ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಪಿಎಂ ಜಿಲ್ಲಾ ಸಮಿತಿ ಆರೋಪಗಳಿಗೆ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ತಿರುಗೇಟು

ಕೆಲವರ ಕುತಂತ್ರವೇ ಉಚ್ಚಾಟನೆಗೆ ಕಾರಣ
Last Updated 11 ಜುಲೈ 2020, 13:07 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಸಿಪಿಎಂ ಸಂಘಟನೆಯ ವಿಚಾರ ಕುರಿತು ಪ್ರಶ್ನಿಸಿದ್ದೇ ತನಗೆ ಮುಳುವಾಯಿತು. ಜಿಲ್ಲೆಯ ಕೆಲ ಸಮಯ ಸಾಧಕರ ಕುತಂತ್ರವೇ ನನ್ನನ್ನು ಸಿಪಿಎಂನಿಂದ ಉಚ್ಚಾಟಿಸಲು ಮುಖ್ಯ ಕಾರಣ. ಉಚ್ಚಾಟನೆ ಬಗ್ಗೆ ಬೇಸರವಿಲ್ಲ’ ಎಂದು ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನರೇಂದ್ರ ಮೋದಿ ಅವರು ಪ್ರಧಾನಿಯಾದ ದಿನದಿಂದಲೂ ದೇಶ ಅಪಾಯಕಾರಿ ಸ್ಥಿತಿಗೆ ತಲುಪುತ್ತಿದೆ. ಅದಕ್ಕಾಗಿ ಸಿಪಿಎಂ ಮಡಿವಂತಿಕೆ ಬದಿಗಿಟ್ಟು ಬಿಜೆಪಿಯ ವಿರೋಧ ಪಕ್ಷಗಳನ್ನು ಒಗ್ಗೂಡಿಸಿ ಸಂಘಟಿತ ಹೋರಾಟ ನಡೆಸಬೇಕು ಎಂದು ನಾನು ಸಿಪಿಎಂ ಕೇಂದ್ರ ಸಮಿತಿ ಸಭೆಯಲ್ಲಿ ವ್ಯಕ್ತಪಡಿಸುತ್ತಿದ್ದ ನಿಲುವಿನಿಂದಾಗಿ ಪಕ್ಷದಲ್ಲಿ ರಾಜಕೀಯ ಭಿನ್ನಾಭಿಪ್ರಾಯ ಕಾಣಿಸಿಕೊಂಡಿತ್ತು’ ಎಂದು ತಿಳಿಸಿದರು.

‘ನಾನು ವಿದ್ಯಾರ್ಥಿ ದೆಸೆಯಿಂದಲೂ ಆರ್‌ಎಸ್‍ಎಸ್, ಬಿಜೆಪಿಯ ಸಿದ್ದಾಂತಗಳ ವಿರುದ್ಧ ಹೋರಾಡುತ್ತ ಬಂದವನು. ಅದಕ್ಕಾಗಿ ನನ್ನ ಕೊಲೆ ಪ್ರಯತ್ನ ಕೂಡ ನಡೆದಿದೆ. 50 ವರ್ಷಗಳ ರಾಜಕೀಯ ಜೀವನದಲ್ಲಿ ಕೋಮುವಾದಿ ಪಕ್ಷಗಳ ಕುರಿತು ಸ್ಪಷ್ಟ ತಿಳುವಳಿಕೆ ಹೊಂದಿರುವ ನಾನು ಬಾಗೇಪಲ್ಲಿ ಎಪಿಎಂಸಿ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಿರುವೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು’ ಎಂದರು.

‘ಯಕಶ್ಚಿತ ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿ ಜತೆ ಕೈಜೋಡಿಸಿವೆ ಎಂದು ಆರೋಪಿಸಿ ಸಿಪಿಎಂನಿಂದ ನನ್ನನ್ನು ಉಚ್ಚಾಟಿಸಿರುವುದು ಪಕ್ಷಕ್ಕೆ ಶೋಭೆ ತರುವ ವಿಚಾರವಲ್ಲ. ರಾಜಕೀಯ ನಿವೃತ್ತಿಯಾಗುತ್ತೇನೆ ಹೊರತು ಎಂದಿಗೂ ಕೋಮುವಾದಿಗಳೊಂದಿಗೆ ಕೈಜೋಡಿಸುವುದಿಲ್ಲ’ ಎಂದು ಹೇಳಿದರು.

‘ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ನನ್ನ ಅಭಿವೃದ್ಧಿ ಕಾರ್ಯಗಳು, ಸಾಧನೆಗಳು ಏನು ಎಂಬುದು ರಾಜ್ಯದ ಜನರಿಗೆ ತಿಳಿದಿದೆ. ಆದ್ದರಿಂದ ಕೆಲ ಸಮಯ ಸಾಧಕರು ನನ್ನ ಬಗ್ಗೆ ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ. ಕೊನೆವರೆಗೂ ಮಾರ್ಕ್ಸ್‌ವಾದಿಯಾಗಿಯೇ ಬದುಕುವೆ ವಿನಾ ಬೇರೆ ಸಿದ್ಧಾಂತಗಳೊಂದಿಗೆ ರಾಜಿಯಾಗುವ ಪ್ರಶ್ನೆಯೇ ಇಲ್ಲ’ ಎಂದು ತಿಳಿಸಿದರು.

‘ಏನೇ ಆಗಲಿ ಜನರಿಗಾಗಿ ಸದಾ ರಾಜಕಾರಣ, ಹೋರಾಟ ಮಾಡುವೆ. ಮುಂದಿನ ದಿನಗಳಲ್ಲಿ ಬೆಂಬಲಿಗರೊಂದಿಗೆ ಸಮಾವೇಶ ನಡೆಸಿ ಹೋರಾಟಗಳ ರೂಪುರೇಷೆಗಳನ್ನು ಸಿದ್ಧಪಡಿಸುವೆ. ಕ್ಷೇತ್ರದ ಜನತೆ ಬಯಸಿದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿಯೂ ಸ್ಪರ್ಧಿಸುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಿಪಿಎಂ ಮುಖಂಡರಾದ ಚನ್ನರಾಯಪ್ಪ, ರಾಜು, ಎಲ್.ವೆಂಕಟೇಶ್, ರಾಮಕೃಷ್ಣಪ್ಪ, ಚಂದ್ರಶೇಖರರೆಡ್ಡಿ, ಫಯಾಜ್, ಬಾಷಾಸಾಬ್, ರಮಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT