು ವೆಂಕಟ್ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ. ಅನಿಲ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದೇವೆ. ಈ ಬಗ್ಗೆ ನಾಲ್ಕು ದಿನಗಳಲ್ಲಿ ತನಿಖೆ ನಡೆಸಿ ಕ್ರಮವಹಿಸುವುದಾಗಿ ಎಸ್‌ಪಿ ತಿಳಿಸಿದ್ದಾರೆ. ಆ ತರುವಾಯ ನಾವು ಮುಂದಿನ ಹೋರಾಟವನ್ನು ಯಾವ ರೀತಿ ಮಾಡಬೇಕು ಎನ್ನುವುದನ್ನು ನಿರ್ಧರಿಸುತ್ತೇವೆ.

ಕೇಶವರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT