ಭಾನುವಾರ, ಏಪ್ರಿಲ್ 5, 2020
19 °C
ಕಳೆದ ಒಂದು ವಾರದಿಂದ ನಡೆಯದ ರಕ್ತದಾನ ಶಿಬಿರಗಳು, ಅಪರೂಪದ ಗುಂಪುಗಳ ರಕ್ತದ ಕೊರತೆ

ಕೊರೊನಾ ವೈರಸ್ ಭೀತಿ: ರಕ್ತದಾನಕ್ಕೆ ಹಿಂದೇಟು ಹಾಕುತ್ತಿರುವ ಜನರು

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಎಲ್ಲೆಡೆ ಭಯ, ತಲ್ಲಣ ಸೃಷ್ಟಿಸಿರುವ ಮಾರಣಾಂತಿಕ ಕೊರೊನಾ ವೈರಸ್‌ ಸೋಂಕಿನ ಭೀತಿ ಇದೀಗ ಜಿಲ್ಲೆಯಲ್ಲಿ ರಕ್ತದ ಕೊರತೆ ಉಂಟು ಮಾಡಿ, ರೋಗಿಗಳನ್ನು ಸಂಕಟಕ್ಕೆ ಈಡು ಮಾಡುವ ಸನ್ನಿವೇಶ ಸೃಷ್ಟಿಸುತ್ತಿದೆ.

ಮೊದಲೇ ಪರೀಕ್ಷೆ ಋತುವಿನಿಂದಾಗಿ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾ ಶಾಖೆ ಜಿಲ್ಲೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲು ಕಷ್ಟ ಎದುರಿಸುತ್ತಿತ್ತು. ಇದೀಗ ಗಾಯದ ಮೇಲೆ ಬರೆ ಎಳೆದಂತೆ ದಿಢೀರ್‌ ಕಾಣಿಸಿಕೊಂಡ ಕೊರೊನಾ ಭೀತಿ ಕಳೆದ ಒಂದು ವಾರದಿಂದ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗದ ಸ್ಥಿತಿ ನಿರ್ಮಾಣ ಮಾಡಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ರಕ್ತದ ಕೊರತೆ ಕಾಣಿಸಿಕೊಳ್ಳಲು ಆರಂಭಿಸಿದೆ.

ಸಾಮಾನ್ಯ ದಿನಗಳಲ್ಲಿ ರಾಜಕಾರಣಿಗಳು, ಚಿತ್ರನಟರ ಜನ್ಮದಿನದಂದು ಬೆಂಬಲಿಗರು, ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರ ಆಯೋಜಿಸುತ್ತಿದ್ದರು. ಇದೀಗ ಸೋಂಕು ಹರಡುವ ಭೀತಿಯಿಂದಾಗಿ ರಕ್ತದಾನ ಶಿಬಿರಗಳನ್ನು ಮುಂದೂಡಲಾಗುತ್ತಿದೆ. ಇದು ಸಹಜವಾಗಿಯೇ ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾ ಶಾಖೆಯ ರಕ್ತ ನಿಧಿಯ ಸಂಗ್ರಹದ ಮೇಲೆ ಪರಿಣಾಮ ಬೀರುತ್ತಿದೆ.

ಸದ್ಯ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾ ಶಾಖೆಯ ರಕ್ತ ನಿಧಿಯಲ್ಲಿ ನಾಲ್ಕೈದು ದಿನಗಳಿಗೆ ಪೂರೈಸಬಹುದಾದಷ್ಟು ಮಾತ್ರ ರಕ್ತ ಸಂಗ್ರಹವಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ರಕ್ತದ ಅಗತ್ಯ ಉಳ್ಳವರ ಜೀವಕ್ಕೆ ಕುತ್ತು ಬರುವ ಅಪಾಯವಿದೆ ಎನ್ನುವ ಆತಂಕ ವ್ಯಕ್ತವಾಗುತ್ತಿದೆ.

ಜಿಲ್ಲೆಯಲ್ಲಿ ಸಾಮಾನ್ಯ ದಿನಗಳಲ್ಲಿ ತಿಂಗಳಿಗೆ 700 ರಿಂದ 800 ಯೂನಿಟ್‌ ರಕ್ತ ಸಂಗ್ರಹವಾಗುತ್ತಿತ್ತು. ವಿಶೇಷ ದಿನಗಳಲ್ಲಿ ಸಾವಿರಕ್ಕೂ ಹೆಚ್ಚಿನ ಯೂನಿಟ್‌ ರಕ್ತ ಸಂಗ್ರಹವಾಗುತ್ತಿತ್ತು. ಕೊರೊನಾ ಭೀತಿಯಿಂದಾಗಿ ಇತ್ತೀಚೆಗೆ ಆಯೋಜಿಸಲು ಉದ್ದೇಶಿಸಿದ್ದ ಎರಡು ಬೃಹತ್ ರಕ್ತದಾನ ಶಿಬಿರಗಳು ರದ್ದುಗೊಂಡವು.

ಇನ್ನೊಂದೆಡೆ ಜನರು ಪ್ರಾಣಭೀತಿಯಿಂದ ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗುತ್ತಿಲ್ಲ. ಹೀಗಾಗಿ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಅಪರೂಪದ ಗುಂಪುಗಳ ರಕ್ತದ ಕೊರತೆ ಮತ್ತಷ್ಟು ಸಮಸ್ಯೆ ಸೃಷ್ಟಿಸುತ್ತಿದೆ ಎನ್ನಲಾಗಿದೆ.

‘ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾ ಶಾಖೆಯ ರಕ್ತನಿಧಿಯಲ್ಲಿ ಒಂದು ತಿಂಗಳಿಗೆ ಸುಮಾರು 1,000 ಯೂನಿಟ್‌ ರಕ್ತದ ಬೇಡಿಕೆ ಇರುತ್ತದೆ. ನಿತ್ಯ ಸರಾಸರಿ 30 ರಿಂದ 40 ಯೂನಿಟ್‌ ರಕ್ತಕ್ಕೆ ಬೇಡಿಕೆ ಬರುತ್ತದೆ. ಆದರೆ, ಸದ್ಯದ ಸ್ಥಿತಿಯಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗದೆ, ರಕ್ತ ಸಂಗ್ರಹದಲ್ಲಿ ಕೊರತೆ ಉಂಟಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಕಷ್ಟವಾಗಲಿದೆ. ಆದ್ದರಿಂದ, ಜನರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ರಕ್ತದಾನ ಮಾಡಬೇಕು’ ಎಂದು ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾ ಶಾಖೆ ಕಾರ್ಯದರ್ಶಿ ಗುರುರಾಜ್ ಮನವಿ ಮಾಡಿದರು.

‘ಜಿಲ್ಲೆಯಲ್ಲಿ ಕಾಲೇಜುಗಳು, ಕಾರ್ಖಾನೆಗಳು, ವಿವಿಧ ಸಂಘಟನೆಗಳ ಸಹಯೋಗದಲ್ಲಿ, ತಾಲ್ಲೂಕು ಮಟ್ಟದಲ್ಲಿ ಹೀಗೆ ತಿಂಗಳಿಗೆ ಸುಮಾರು 10 ರಿಂದ 12 ರಕ್ತದಾನ ಶಿಬಿರಗಳನ್ನು ಆಯೋಜಿಸಿ, ಸರಾಸರಿ 800 ಯೂನಿಟ್‌ ರಕ್ತ ಸಂಗ್ರಹಿಸಲಾಗುತ್ತದೆ. ಕಳೆದ ಒಂದು ವಾರದಿಂದ ಶಿಬಿರಗಳನ್ನು ಆಯೋಜಿಸಲು ಸಾಧ್ಯವಾಗಲಿಲ್ಲ. ಜತೆಗೆ ಜನರು ಸ್ವಯಂಪ್ರೇರಿತರಾಗಿ ಮುಂದೆ ಬಂದು ರಕ್ತದಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಸದ್ಯ ರಕ್ತದ ಕೊರತೆ ಕಾಣಿಸಿಕೊಳ್ಳುತ್ತಿದೆ’ ಎನ್ನುತ್ತಾರೆ ಜಿಲ್ಲಾ ಶಾಖೆಯ ಖಜಾಂಚಿ ಜಯರಾಂ.

‘ನಮ್ಮಲ್ಲಿ ಒಂದು ಯೂನಿಟ್ ರಕ್ತಕ್ಕೆ ₹ 600 ಪಡೆಯಲಾಗುತ್ತದೆ. ಏಡ್ಸ್‌ ಸೇರಿದಂತೆ ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುವವರಿಗೆ ಉಚಿತವಾಗಿ ರಕ್ತ ನೀಡಲಾಗುತ್ತದೆ. ಖಾಸಗಿಯವರು ಒಂದು ಯೂನಿಟ್‌ ರಕ್ತಕ್ಕೆ ₹ 1,200ಕ್ಕೂ ಅಧಿಕ ಪಡೆಯುತ್ತಾರೆ. ಹೀಗಾಗಿ ನಮ್ಮಲ್ಲಿ ರಕ್ತಕ್ಕೆ ಬೇಡಿಕೆ ಹೆಚ್ಚು. ಆದರೆ, ಸದ್ಯ ಜಿಲ್ಲಾ ರಕ್ತ ನಿಧಿಯಲ್ಲಿ ನಾಲ್ಕೈದು ದಿನಗಳಿಗೆ ಆಗುವಷ್ಟು ರಕ್ತ ಸಂಗ್ರಹವಿದೆ. ಶೀಘ್ರದಲ್ಲಿಯೇ ರಕ್ತದಾನ ಶಿಬಿರಗಳು ನಿಗದಿಯಾಗಿವೆ. ಅದಕ್ಕೂ ಮೊದಲು ಈ ಭೀತಿ ತೊಲಗಬೇಕಿದೆ’ ಎಂದು ತಿಳಿಸಿದರು.

ಜಿಲ್ಲಾ ರಕ್ತನಿಧಿಯಲ್ಲಿರುವ ರಕ್ತ ಸಂಗ್ರಹದ ವಿವರ

ಗುಂಪು;                      ಯೂನಿಟ್

‘ಎ’ ನೆಗೆಟಿವ್;              2
‘ಎ.ಬಿ’ ಪಾಸಿಟಿವ್;       3
‘ಬಿ’ ನೆಗೆಟಿವ್;              4
‘ಎ.ಬಿ’ ನೆಗೆಟಿವ್;         5
‘ಎ’ ಪಾಸಿಟಿವ್;          20
‘ಬಿ’ ಪಾಸಿಟಿವ್;         121
‘ಒ’ ಪಾಸಿಟಿವ್;         130

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು